ಸಾರಾಂಶ
-ತಾಲೂಕಿನ ಅರಳಾಳುಸಂದ್ರ ಕೆಪಿಎಸ್ ಶಾಲೆಯಲ್ಲಿ ಶಿಕ್ಷಕರ ನೇಮಿಸಲು ಆಗ್ರಹ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣಶಿಕ್ಷಕರ ಕೊರತೆಯಿಂದ ಪಾಠಪ್ರವಚನಗಳಿಗೆ ತೊಂದರೆಯಾಗುತ್ತಿದ್ದು, ಶಿಕ್ಷಕರ ಕೊರತೆ ನೀಗಿಸುವಂತೆ ಆಗ್ರಹಿಸಿ ತಾಲೂಕು ಅರಳಾಳುಸಂದ್ರ ಕೆಪಿಎಸ್ ಶಾಲೆಯ ವಿದ್ಯಾರ್ಥಿಗಳು ಗುರುವಾರ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಗುರುವಾರ ತರಗತಿಯಿಂದ ಹೊರಬಂದ ವಿದ್ಯಾರ್ಥಿಗಳು ಶಿಕ್ಷಕರ ಕೊರತೆ ನೀಗಿಸುವಂತೆ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಕೆಲ ದಿನಗಳ ಹಿಂದೆ ಶಾಲೆಯ ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅತಿಥಿ ಶಿಕ್ಷಕರನ್ನು ಹಾಗೂ ಒಬ್ಬ ಪ್ರಭಾರ ಮುಖ್ಯ ಶಿಕ್ಷಕರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಇದರಿಂದ ಶಾಲೆಯಲ್ಲಿ ಪಾಠ ಮಾಡಲು ಶಿಕ್ಷಕರೆ ಇಲ್ಲದೆ, ತರಗತಿಗಳ ಪಾಠಗಳಿಗೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.ಶಾಲೆಯಲ್ಲಿ ಮೊದಲೇ ನಾಲ್ವರು ಶಿಕ್ಷಕರ ಕೊರತೆ ಇತ್ತು. ಇದೀಗ ಕೂದಲು ಕತ್ತರಿಸಿದ ಪ್ರಕರಣದ ಬಳಿಕ ಮೂವರು ಶಿಕ್ಷಕರು ಅಮಾನತುಗೊಂಡಿರುವ ಕಾರಣ ಇದೀಗ ಕೇವಲ ಇಬ್ಬರೇ ಶಿಕ್ಷಕರು ಪಾಠ ಮಾಡುವಂತಾಗಿದೆ. ಕೂಡಲೇ ಅತಿಥಿ ಶಿಕ್ಷಕರನ್ನಾಗಲಿ, ಬೇರೆ ಶಿಕ್ಷಕರನ್ನಾಗಲಿ ನೇಮಿಸುವಂತೆ ಆಗ್ರಹಿಸಿದರು. ಶಿಕ್ಷಕರು ಇಲ್ಲದ ಕಾರಣ ಪಾಠಕ್ಕೆ ಸಮಸ್ಯೆಯಾಗಿದೆ. ಶಿಕ್ಷಕರೇ ಇಲ್ಲದ ಮೇಲೆ ನಾವು ತರಗತಿಯಲ್ಲಿ ಕುಳಿತು ಏನು ಪ್ರಯೋಜನ. ನಮ್ಮ ಸಮಸ್ಯೆ ಬಗೆಹರಿಯುವವರೆಗೂ ಶಾಲೆಗೆ ತೆರಳುವುದಿಲ್ಲವೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
ಪ್ರಭಾರ ಬಿಇಒ ಭೇಟಿ, ಮನವೊಲಿಕೆ:ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರ ತಿಳಿದು ಕೆಪಿಎಸ್ ಶಾಲೆಗೆ ಪ್ರಭಾರ ಬಿಇಒ ಕುಸುಮ ಲತಾ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಈ ಕೊಡಲೇ ಅಗತ್ಯವಿರುವ ಶಿಕ್ಷಕರನ್ನು ನೇಮಕ ಮಾಡುವುದಾಗಿ ಮಕ್ಕಳ ಮನವೊಲಿಸಿದರು. ಬಳಿಕ ಪ್ರತಿಭಟನೆ ಕೈಬಿಟ್ಟ ವಿದ್ಯಾರ್ಥಿಗಳು ತಮ್ಮ ತರಗತಿಗಳಿಗೆ ತೆರಳಿದರು.