ಎಂ ಆಗೋಕೆ ಯೋಗ, ಯೋಗ್ಯತೆ ಎರಡೂ ಬೇಕು

| Published : Sep 12 2024, 01:55 AM IST

ಸಾರಾಂಶ

ರಾಮನಗರ: ಮುಖ್ಯಮಂತ್ರಿ ಬಗ್ಗೆ ತೀರ್ಮಾನ ಮಾಡುವುದು ಪಕ್ಷದ ವರಿಷ್ಠರು ಹಾಗೂ ಶಾಸಕರು. ಸುಮ್ಮನೆ ಮಾತನಾಡಿದರೆ ಪ್ರಯೋಜನ ಇಲ್ಲ. ವಾಕ್ ಸ್ವಾತಂತ್ರ್ಯ ಇದೆ. ಮಾತನಾಡುವವರು ಮಾತನಾಡಲಿ, ನನಗೆ ಅವಕಾಶ ಸಿಕ್ಕಿದರೆ ನಾನೂ ಮುಖ್ಯಮಂತ್ರಿ ಆಗುತ್ತೇನೆ ಎಂದು ಮಾಗಡಿ ಕ್ಷೇತ್ರದ ಶಾಸಕ ಎಚ್ .ಸಿ.ಬಾಲಕೃಷ್ಣ ಸ್ವಪಕ್ಷೀಯ ನಾಯಕರಿಗೆ ಟಾಂಗ್ ನೀಡಿದರು.

ರಾಮನಗರ: ಮುಖ್ಯಮಂತ್ರಿ ಬಗ್ಗೆ ತೀರ್ಮಾನ ಮಾಡುವುದು ಪಕ್ಷದ ವರಿಷ್ಠರು ಹಾಗೂ ಶಾಸಕರು. ಸುಮ್ಮನೆ ಮಾತನಾಡಿದರೆ ಪ್ರಯೋಜನ ಇಲ್ಲ. ವಾಕ್ ಸ್ವಾತಂತ್ರ್ಯ ಇದೆ. ಮಾತನಾಡುವವರು ಮಾತನಾಡಲಿ, ನನಗೆ ಅವಕಾಶ ಸಿಕ್ಕಿದರೆ ನಾನೂ ಮುಖ್ಯಮಂತ್ರಿ ಆಗುತ್ತೇನೆ ಎಂದು ಮಾಗಡಿ ಕ್ಷೇತ್ರದ ಶಾಸಕ ಎಚ್ .ಸಿ.ಬಾಲಕೃಷ್ಣ ಸ್ವಪಕ್ಷೀಯ ನಾಯಕರಿಗೆ ಟಾಂಗ್ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿರುವುದರಿಂದ ಅದರ ಬಗೆಗಿನ ಚರ್ಚೆ ಅನಾವಶ್ಯಕ. ಆ ಚರ್ಚೆ ಏನಿದ್ದರೂ ಸಿದ್ದರಾಮಯ್ಯನವರ ನಂತರ ಆಗಬೇಕು. ಇವರೆಲ್ಲರು ಸೇರಿ ಸಿದ್ದರಾಮಯ್ಯ ಅವರನ್ನು ಈಗಲೇ ಕಳುಹಿಸುವ ಹಾಗೆ ಕಾಣುತ್ತಿದೆ. ಈಗ ಯಾರ್ಯಾರು ಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷಿ ಆಗಿದ್ದಾರೊ ಅವರ ತಲೆಯಲ್ಲಿ ಏನಿದೆಯೋ ನಮಗೆ ಗೊತ್ತಿಲ್ಲ. ಮೊದಲು ಅವರೆಲ್ಲರು ತಮ್ಮ ನಡವಳಿಕೆಯನ್ನು ಸರಿಪಡಿಸಿಕೊಳ್ಳಬೇಕು. ಸಿದ್ದರಾಮಯ್ಯನವರ ಅಧಿಕಾರ ಮುಗಿದೇ ಹೋಯಿತು ಎಂದು ಮಾತನಾಡುವುದು ನಿಮ್ಮಗಳ ಘನತೆಗೆ ತಕ್ಕದ್ದಲ್ಲ ಎಂದು ವಾಗ್ದಾಳಿ ನಡೆಸಿದರು.

ಸ್ವಪಕ್ಷದಲ್ಲೇ ಮುಖ್ಯಮಂತ್ರಿಗಳ ಬದಲಾವಣೆಗೆ ಸಂಚು ನಡೆಯುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಇದನ್ನು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ಮಾಡುತ್ತಿರುವವರನ್ನು ಕೇಳಿ. ನಾವಂತೂ ಅದರ ಬಗ್ಗೆ ಚರ್ಚೆ ಮಾಡುತ್ತಿಲ್ಲ. ನಮ್ಮ ಜಿಲ್ಲೆಯವರು ಯಾರೂ ಅದರ ಬಗ್ಗೆ ಮಾತನಾಡುತ್ತಿಲ್ಲ. ಸಿದ್ದರಾಮಯ್ಯನವರು ಇರುವವರೆಗೂ ಅವರಿಗೆ ಬೆಂಬಲ ನೀಡಲು ನಮ್ಮ ಜಿಲ್ಲೆಯ ನಾಯಕರು ತೀರ್ಮಾನ ಮಾಡಿದ್ದೇವೆ. ಸಿದ್ದರಾಮಯ್ಯ ನಂತರ ಮುಂದಿನ ಮುಖ್ಯಮಂತ್ರಿ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾರು ಪಕ್ಷಕ್ಕೆ ದುಡಿದಿದ್ದಾರೆ, ಯಾರು ಕಷ್ಟಪಟ್ಟಿದ್ದಾರೆ, ಯಾರು ಸರ್ಕಾರ ತರಲು ಕಷ್ಟ ಪಟ್ಟಿದ್ದಾರೆ ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ. ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ವಿಚಾರ ಅಪ್ರಸ್ತುತ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ಇರುವವರೆಗೂ ನಾವು ಅದರ ಬಗ್ಗೆ ಚರ್ಚೆ ಮಾಡಲ್ಲ. ಆ ಸಂದರ್ಭ ಬಂದಾಗ ಮಾತ್ರ ನಾವು ಮಾತನಾಡುತ್ತೇವೆ. ರಾಹುಲ್ ಗಾಂಧಿ ಯಾವುದೋ ಒಂದು ಸಂವಾದದಲ್ಲಿ ಭಾಗಿಯಾಗಲು ಅಮೆರಿಕಾಗೆ ಹೋಗಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಕೂಡಾ ವೈಯಕ್ತಿಕ ವಿಚಾರಕ್ಕೆ ಕುಟುಂಬದ ಜೊತೆ ಅಮೆರಿಕಾಗೆ ಹೋಗಿದ್ದಾರೆ. ಅಲ್ಲಿ ಸಹಜವಾಗಿ ಸಿಕ್ಕಿದಾಗ ಮಾತನಾಡಿದ್ದಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ವಿರೋಧ ಪಕ್ಷಗಳಿಗೆ ಕೆಲಸ ಇಲ್ಲ ಅದಕ್ಕಾಗಿ ಏನೇನೋ‌ ಮಾತನಾಡುತ್ತಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಆಗೋಕೆ ಯೋಗ, ಯೋಗ್ಯತೆ ಎರಡೂ ಬೇಕು. ಕೇವಲ ಲಾಬಿ ಮಾಡಿಕೊಂಡು ಟವಲ್ ಹಾಕೊಕೊಂಡರೆ ಆಗಲ್ಲ. ಸುಮ್ಮನೆ ಸಿಎಂ ವಿಚಾರ ಚರ್ಚೆ ಮಾಡೋದನ್ನು ಬಿಟ್ಟು ಕೆಲಸ ಮಾಡಲಿ. ನಿಮ್ಮ ಈ ಚರ್ಚೆ ಕಾರ್ಯಕರ್ತರು, ಮುಖಂಡರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಮ್ಮ ನಾಯಕರು ಈ ರೀತಿಯ ನಡವಳಿಕೆ ಬದಲಾವಣೆ ಮಾಡಿಕೊಳ್ಳಬೇಕು ಎಂದು ಬಾಲಕೃಷ್ಣ ಸಲಹೆ ನೀಡಿದರು.

11ಕೆಆರ್ ಎಂಎನ್ 5.ಜೆಪಿಜಿ

ಶಾಸಕ ಎಚ್ .ಸಿ.ಬಾಲಕೃಷ್ಣ.