ಹೆದ್ದಾರಿಯ ಎರಡೂ ಬದಿ ಕಸದ ರಾಶಿ

| Published : Nov 04 2024, 12:29 AM IST

ಸಾರಾಂಶ

ಬೆಂಗಳೂರು ಮಾರ್ಗವಾಗಿ ಅರಸೀಕೆರೆಗೆ ಬರುವ ಪ್ರಯಾಣಿಕರಿಗೆ ಹೆದ್ದಾರಿಯ ಎರಡೂ ಬದಿ ಕಣ್ಣಿಗೆ ರಾಚುವಂತೆ ತ್ಯಾಜ್ಯ ಸುರಿದಿದ್ದಾರೆ. ನಗರ ವ್ಯಾಪ್ತಿಗೆ ಕೂದಲೆಳೆ ಅಂತರದಲ್ಲಿ ಸಾಲು ಸಾಲಾಗಿ ಕಸದ ರಾಶಿಯನ್ನ ಕಾಣಬಹುದು. ಈ ಪ್ರದೇಶ ನಗರ ವ್ಯಾಪ್ತಿಗೆ ಸೇರುವುದಿಲ್ಲ. ಹಾಗಾಗಿ ನಗರಸಭೆ ಆರೋಗ್ಯ ನಿರೀಕ್ಷಕರು ಇತ್ತ ತಿರುಗಿ ನೋಡುತ್ತಿಲ್ಲ. ಮತ್ತೊಂದೆಡೆ ಹೆದ್ದಾರಿ ಇಲಾಖೆ ಅಧಿಕಾರಿಗಳು ರಸ್ತೆ ಅಭಿವೃದ್ಧಿ, ದುರಸ್ತಿ ಇಷ್ಟೆ ನಮ್ಮ ಕೆಲಸ, ಉಳಿದಿದ್ದು ನಮ್ಮದಲ್ಲ ಎನ್ನುವ ಮನಸ್ಥಿತಿ ಹೊಂದಿದ್ದು, ಈ ಕಾರಣಗಳಿಂದಾಗಿ ಹೆದ್ದಾರಿ ಬದಿಯ ಪಾದಚಾರಿ ರಸ್ತೆಗಳು ಸವಾಲಾಗಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಸಾರ್ವಜನಿಕರ ಸಹಭಾಗಿತ್ವದಲ್ಲಿ ನಗರಸಭೆ ಹಾಗೂ ಹೆದ್ದಾರಿ ಇಲಾಖೆ ಬೆಂಗಳೂರು ಮಾರ್ಗವಾಗಿ ಅರಸೀಕೆರೆಗೆ ಬರುವ ಪ್ರಯಾಣಿಕರಿಗೆ ಹೆದ್ದಾರಿಯ ಎರಡೂ ಬದಿ ಕಣ್ಣಿಗೆ ರಾಚುವಂತೆ ತ್ಯಾಜ್ಯ ಸುರಿದು ಸ್ವಾಗತಿಸುತ್ತಿರುವುದು ದುರದೃಷ್ಟಕರ ಸಂಗತಿ.

ಸಾಮಾಜಿಕ ಜವಾಬ್ದಾರಿ ಅರಿಯದ ಕೆಲವರು ತಮ್ಮ ಮನೆಯ ಸಮಾರಂಭಗಳ ಬಳಿಕ ರಾಶಿ ರಾಶಿ ಊಟದ ಎಲೆಯನ್ನು, ಮತ್ತೆ ಕೆಲವರು ಉಪಯುಕ್ತವಲ್ಲದ ಬಟ್ಟೆ ಬರೆ ಸೇರಿದಂತೆ ತಮ್ಮ ಮನೆಯ ತ್ಯಾಜ್ಯವನ್ನು ಹೆದ್ದಾರಿ ಬದಿ ಸುರಿದು ಕೈತೊಳೆದುಕೊಳ್ಳುತ್ತಿದ್ದಾರೆ, ಇದಕ್ಕೆ ಕಡಿವಾಣ ಹಾಕಬೇಕಾದವರು ಯಾರು ಎಂಬುದು ಸದ್ಯದ ಪ್ರಶ್ನೆಯಾಗಿದೆ.

ನಗರ ವ್ಯಾಪ್ತಿಗೆ ಕೂದಲೆಳೆ ಅಂತರದಲ್ಲಿ ಸಾಲು ಸಾಲಾಗಿ ಕಸದ ರಾಶಿಯನ್ನ ಕಾಣಬಹುದು. ಈ ಪ್ರದೇಶ ನಗರ ವ್ಯಾಪ್ತಿಗೆ ಸೇರುವುದಿಲ್ಲ. ಹಾಗಾಗಿ ನಗರಸಭೆ ಆರೋಗ್ಯ ನಿರೀಕ್ಷಕರು ಇತ್ತ ತಿರುಗಿ ನೋಡುತ್ತಿಲ್ಲ. ಮತ್ತೊಂದೆಡೆ ಹೆದ್ದಾರಿ ಇಲಾಖೆ ಅಧಿಕಾರಿಗಳು ರಸ್ತೆ ಅಭಿವೃದ್ಧಿ, ದುರಸ್ತಿ ಇಷ್ಟೆ ನಮ್ಮ ಕೆಲಸ, ಉಳಿದಿದ್ದು ನಮ್ಮದಲ್ಲ ಎನ್ನುವ ಮನಸ್ಥಿತಿ ಹೊಂದಿದ್ದು, ಈ ಕಾರಣಗಳಿಂದಾಗಿ ಹೆದ್ದಾರಿ ಬದಿಯ ಪಾದಚಾರಿ ರಸ್ತೆಗಳು ಸವಾಲಾಗಿದ್ದು ನಗರಕ್ಕೆ ಆಗಮಿಸುವ ಅಥವಾ ನಗರದಿಂದ ನಿರ್ಗಮಿಸುವ ಪ್ರಯಾಣಿಕರು ಹೆದ್ದಾರಿ ಬದಿಯ ಈ ಕೊಳಕನ್ನು ನೋಡಲಾರದೆ ಕಣ್ಣು ಮೂಗು ಮುಚ್ಚಿಕೊಂಡು ಸಾಗುವಂತಾಗಿದೆ.

ಹೆದ್ದಾರಿ ಇಲಾಖೆ ಹಾಗೂ ನಗರಸಭೆ ಪರಸ್ಪರ ಬೆಟ್ಟು ತೋರುತ್ತಾ ಅಸ್ವಚ್ಛತೆಗೆ ಆಸ್ಪದ ನೀಡದೆ ಈಗಾಗಲೇ ಸಂಗ್ರಹವಾಗಿರುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದಷ್ಟೇ ಅಲ್ಲದೆ ಮುಂದೆ ಈ ರೀತಿ ಯಾರೂ ತ್ಯಾಜ್ಯವನ್ನು ತಂದು ಆಗದಂತೆ ನೋಡಿಕೊಳ್ಳುವ ಮೂಲಕ ಪರಿಸರ ಮಾಲಿನ್ಯವನ್ನು ಕಾಪಾಡುವಂತೆ ಪರಿಸರವಾದಿಗಳು ಆಗ್ರಹಿಸಿದ್ದಾರೆ.

ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ನಮ್ಮ ಮನೆ ಅಂಗಳವನ್ನು ಹೇಗೆ ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವೆ ಅದೇ ರೀತಿ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಪರಿಸರಕ್ಕೆ ಹಾನಿ ಮಾಡುವವರಿಗೆ ತಕ್ಕ ದಂಡನೆ ನೀಡದೆ ಇರುವುದರಿಂದ ನೈರ್ಮಲ್ಯ ತಾಂಡವ ಆಡಲು ಕಾರಣವಾಗಿದೆ ಎನ್ನುತ್ತಾರೆ ರೋಟರಿ ಸಂಸ್ಥೆಯ ಅಧ್ಯಕ್ಷ ದರ್ಶನ್.

*ಹೇಳಿಕೆ-1

ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಕೆರೆ ಏರಿ ಮೇಲೆ ಹಾದು ಹೋಗಿರುವ ಹೆದ್ದಾರಿ ಬದಿ ಸಂಗ್ರಹವಾಗಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಿ ಪಾದಚಾರಿಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ನಗರಸಭೆ ಹೆದ್ದಾರಿ ಹಾಗೂ ಸಣ್ಣ ನೀರಾವರಿ ಇಲಾಖೆಗೆ ನಿರ್ದೇಶನ ನೀಡುವುದರೊಂದಿಗೆ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು.

- ಸಂತೋಷ್ ಕುಮಾರ್, ತಹಸೀಲ್ದಾರ್ *ಹೇಳಿಕೆ-2

ಕಂತೇನಹಳ್ಳಿ ಕೆರೆ ಏರಿ ಮೇಲಿನ ನಿರ್ವಹಣೆ ನಗರಸಭೆಯದ್ದಲ್ಲ ಆದರೂ ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ಈಗಾಗಲೇ ಸಂಗ್ರಹವಾಗಿರುವ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು.

- ಸಮೀವುಲ್ಲಾ, ನಗರಸಭೆ ಅಧ್ಯಕ್ಷ