ಸಾರಾಂಶ
ನಾಲ್ಕು ವರ್ಷದ ಬಾಲಕ ಪರಶುರಾಮ ಗಾಯಾಳು. ಬಾಲಕನಿಗೆ ನಾಯಿ ಕಚ್ಚಿದ ಪರಿಣಾಮ ಮುಖಕ್ಕೆ ತೀವ್ರತರ ಗಾಯವಾಗಿದೆ.
ಹೊಸಪೇಟೆ: ನಗರದ ಚಿತ್ತವಾಡಗಿಯ ಕಾಕರ ಓಣಿಯಲ್ಲಿ ಆಟವಾಡುತ್ತಿದ್ದ ಬಾಲಕನಿಗೆ ಬೀದಿನಾಯಿಯೊಂದು ಕಚ್ಚಿದ ಘಟನೆ ಬುಧವಾರ ನಡೆದಿದೆ.
ನಾಲ್ಕು ವರ್ಷದ ಬಾಲಕ ಪರಶುರಾಮ ಗಾಯಾಳು. ಬಾಲಕನಿಗೆ ನಾಯಿ ಕಚ್ಚಿದ ಪರಿಣಾಮ ಮುಖಕ್ಕೆ ತೀವ್ರತರ ಗಾಯವಾಗಿದೆ. ಜತೆಗೆ ಬೆನ್ನು, ಬಲಗಾಲಿಗೂ ಗಾಯಗಳಾಗಿವೆ. ಬಾಲಕನಿಗೆ ನಗರದ ಸಾರ್ವಜನಿಕ ವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಮಗುವಿಗೆ ಬೀದಿ ನಾಯಿ ಕಚ್ಚಿದ ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಎಚ್.ಆರ್. ಗವಿಯಪ್ಪ ಹಾಗೂ ಡಿಎಚ್ಒ ಡಾ. ಶಂಕರ್ ನಾಯ್ಕ ಆಸ್ಪತ್ರೆಗೆ ದೌಡಾಯಿಸಿದರು. ಇವರಿಬ್ಬರು ಮಗುವಿನ ಯೋಗಕ್ಷೇಮ ವಿಚಾರಿಸಿದರು.
ಈ ವೇಳೆ ಮಕ್ಕಳ ವೈದ್ಯ ಡಾ.ಶ್ರೀನಿವಾಸ್ ಕೂಡ ಮಗುವಿಗೆ ಚಿಕಿತ್ಸೆ ನೀಡಿದರು. ಮಗುವಿನ ಸ್ಥಿತಿ ಬಗ್ಗೆ ತಿಳಿದ ಡಿಎಚ್‌ಒ ಶಂಕರ್ ನಾಯ್ಕ ಮಗುವಿಗೆ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್‌ಗೆ ರೆಫರ್ ಮಾಡಿದರು. ಶಾಸಕ ಗವಿಯಪ್ಪ ಮಾತನಾಡಿ, ಮಗುವಿನ ಚಿಕಿತ್ಸೆಗೆ ವೈಯಕ್ತಿಕವಾಗಿ ಧನಸಹಾಯ ಮಾಡುವೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು ಎಂದರು.ಬೀದಿನಾಯಿ ಹಾವಳಿ:
ನಗರದ ಚಿತ್ತವಾಡ್ಗಿ ಪ್ರದೇಶದಂತೆ ಎಲ್ಲ 35 ವಾರ್ಡ್‌ಗಳಲ್ಲೂ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಇದಕ್ಕೆ ನಗರಸಭೆ ಕಡಿವಾಣ ಹಾಕಬೇಕು. ಬಾಲಕನಿಗೆ ಪ್ಲಾಸ್ಟಿಕ್ ಸರ್ಜರಿ ಶಸ್ತ್ರಚಿಕಿತ್ಸೆ ಮಾಡುವ ಅವಶ್ಯಕತೆ ಇದೆ ಎಂದು ವಿಮ್ಸ್ ವೈದ್ಯರು ಹೇಳ್ತಾರೆ. ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡಬೇಕು. ಸರ್ಕಾರವೇ ವೈದ್ಯಕೀಯ ವೆಚ್ಚ ಭರಿಸಬೇಕು ಎಂದು ಭಗತ್ ಸಿಂಗ್ ರಕ್ತದಾನಿಗಳ ಸಂಘದ ಅಧ್ಯಕ್ಷ ಕೆ.ಎಂ. ಸಂತೋಷಕುಮಾರ್ ಒತ್ತಾಯಿಸಿದ್ದಾರೆ.