ಶಿಕ್ಷಕಿ ಥಳಿತಕ್ಕೆ ಬಾಲಕನ ಕಣ್ಣಿಗೆ ಹಾನಿ: ದೂರು ದಾಖಲು

| Published : Apr 08 2025, 12:30 AM IST

ಶಿಕ್ಷಕಿ ಥಳಿತಕ್ಕೆ ಬಾಲಕನ ಕಣ್ಣಿಗೆ ಹಾನಿ: ದೂರು ದಾಖಲು
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಯಗವಕೋಟೆಯ ಯಶವಂತ್‌ ೨ನೇ ತರಗತಿ ವಿದ್ಯಾರ್ಥಿಯಾಗಿದ್ದು ಪಾಠ ಹೇಳುವ ವೇಳೆ ಶಿಕ್ಷಕಿ ಸರಸ್ವತಮ್ಮ ಕೋಲಿನಿಂದ ಹೊಡೆದ ಹಿನ್ನೆಲೆಯಲ್ಲಿ ಬಾಲಕನ ಬಲಭಾಗದ ಕಣ್ಣಿಗೆ ಗಂಭೀರ ಗಾಯಗೊಂಡ ಪರಿಣಾಮ ಬಲಕಣ್ಣು ಕಳೆದುಕೊಂಡಿದ್ದಾನೆ. ಈ ಪ್ರಕರಣ ದಾಖಲಿಸಿಕೊಳ್ಳಲು ಬಟ್ಲಹಳ್ಳಿ ಪೊಲೀಸ್ ಠಾಣೆ ಪೊಲೀಸರು ಹಿಂದೇಟು ಹಾಕಿದ್ದಾಗಿ ಆರೋಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರ ಏಟಿಗೆ ವಿದ್ಯಾರ್ಥಿಯೊಬ್ಬ ಕಣ್ಣು ಕಳೆದುಕೊಂಡಿರುವ ಘಟನೆಯಲ್ಲಿ ಪೊಲೀಸರು ಪೋಷಕರಿಂದ ದೂರು ಸ್ವೀಕರಿಸಲು ಮೀನಮೇಷ ಎಣಿಸುತ್ತಿದ್ದಾರೆಂದು ಆರೋಪಿಸಿ ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ಮುಂಭಾಗ ಅಹೋರಾತ್ರಿ ಧರಣಿ ಮಾಡಲು ಮುಂದಾದ ಘಟನೆ ಭಾನುವಾರ ರಾತ್ರಿ ನಡೆದಿದೆ.

ತಾಲೂಕಿನ ಯಗವಕೋಟೆಯ ಅಂಜಲಿ ನಟರಾಜ್ ದಂಪತಿಗಳ ಪುತ್ರ ಯಶವಂತ್ ೨ನೇ ತರಗತಿ ವಿದ್ಯಾರ್ಥಿಯಾಗಿದ್ದು ಪಾಠ ಹೇಳುವ ವೇಳೆ ಶಿಕ್ಷಕಿ ಸರಸ್ವತಮ್ಮ ಕೋಲಿನಿಂದ ಹೊಡೆದ ಹಿನ್ನೆಲೆಯಲ್ಲಿ ಬಾಲಕನ ಬಲಭಾಗದ ಕಣ್ಣಿಗೆ ಗಂಭೀರ ಗಾಯಗೊಂಡ ಪರಿಣಾಮ ಬಲಕಣ್ಣು ಕಳೆದುಕೊಂಡಿದ್ದಾನೆ. ಈ ವಿಚಾರವಾಗಿ ಪೋಷಕರು ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾದಾಗ ದೂರು ಸ್ವೀಕರಿಸಲಿಲ್ಲ ಎಂದು ಆರೋಪಿಸಲಾಗಿದೆ.

ಈ ಘಟನೆಯ ಮಾಹಿತಿ ಪಡೆದ ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಬಟ್ಲಹಳ್ಳಿ ಪೋಲೀಸ್ ಠಾಣೆ ಬಳಿ ಆಗಮಿಸಿ ಶಿಕ್ಷಕಿಯ ವಿರುದ್ದ ಕ್ರಮ ಜರುಗಿಸುವಂತೆ ಒತ್ತಾಯಿಸಿ ಠಾಣೆಯ ಮುಂಭಾಗ ಧರಣಿ ಮಾಡಲು ಮುಂದಾದರು.

ಬಳಿಕ ಬಟ್ಲಹಳ್ಳಿ ಪೊಲೀಸರು ಹಿರಿಯ ಅಧಿಕಾರಿಗಳ ಆದೇಶದಂತೆ ದೂರು ಸ್ವೀಕರಿಸಿ ೫ ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆಂದು ಹೇಳಲಾಗಿದ್ದು, ಎಫ್‌ಐಆರ್ ದಾಖಲು ಮಾಡಿದ್ದರಿಂದ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಪ್ರತಿಭಟನೆಯನ್ನು ವಾಪಸ್ ಪಡೆದರು.

ಈ ಪ್ರತಿಭಟನೆಯಲ್ಲಿ ಮುಖಂಡರಾದ ಜಿಪಂ ಮಾಜಿ ಸದಸ್ಯ ಗುಡೇ ಶ್ರೀನಿವಾಸರೆಡ್ಡಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಮುಖಂಡ ಕೋಡಿಗಲ್ ರಮೇಶ್, ಯನಮಲಪಾಡಿ ಚಂದ್ರಾರೆಡ್ಡಿ, ದಿನ್ನಿಮಿಂದಹಳ್ಳಿ ಬೈರಾರೆಡ್ಡಿ, ಕಲ್ಲಹಳ್ಳಿ ಅನಿಲ್ ಸೇರಿದಂತೆ ಕಣ್ಣು ಕಳೆದುಕೊಂಡಿರುವ ಬಾಲಕ ಹಾಗೂ ಆತನ ಪೋಷಕರು ಮತ್ತು ಸಾರ್ವಜನಿಕರು ಇದ್ದರು.