ಸಿದ್ದರಾಮಯ್ಯ, ಡಿಕೆಶಿ ಇಬ್ಬರೂ ಪಕ್ಷ ಕಟ್ಟಿ ಬೆಳೆಸಿದ್ದಾರೆ: ಪಿ.ರವಿಕುಮಾರ್

| Published : Nov 23 2025, 01:30 AM IST

ಸಿದ್ದರಾಮಯ್ಯ, ಡಿಕೆಶಿ ಇಬ್ಬರೂ ಪಕ್ಷ ಕಟ್ಟಿ ಬೆಳೆಸಿದ್ದಾರೆ: ಪಿ.ರವಿಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಪಕ್ಷವನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ಶ್ರಮವಹಿಸಿ ಕಟ್ಟಿ ಬೆಳೆಸಿದ್ದಾರೆ. ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ನಾಯಕರಾಗಿ ಪಕ್ಷವನ್ನು ಕಟ್ಟಿ ಬೆಳೆಸಿದ್ದರೆ, ಡಿ.ಕೆ.ಶಿವಕುಮಾರ್ ಜೈಲಿಗೆ ಹೋದರೂ ಪಕ್ಷನಿಷ್ಠೆಯನ್ನು ಮರೆಯಲಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆನ್ನುವುದು ನನ್ನ ಮಹದಾಸೆ. ಅವರೂ ನಮ್ಮ ಪಕ್ಷದ ನಾಯಕರು. ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ, ಅಧಿಕಾರಕ್ಕೆ ತರುವಲ್ಲಿ ಶ್ರಮವಹಿಸಿದ್ದಾರೆ. ನಾನೂ ರಾಜಕೀಯವಾಗಿ ಮೇಲೆ ಬರುವುದಕ್ಕೆ ಸಹಕರಿಸಿದ್ದಾರೆ. ಹಾಗಾಗಿ ಅವರು ಮುಖ್ಯಮಂತ್ರಿಯಾಗಬೇಕು ಎಂದು ಬಯಸುತ್ತೇನೆ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ಕಾಂಗ್ರೆಸ್ ಪಕ್ಷವನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ಶ್ರಮವಹಿಸಿ ಕಟ್ಟಿ ಬೆಳೆಸಿದ್ದಾರೆ. ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ನಾಯಕರಾಗಿ ಪಕ್ಷವನ್ನು ಕಟ್ಟಿ ಬೆಳೆಸಿದ್ದರೆ, ಡಿ.ಕೆ.ಶಿವಕುಮಾರ್ ಜೈಲಿಗೆ ಹೋದರೂ ಪಕ್ಷನಿಷ್ಠೆಯನ್ನು ಮರೆಯಲಿಲ್ಲ. ಹಗಲು-ರಾತ್ರಿ ಶ್ರಮವಹಿಸಿ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತಂದಿದ್ದಾರೆ. ಇಬ್ಬರೂ ಸಮಾನವಾಗಿ ಪಕ್ಷದ ಏಳಿಗೆಗೆ ದುಡಿದಿದ್ದಾರೆ. ಹಾಗಾಗಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾರೆ. ಅದೇ ಸ್ಥಾನದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನೂ ನೋಡಬೇಕೆನ್ನುವುದು ನಮ್ಮ ಆಸೆ. ಅದು ಯಾವಾಗ ಈಡೇರಲಿದೆ ಎನ್ನುವುದು ಹೈಕಮಾಂಡ್‌ಗೆ ಬಿಟ್ಟಿದ್ದು ಎಂದರು.

ಅಧಿಕಾರ ಹಂಚಿಕೆ ಒಪ್ಪಂದ ಆಗಿದೆಯೋ, ಆಗಿಲ್ಲವೋ ನನಗೆ ಗೊತ್ತಿಲ್ಲ. ಒಮ್ಮೆ ಆಗಿದ್ದರೆ ಸಿದ್ದರಾಮಯ್ಯನವರನ್ನು ಬಿಟ್ಟುಕೊಡಬೇಕು. ಇಲ್ಲದಿದ್ದರೆ ಸಿದ್ದರಾಮಯ್ಯನವರು ಮುಂದುವರೆಯಬಹುದು. ಅತಿ ಶೀಘ್ರದಲ್ಲೇ ಈ ಎಲ್ಲಾ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಲಿದೆ ಎಂದು ನುಡಿದರು.

ಶ್ರಮಿಕ ನಗರದಲ್ಲಿ ಮನೆ ಕಟ್ಟದೆ ವಿಳಂಬ ಧೋರಣೆ: ಆರೋಪ

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಕಾಳಿಕಾಂಬೆ ಶ್ರಮಿಕ ನಗರದಲ್ಲಿ ಮನೆಗಳನ್ನು ಕಟ್ಟದೇ ವಿಳಂಬ ಧೋರಣೆ ತೋರುತ್ತಿರುವ ಸ್ಲಂ ಬೋರ್ಡ್, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರದ ನಡೆಯನ್ನು ಜಿಲ್ಲಾ ಜನಶಕ್ತಿ ಸಂಘಟನೆ ಕಾರ್ಯದರ್ಶಿ ಎಂ. ಸಿದ್ದರಾಜು ಖಂಡಿಸಿದರು.

ಈ ಸ್ಥಳದಲ್ಲಿ ಸರ್ಕಾರದ ವತಿಯಿಂದ ಮನೆ ನಿರ್ಮಿಸಿಕೊಡುವಂತೆ ನ್ಯಾಯಾಲಯದಿಂದ ಎರಡು ಬಾರಿ ಆದೇಶ ನೀಡಿದರೂ, ಅದನ್ನು ಪಾಲಿಸದೇ ಅಕ್ರಮ ಭೂ ಕಬಳಿಕೆದಾರರೊಂದಿಗೆ ಅಧಿಕಾರದಲ್ಲಿರುವ ನಾಯಕರು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಕಾಳಿಕಾಂಬೆ ಶ್ರಮಿಕ ನಗರದಲ್ಲಿ ಮೈಷುಗರ್, ಕಾಳಿಕಾಂಬೆ ದೇವಾಲಯ ಹಾಗೂ ಶ್ರಮಿಕರ ವಾಸಸ್ಥಳಗಳಿಗೆ ಸಂಬಂಧಿಸಿದಂತೆ ಜಾಗವಿದ್ದು. ಭೂಗಳ್ಳರು ಅಲ್ಲಿನ ಭೂಮಿ ಕಬಳಿಸಿ ವಾಣಿಜ್ಯಕ್ಕೆ ಸಂಬಂಧಿಸಿದಂತೆ ಚಟುವಟಿಕೆ ನಡೆಸಲು ಮುಂದಾಗಿದ್ದಾರೆ. ಇದು ಶ್ರಮಿಕ ನಿವಾಸಿಗಳಿಗೆ ಮಾಡುವ ಅನ್ಯಾಯವಾಗಿದೆ ಎಂದು ಖಂಡಿಸಿದರು.

ಚುನಾವಣೆಗಳು ಬಂದಾಗ ಮಾತ್ರ ರಾಜಕಾರಣಿಗಳಿಗೆ ಮತಗಳಂತೆ ಕಾಣುತ್ತೇವೆ. ೨೦ ವರ್ಷಗಳಿಂದ ಶ್ರಮಿಕ ನಿವಾಸಿಗಳ ಕಷ್ಟ ರಾಜಕಾರಣಿಗಳಿಗೆ ಕಾಣುತ್ತಿಲ್ಲವೇಕೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ನ.೨೪ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಮೂರು ದಿನಗಳಲ್ಲಿ ಯಾವುದೇ ಕ್ರಮ ಕೈಗೊಳ್ಳದಿದ್ದರೆ ನ.೨೬ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.

ಮಹಿಳಾ ಮುನ್ನಡೆ ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ಶಿಲ್ಪ, ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ಶಿವಲಿಂಗಯ್ಯ ಇತರರು ಗೋಷ್ಠಿಯಲ್ಲಿದ್ದರು.