ಕನ್ನಡಪ್ರಭ ವಾರ್ತೆ ಉಡುಪಿ
ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಂಡಿಸಿದ ಲೋಕಸಭಾ ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿ ವಿಧೇಯಕಗಳಿಗೆ ವಿಪಕ್ಷಗಳ ಬೆಂಬಲ ಇಲ್ಲದೇ ಸೋಲಾಗಿರಬಹುದು, ಆದರೆ ಪ್ರಧಾನಿ ನರೇಂದ್ರ ಮೋದಿ ಈ ವಿಧೇಯಕಗಳನ್ನು ಯಾವುದಾದರೊಂದು ರೀತಿಯಲ್ಲಿ ಜಾರಿಗೆ ತಂದೇ ತರುತ್ತಾರೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭರವಸೆ ವ್ಯಕ್ತಪಡಿಸಿದರು.ಅವರು ಮಂಗಳವಾರ ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಈ ವಿಧೇಯಕಗಳನ್ನು ಜಾರಿಗೊಳಿಸಿದರೆ ಅದರ ಶ್ರೇಯಸ್ಸು ಮೋದಿಗೆ ಸಲ್ಲುತ್ತದೆ ಎನ್ನುವ ಕಾರಣಕ್ಕೆ ಮತ್ತು ಮಹಿಳೆಯರಿಗೆ ಮೀಸಲಾತಿ ನೀಡದಿದ್ದರೇ ತಮಗೇನೂ ನಷ್ಟ ಇಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ವಿಧೇಯಕಗಳನ್ನು ಸೋಲಿಸಿದವು, ಇದರಿಂದ ಸಂವಿಧಾನ ಹೇಳಿದಂತೆ ಮಹಿಳೆಯರಿಗೆ ಸಮಾನ ನ್ಯಾಯ ಸಿಗುವ ಸುವರ್ಣ ಅವಕಾಶ ತಪ್ಪಿ ಹೋಯಿತು ಎಂದವರು ಆರೋಪಿಸಿದರು.ಬಿಜೆಪಿ ಸರ್ಕಾರವು ರಾಮಮಂದಿರ ನಿರ್ಮಾಣ ಮಾಡುವಾಗ ಕಾಂಗ್ರೆಸ್ ಮಿತ್ರಕೂಟ ವಿರೋಧ ಮಾಡುವುದು ನಿರೀಕ್ಷಿತವಾಗಿತ್ತು, ಏಕೆಂದರೆ ಅವರಿಗೆ ರಾಮ ಮಂದಿರ ನಿರ್ಮಾಣವಾಗುವುದು ಬೇಕಿರಲಿಲ್ಲ, ಪೌರತ್ವ ಕಾಯ್ದೆ ತಿದ್ದುಪಡಿಗೆ ವಿರೋಧ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು, ಕಲಂ 370 ತಿದ್ದುಪಡಿಗೆ ವಿರೋಧಿಸುತ್ತಾರೆ ಎಂದು ನಿರೀಕ್ಷೆ ಇತ್ತು, ಯಾಕೆಂದರೆ ಅವರಿಗೆ ಭಯೋತ್ಪಾದನೆ ನಿಗ್ರಹಿಸುವುದು ಇಷ್ಟ ಇರಲಿಲ್ಲ, ಆದರೆ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧ ಮಾಡುತ್ತಾರೆ ಎನ್ನುವ ನಿರೀಕ್ಷೆ ಇರಲಿಲ್ಲ, ಆದರೂ ವಿರೋಧಿಸಿದರು. ಈಗ ಮಹಿಳಾ ಮೀಸಲಾತಿಯ ವಿಧೇಯಕವನ್ನು ಅದರ ಜೊತೆ ಕ್ಷೇತ್ರ ಮರುವಿಂಗಡಣೆ ಇಲ್ಲದಿರುತ್ತಿದ್ದರೆ ಒಪ್ಪುತ್ತಿದ್ದೆವು ಎನ್ನುತ್ತಿದ್ದಾರೆ, ಆದರೆ ಅವೆರಡೂ ಪೂರಕವಾಗಿವೆ. ಕೆಲವು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಬಿಜೆಪಿ ಈ ವಿಧೇಯಕಗಳನ್ನು ಮಂಡಿಸಿವೆ ಎಂದು ಆರೋಪಿಸುತ್ತಿದ್ದಾರೆ, ದೇಶದಲ್ಲಿ ಚುನಾವಣೆಗಳು ನಡೆಯದ ಸಮಯವೇ ಇಲ್ಲ, ಒಂದಲ್ಲ ಒಂದು ರಾಜ್ಯದಲ್ಲಿ ಚುನಾವಣೆಗಳು ನಡೆಯುತ್ತಲೇ ಇರುತ್ತವೆ ಎಂದು ಕೋಟ ಹೇಳಿದರು.ದೇಶದಲ್ಲಿ 10 ಲಕ್ಷ ಮತದಾರರಿಗೊಂದರಂತೆ ಲೋಕಸಭಾ ಕ್ಷೇತ್ರಗಳನ್ನು ವಿಂಗಡಿಸಲಾಗಿತ್ತು, ಈಗ ಕೆಲವು ಕ್ಷೇತ್ರಗಳಲ್ಲಿ 28 - 33 ಲಕ್ಷ ಮತದಾರರಿದ್ದಾರೆ, ಎಲ್ಲಾ ಮತದಾರರನ್ನು ಸಂಸದರು ತಲುಪುದು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಮರುವಿಂಗಡಣೆ ಮಾಡಲೇಬೇಕಾಗಿದೆ ಎಂದವರು ಹೇಳಿದರು.ಪಕ್ಷದ ಪ್ರಮುಖ ನಾಯಕಿಯರಾದ ಸಂಧ್ಯಾ ರಮೇಶ್, ಶ್ಯಾಮಲಾ ಕುಂದರ್, ಗೀತಾಂಜಲಿ ಸುವರ್ಣ, ವೀಣಾ ಎಸ್. ಶೆಟ್ಟಿ, ಶಿಲ್ಪಾ ಸುವರ್ಣ, ಪ್ರಿಯದರ್ಶಿನಿ, ಅನಿತಾ ಮತ್ತು ದಿವಾಕರ ಶೆಟ್ಟಿ ಇದ್ದರು.