ಬಿಜೆಪಿ, ಜೆಡಿಎಸ್ ನಾಯಕರು ನಿಮ್ಮ ಮನೆ ಬಾಗಿಲಿಗೆ ಬಂದರೆ ಅವರನ್ನು ಬಹಿಷ್ಕರಿಸಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹಿರಿಯೂರಿನ ಜನರಿಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಬಿಜೆಪಿ, ಜೆಡಿಎಸ್ ನಾಯಕರು ನಿಮ್ಮ ಮನೆ ಬಾಗಿಲಿಗೆ ಬಂದರೆ ಅವರನ್ನು ಬಹಿಷ್ಕರಿಸಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹಿರಿಯೂರಿನ ಜನರಿಗೆ ಕರೆ ನೀಡಿದರು.

ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬರಪೀಡಿತ ಹಿರಿಯೂರು ಕ್ಷೇತ್ರದ ಜನರ ಕಷ್ಟ ಕೇಳಲು ಕೇಂದ್ರ ಸರ್ಕಾರ ಅನುದಾನ ನೀಡಿಲ್ಲ. ನಿಮ್ಮ ಕಷ್ಟಗಳನ್ನು ನಾವೇ ಕೇಳಬೇಕು, ಪರಿಹಾರ ಕೊಡಬೇಕು. ಬರದ ನಾಡಿಗೆ ನೀರು ಕೊಡುವ ಕೆಲಸವನ್ನು ಬಿಜೆಪಿ ಮತ್ತು ಜೆಡಿಎಸ್‌ನವರು ಮಾಡಿದ್ದರೆ ಅವರಿಗೆ ಶರಣಾಗುತ್ತಿದ್ದೆ. ನಿಮ್ಮ ಸಂಕಷ್ಟಕ್ಕೆ ಸ್ಪಂದಿಸದ ಬಿಜೆಪಿ, ಜೆಡಿಎಸ್ ನಾಯಕರು ನಿಮ್ಮ ಮನೆ ಬಾಗಿಲಿಗೆ ಬಂದರೆ ಬಹಿಷ್ಕರಿಸಿ ಎಂದು ಹಿರಿಯೂರಿನ ಜನರಿಗೆ ಕರೆ ನೀಡಿದರು.

ಬಳಿಕ, ನಗರದ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮುಖ್ಯಮಂತ್ರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ಕಾರಿ ನೌಕರರು ಹಬ್ಬದ ಭತ್ಯೆ, ಆರೋಗ್ಯ ಸೇವೆ ಕುರಿತು ಬೇಡಿಕೆ ಸಲ್ಲಿಸಿದ್ದಾರೆ. ಹಬ್ಬದ ಮುಂಗಡ ಭತ್ಯೆಯನ್ನು ₹25,000 ದಿಂದ ₹50,000ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದರು. ಜೊತೆಗೆ, ಹಿರಿಯೂರು ನಗರದಲ್ಲಿ ನೌಕರರ ಭವನ ನಿರ್ಮಾಣಕ್ಕೆ ₹3 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಎನ್‌ಪಿಎಸ್, ಒಪಿಎಸ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಆರ್ಥಿಕ ಇಲಾಖೆ, ಸಚಿವ ಸಂಪುಟ, ಪ್ರಣಾಳಿಕೆ ರಚನಾ ಸಮಿತಿ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜೊತೆ ಚರ್ಚಿಸಿ ಈ ಬಗ್ಗೆ ತೀರ್ಮಾನಕ್ಕೆ ಬರಬೇಕಿದೆ. ಮರಕ್ಕೆ ಬೇರು, ತಾಯಿಗೆ ಮಗು, ಭಕ್ತರಿಗೆ ದೇವರು ಹೇಗೆ ಬೇಕೋ ಹಾಗೆ ನಮಗೆ ಸರ್ಕಾರಿ ನೌಕರರು ಬೇಕು. ಡಿ.ಸುಧಾಕರ್‌ಗೆ ಜಾತಿಯ ಬೆಂಬಲ ಇಲ್ಲದಿದ್ದರೂ ನೌಕರರು ಹಾಗೂ ಜನರ ಬೆಂಬಲದಿಂದ 3 ಬಾರಿ ಶಾಸಕರಾಗಿದ್ದರು. ಅವರು ಎಂದೂ ನೌಕರರಿಗೆ ತೊಂದರೆ ಕೊಟ್ಟವರಲ್ಲ. ಪ್ರಸಕ್ತ ಅವರ ಋಣ ತೀರಿಸಿ ಎಂದು ಸಿಎಂ ಮನವಿ ಮಾಡಿದರು.

ವಿಧಾನಸೌಧದಲ್ಲಿ ತಾಯಿ ಭುವನೇಶ್ವರಿಯ ಮೂರ್ತಿ ಪ್ರತಿಷ್ಠಾಪಿಸಿದ್ದೇವೆ. ರಾಷ್ಟ್ರಧ್ವಜದ ಪಕ್ಕದಲ್ಲಿ ನಾಡಧ್ವಜ ಸ್ಥಾಪಿಸಲು ಕಾನೂನು ತರುವ ಪ್ರಯತ್ನ ನಡೆಸಿದ್ದೇನೆ. ಮುಂದಿನ ವರ್ಷ ಸರ್ಕಾರದ ವತಿಯಿಂದ 3 ದಿನ ವಿಶ್ವಕನ್ನಡ ಸಮ್ಮೇಳನ ಆಯೋಜಿಸುತ್ತೇವೆ ಎಂದರು.

ಕಬ್ಬು ಬೆಳೆಗಾರರಿಗೆ ಖಾಲಿ ಜೇಬು ತೋರಿಸಿ ಹಿರಿಯೂರಿಗೆ ಅನುದಾನ ಎಲ್ಲಿಂದ ತರುತ್ತೀರಿ ಎಂಬ ವಿಪಕ್ಷ ಆರೋಪ ಮಾಡಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಿಪಕ್ಷಗಳು ಏನು ಬೇಕಾದರೂ ಆರೋಪ ಮಾಡಿಕೊಳ್ಳಲಿ, ನಾವು ಜನರ ಋಣ ತೀರಿಸುವ ಕೆಲಸ ಮಾಡುತ್ತೇವೆ. ಪ್ರತಿ ತಿಂಗಳು ಎರಡ್ಮೂರು ಕಡೆ ಪ್ರಜಾಸೇವೆ ಮಾಡುತ್ತಿದ್ದೇನೆ. ಜನರ ಸಮಸ್ಯೆ ಆಲಿಸಿ ಪರಿಹಾರ ಕ್ರಮಕ್ಕೆ ಜನಸೇವಾ ಕಾರ್ಯಕ್ರಮ ನಡೆಯುತ್ತಿದೆ. ಕಬ್ಬು ಬೆಳೆಗಾರರ ಬಗ್ಗೆ ಕೇಂದ್ರ ಸರ್ಕಾರ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದರು.

ಬೆಂಗಳೂರಲ್ಲಿ ಗಂಗಾ ನಿವಾಸ ನವೀಕರಣಕ್ಕೆ ₹100 ಕೋಟಿ ವೆಚ್ಚ ಮಾಡಲಾಗಿದೆ ಎಂಬ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕ್ಕೆ ಉತ್ತರಿಸಿ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ತನಿಖಾ ತಂಡ ಮಾಡ್ತೀನಿ. ವಿಜಯೇಂದ್ರ ಯಾರನ್ನು ಬೇಕಾದರು ಸಮಿತಿಗೆ ಸೇರಿಸಿಕೊಳ್ಳಲಿ. ಜೆಡಿಎಸ್‌ನವರನ್ನು ಬೇಕಾದರೂ ಸಮಿತಿಗೆ ಸೇರಿಸಿಕೊಳ್ಳಲಿ. ಗಂಗಾ ನಿವಾಸ ನವೀಕರಣದ ವೆಚ್ಚದ ಬಗ್ಗೆ ತನಿಖೆ ಮಾಡಿ ಅಸೆಂಬ್ಲಿಗೆ ವರದಿ ನೀಡಲಿ. ವರದಿ ಬಳಿಕ ಟೀಕೆ ಮಾಡಲಿ. ಸತ್ಯ ರಾಜ್ಯದ ಜನತೆಗೆ ತಿಳಿಯಲಿ ಎಂದು ಸವಾಲು ಹಾಕಿದರು.