ಅಧಿಕಾರಕ್ಕಾಗಿ ಇಬ್ಬರೂ ತಹಸೀಲ್ದಾರ್‌ರಲ್ಲಿ ಪೈಪೋಟಿ

| Published : Jan 16 2025, 12:50 AM IST

ಸಾರಾಂಶ

ಪೂರ್ಣಾವಧಿ ಮುಗಿಯುವ ಮೊದಲೇ ತಮ್ಮನ್ನು ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಕೆಎಟಿಯಲ್ಲಿ ತಡೆಯಾಜ್ಞೆ ತಂದಿದ್ದ ತಹಸೀಲ್ದಾರ್ ಎಸ್.ವೆಂಕಟೇಶಪ್ಪ ಬುಧವಾರ ಕಚೇರಿಗೆ ಆಗಮಿಸಿದರೂ ತಹಸೀಲ್ದಾರ್ ಕೊಠಡಿಗೆ ಬೀಗ ಹಾಕಿದ್ದರಿಂದ ಪ್ಯಾಂಟ್ರಿ ಕೊಠಡಿಯಲ್ಲಿ ಕೂರುವಂತಾಯಿತು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಪೂರ್ಣಾವಧಿ ಮುಗಿಯುವ ಮೊದಲೇ ತಮ್ಮನ್ನು ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಕೆಎಟಿಯಲ್ಲಿ ತಡೆಯಾಜ್ಞೆ ತಂದಿದ್ದ ತಹಸೀಲ್ದಾರ್ ಎಸ್.ವೆಂಕಟೇಶಪ್ಪ ಬುಧವಾರ ಕಚೇರಿಗೆ ಆಗಮಿಸಿದರೂ ತಹಸೀಲ್ದಾರ್ ಕೊಠಡಿಗೆ ಬೀಗ ಹಾಕಿದ್ದರಿಂದ ಪ್ಯಾಂಟ್ರಿ ಕೊಠಡಿಯಲ್ಲಿ ಕೂರುವಂತಾಯಿತು.

ಕಳೆದ ಸೋಮವಾರ ತಹಸೀಲ್ದಾರ್ ವೆಂಕಟೇಶಪ್ಪ ಕಚೇರಿಗೆ ಬಂದು ಅಧಿಕಾರ ಚಲಾಯಿಸಿ ಹೋಗಿದ್ದರು. ಮಂಗಳವಾರ ಸರ್ಕಾರಿ ರಜೆಯಿದ್ದು ಬುಧವಾರ ಕಚೇರಿಗೆ ಬಂದರಾದರೂ ಕಚೇರಿಯ ಎಲ್ಲಾ ಬಾಗಿಲುಗಳನ್ನು ತೆರೆಯಲಾಗಿತ್ತು. ಆದರೆ ತಹಸೀಲ್ದಾರ್ ಕೊಠಡಿಯ ಬಾಗಿಲನ್ನು ತೆಗೆಯದೆ ಬೀಗ ಹಾಕಿದ್ದರು. ಇದರಿಂದ ಕೆರಳಿದ ತಹಸೀಲ್ದಾರ್ ವೆಂಕಟೇಶಪ್ಪ ಡಿ ಗ್ರೂಪ್ ನೌಕರ ಗೌತಮ್‌ರನ್ನು ಕರೆಸಿ ಬೀಗ ತೆಗಿಸಲು ಸೂಚಿಸಿದರು. ಆದರೆ ಡಿ ಗ್ರೂಪ್ ನೌಕರ ಗೌತಮ್ ನಾಪತ್ತೆಯಾಗಿದ್ದ. ಬಳಿಕ ಪ್ಯಾಂಟ್ರಿ ಕೊಠಡಿಗೆ ತೆರಳಿ ತಮ್ಮ ಕೈಕೆಳಗೆ ಕೆಲಸ ಮಾಡುವ ನೌಕರರನ್ನು ಕರೆಸಿ ನಾನು ತಹಸೀಲ್ದಾರ್ ನನ್ನ ಸೂಚನೆಯಂತೆ ಎಲ್ಲರೂ ನಡೆದುಕೊಳ್ಳಬೇಕೆಂದು ಸೂಚನೆ ನೀಡಿದರು ಎನ್ನಲಾಗಿದೆ.

ಎರಡು ಗಂಟೆಗಳ ಕಾಲ ಕಚೇರಿಯಲ್ಲೇ ಇದ್ದು ತಹಸೀಲ್ದಾರ್ ಸುಜಾತ ಕೆಎಟಿ ಆದೇಶವನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ಮನವಿಯ ನ್ಯಾಯಾಲಯದ ವಿಚಾರಣೆಯನ್ನು ಮೊಬೈಲ್‌ನಲ್ಲಿ ವೀಕ್ಷಿಸಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದರು. ತಹಸೀಲ್ದಾರ್‌ಗಾಗಿ ಮೀಸಲಿಟ್ಟಿದ್ದ ವಾಹನ ಸಹ ನಾಪತ್ತೆಯಾಗಿತ್ತು. ಕೆಎಟಿ ತಮಗೆ ಬಂಗಾರಪೇಟೆ ತಹಸೀಲ್ದಾರ್ ಆಗಿ ಮುಂದುವರೆಯಲು ಆದೇಶ ನೀಡಿದೆ. ಇದಕ್ಕೆ ಚಲನ ಆದೇಶ ಅಗತ್ಯವಿಲ್ಲ, ಆದರೂ ಚಲನ ಆದೇಶ ತರುವವರೆಗೂ ಅಧಿಕಾರ ಹಸ್ತಾಂತರಿಸುವುದಿಲ್ಲ ಎಂದು ಮತ್ತೊಬ್ಬ ತಹಸೀಲ್ದಾರ್ ಕೆ.ಎನ್.ಸುಜಾತ ಹೇಳಿರುವುದರಲ್ಲಿ ಅರ್ಥವಿಲ್ಲ ಎಂದರು.

ಕಳೆದ ೧೧ರಂದು ಸರ್ಕಾರಿ ರಜೆ ದಿನ ಭೂ ಸುರಕ್ಷೆ ಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಹಸೀಲ್ದಾರ್ ಸುಜಾತ, ಮತ್ತೆ ಮಂಗಳವಾರ ಸರ್ಕಾರಿ ರಜೆ ದಿನ ಹಾಜರಾಗಿ ಸಿದ್ಧರಾಮೇಶ್ವರ ಜಯಂತಿಯ ಅಧ್ಯಕ್ಷತೆ ವಹಿಸಿದ್ದರಿಂದ ಅಸಲಿ ತಹಸೀಲ್ದಾರ್ ಯಾರೆಂಬುದು ತಿಳಿಯದೆ ಅಧಿಕಾರಿಗಳು ಜೊತೆ ಸಾರ್ವಜನಿಕರೂ ಗೊಂದಲಕ್ಕೀಡಾದರು. ಸೋಮವಾರ ಬಂದಿದ್ದ ವೆಂಕಟೇಶಪ್ಪ ಬುಧವಾರ ಹಾಜರಾಗಿದ್ದರಾದರೂ ಕೊಠಡಿ ದೊರೆಯದೆ ಅಸಮಾಧಾನಗೊಂಡರು.

ಡಿ ಗ್ರೂಪ್‌ ನೌಕರನ ವಿರುದ್ದ ದೂರು: ಸೋಮವಾರ ತಾವು ಕಚೇರಿಗೆ ಬಂದಾಗ ಎಲ್ಲಾ ಕೊಠಡಿಗಳ ಬಾಗಿಲನ್ನು ತೆಗೆದಿದ್ದು ತಮ್ಮ ಕೊಠಡಿ ಬಾಗಿಲನ್ನು ಮಾತ್ರ ತೆಗೆಯದೆ ಬೀಗ ಹಾಕಿ, ಬೀಗದ ಕೈಯನ್ನು ಡಿ ಗ್ರೂಪ್‌ ನೌಕರ ಗೌತಮ್ ತಮ್ಮ ಬಳಿಯೇ ಇಟ್ಟುಕೊಂಡು ನಾಪತ್ತೆಯಾಗಿದ್ದಾರೆ. ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಲು ವಿಳಂಬವಾಗುತ್ತಿದೆ. ಬೀಗ ತೆಗೆಯಲು ಅನುವು ಮಾಡಿಕೊಡಬೇಕೆಂದು ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಬೀಗ ಒಡೆಯಲು ಮುಂದಾಗದೆ ತಹಸೀಲ್ದಾರ್ ವೆಂಕಟೇಶಪ್ಪ ದೂರಿಗೆ ಎನ್‌ಸಿಆರ್ ನೀಡಿ ಕೈತೊಳೆದುಕೊಂಡರು. ತಹಸೀಲ್ದಾರ್ ವೆಂಕಟೇಶಪ್ಪ ಬೀಗ ಮುರಿದು ಒಳಪ್ರವೇಶ ಮಾಡಬಹುದೆಂದು ನಿರೀಕ್ಷೆಯಲ್ಲಿ ಕಾವಲು ಕಾಯುತ್ತಿದ್ದರು. ಆದರೆ ಅವರು ಬೀಗ ಒಡೆಯುವ ಕಾರ್ಯಕ್ಕೆ ಕೈ ಹಾಕದೆ ತೆರಳಿದರು. ರಜೆ ದಿನಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ತಹಸೀಲ್ದಾರ್ ಸುಜಾತ, ಉಳಿದ ದಿನಗಳಲ್ಲಿ ಯಾಕೆ ಕಚೇರಿಗೆ ಹಾಜರಾಗುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದ್ದರೆ ಮತ್ತೊಂದೆಡೆ ಇಷ್ಟೆಲ್ಲಾ ಇಬ್ಬರ ತಹಸೀಲ್ದಾರ್‌ಗಳ ನಡುವೆ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದ್ದರೂ ಜಿಲ್ಲಾಡಳಿತ ಮೌನಕ್ಕೆ ಶರಣಾಗಿರುವುದು ಯಾಕೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ.