ಸಾರಾಂಶ
ವಿಜಯಪುರ : ನಾನು ನೀರಾವರಿ ಮಂತ್ರಿ ಇದ್ದ ಸಂದರ್ಭದಲ್ಲೂ ಇಂತಹ ಸಚಿವ ಸಂಪುಟ ಸಭೆಯನ್ನು ಈ ಹಿಂದೆಯೂ ಮಾಡಿದ್ದೇವೆ. ಆಗಲೂ ನಮ್ಮ ಕುರ್ಚಿ ಅಲ್ಲಾಡಿಲ್ಲ, ಈಗಲೂ ಅಲ್ಲಾಡುತ್ತಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಸಿಎಂ ಸಿದ್ದರಾಮಯ್ಯ ಕುರ್ಚಿ ಅಲುಗಾಡುತ್ತಿದೆಂದ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯ ಗಟ್ಟಿಯಾಗಿದ್ದಾರೆ. ಅವರ ಕುರ್ಚಿಯೂ ಗಟ್ಟಿಯಾಗಿದೆ. ಒಂದು ಬಿಜೆಪಿ ಪಕ್ಷದಲ್ಲಿ 20 ಪಕ್ಷಗಳಂತೆ ಬಣಗಳಾಗಿವೆ. ಬಿಜೆಪಿಯವರ ಖುರ್ಚಿ ಅಲ್ಲಾಡುತ್ತಿದೆ. ವಿಜಯೇಂದ್ರ ಬೇರೆಯವರ ಕುರ್ಚಿ ಬಗ್ಗೆ ಯೋಚಿಸದೇ, ಕಾಲು ಕಳೆದುಕೊಂಡಿರುವ ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ಖರ್ಗೆಯರನ್ನು ಮೆಚ್ಚಿಸಲು ಕರೆದಿದ್ದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೈದ್ರಾಬಾದ್ ಕರ್ನಾಟಕ ರಾಜ್ಯದ ಅತ್ಯಂತ ಹಿಂದುಳಿದ ಭಾಗ. ಹಿಂದೆ ಇದೇ ವಿಜಯೇಂದ್ರ ಅವರ ಬಿಜೆಪಿ ಪಕ್ಷ ಆಡಳಿತದಲ್ಲಿ ಎಲ್.ಕೆ.ಅಡ್ವಾಣಿ ಅವರು ಕೇಂದ್ರ ಗೃಹ ಸಚಿವರಾಗಿ, ಉಪಪ್ರಧಾನಿಗಳಾಗಿದ್ದಾಗ 371ಜೆ ಕೊಡಲಿಕ್ಕೆ ಅಸಾಧ್ಯ ಎಂದು ಹೇಳಿದ್ದರು. ಅದನ್ನು ಸಾಧ್ಯ ಮಾಡಿಸಿ ತೋರಿಸಿದವರು ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್ ಅವರು.
ಆಗ ಅಧಿಕಾರದಲ್ಲಿದ್ದ ವಿಜಯೇಂದ್ರ ಅವರ ಪಕ್ಷಕ್ಕೆ ಏಕೆ ಆಗಲಿಲ್ಲ, ನಂಜುಂಡಪ್ಪನವರ ವರದಿಯಂತೆ ಆ ಭಾಗದ ಬಹುತೇಕ ತಾಲೂಕುಗಳು ಹಿಂದುಳಿದಿವೆ. ಜಿಲ್ಲೆಗಳು ಸಹ ಅಭಿವೃದ್ಧಿಯಲ್ಲಿ ಹಿಂದಿವೆ. ಹಾಗಾಗಿ ಅಭಿವೃದ್ಧಿಯಲ್ಲಿ ಸಮಾನತೆ ತರಲು ನಾವು ಸಭೆ ಮಾಡಿದ್ದೇವೆ ಎಂದರು.ಕೇಂದ್ರದ ಒಂದು ದೇಶ ಒಂದು ಚುನಾವಣೆ ವಿಧೇಯೆಕ ಇದೊಂದು ಪ್ರಚಾರಕ್ಕಾಗಿ ತರಾತುರಿಯಲ್ಲಿ ಮಾಡಿದ ನಿರ್ಣಯವಾಗಿದೆ.
ಒಂದು ದೇಶ ಒಂದು ಚುನಾವಣೆ ಬಗ್ಗೆ ವೈಜ್ಞಾನಿಕವಾಗಿ ಚಿಂತನೆ ಮಾಡಿ ಸರ್ವಪಕ್ಷಗಳ ಸಭೆ ಕರೆದು, ಅಭಿಪ್ರಾಯಗಳನ್ನು ಸಂಗ್ರಹಿಸಿ ಎಲ್ಲರ ಒಪ್ಪಿಗೆ ಪಡೆದು ನಿರ್ಣಯ ಕೈಗೊಳ್ಳಬೇಕಿತ್ತು. ಆದರೆ, ಈ ಕಾನೂನು ನಮ್ಮ ದೇಶದಲ್ಲಿ ವಾಸ್ತವಾಗಿ, ವೈಜ್ಞಾನಿಕವಾಗಿ ಅಸಾಧ್ಯ, ಇದೊಂದು ಕೇವಲ ರಾಜಕೀಯ ಘೋಷಣೆಗಷ್ಟೇ ಸಿಮಿತವಾಗುತ್ತದೆ ಎಂದು ಲೇವಡಿ ಮಾಡಿದರು.