ಸಾರಾಂಶ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಂಡಗೋಡ ತಾಲೂಕಿನ ಬಸಾಪುರ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಪ್ರತಿಭಟಿಸಿದರು. ಬಳಿಕ ಅಧಿಕಾರಿಗಳು ಆಗಮಿಸಿ ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕ ಮತದಾನ ಮಾಡಿದರು.
ಮುಂಡಗೋಡ: ಪ್ರತ್ಯೇಕ ಮತಗಟ್ಟೆ ತೆರೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾಪುರ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಪ್ರಸಂಗ ಮಂಗಳವಾರ ನಡೆಯಿತು.
ಸುಮಾರು ೩೨೦ ಮತದಾರರನ್ನು ಹೊಂದಿರುವ ಬಸಾಪುರ ಗ್ರಾಮಸ್ಥರು ೩ ಕಿಮೀ ದೂರದಲ್ಲಿರುವ ನಂದಿಕಟ್ಟಾ ಗ್ರಾಮದ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು. ಅರಣ್ಯ ದಾರಿ ಮೂಲಕ ಸಂಚರಿಸಬೇಕು. ಗ್ರಾಮದಲ್ಲಿ ವಯಸ್ಸಾದವರು, ಹೆಣ್ಣುಮಕ್ಕಳು ಅನಾರೋಗ್ಯ ಪೀಡಿತರು ಇದ್ದು ಅವರೆಲ್ಲ ಈಗಿರುವ ಪರಿಸ್ಥಿಯಲ್ಲಿ ಮತಗಟ್ಟೆಗೆ ಹೋಗುವುದು ಕಷ್ಟಸಾಧ್ಯ.ಪಡಿತರ ಪಡೆಯಬೇಕೆಂದರೂ ೩ಕಿ.ಮೀ ದೂರ ಹೋಗಿ ತಲೆ ಮೇಲೆ ಹೊತ್ತು ತರಬೇಕಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಕನಿಷ್ಠ ಒಂದು ಟ್ಯಾಂಕರ್ ವ್ಯವಸ್ಥೆ ಕೂಡ ಮಾಡಿಲ್ಲ.
ಈ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳಿಂದ ಯಾವುದೇ ರೀತಿಯ ಪರಿಹಾರ ದೊರೆತಿರಲಿಲ್ಲ. ಇತ್ತೀಚೆಗೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿ ಹೋದವರು, ಗ್ರಾಮದಲ್ಲಿ ಯಾವುದೇ ತೊಂದರೆ ಇಲ್ಲ, ಮತದಾನ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿಗೆ ತಪ್ಪು ಮಾಹಿತಿ ನೀಡಿದ್ದರಂತೆ. ವಿಷಯ ತಿಳಿದು ಆಕ್ರೊಶಗೊಂಡ ಜನತೆ, ನಮ್ಮ ಬೇಡಿಕೆ ಈಡೇರುವವರೆಗೂ ನಾವು ಮತದಾನದಲ್ಲಿ ಭಾಗವಹಿಸುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.ಸಂಜೆ ೫ ಗಂಟೆ ವೇಳೆಗೆ ಉಪ ವಿಭಾಗಾಧಿಕಾರಿ ಆದೇಶದ ಮೇರೆಗೆ ಮುಂಡಗೋಡ ತಹಸೀಲ್ದಾರ್ ಶಂಕರ ಗೌಡಿ ಸ್ಥಳಕ್ಕೆ ಧಾವಿಸಿ ದೂರವಾಣಿ ಮೂಲಕ ಉಪವಿಭಾಗಾಧಿಕಾರಿಗಳೊಂದಿಗೆ ಮಾತನಾಡಿಸಿ, ನಾಳೆಯಿಂದಲೇ ಕಂದಾಯ ಗ್ರಾಮ ಬೇಡಿಕೆ ಹಾಗೂ ಮತಗಟ್ಟೆ ವಿಂಗಡಣೆ ಮಾಡುವ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಬಹಿಷ್ಕಾರ ಕೈಬಿಟ್ಟು ಮತದಾನ ಮಾಡಲು ಒಪ್ಪಿಕೊಂಡರು. ೫ ಗಂಟೆಯ ನಂತರ ಗ್ರಾಮಸ್ಥರೆಲ್ಲ ಮತದಾನ ಮಾಡಲು ತೆರಳುತ್ತಿರುವುದು ಕಂಡು ಬಂತು.
ಬಸವರಾಜ ಅಂಗಡಿ, ನಾಗನಗೌಡ, ಶಿವಾನಂದ ಸಿಂಗ್, ಡೇವಿಡ್ ಜೇಸುದಾಸ್, ಸಂಜೀವಸಿಂಗ್ ಸವಣೂರು, ಈರಯ್ಯ ಹಣ್ಮಂತಸಿಂಗ್ ಕಾರ್ಪೆಂಟರ್, ಲಕ್ಷ್ಮಣ ಸಿಂಗ್ ಕರೂರ, ಮಹಾದೇವ ಸುತ್ತಗಟ್ಟಿ, ನಾಗರಾಜ ಮಡಳ್ಳಿ, ನಿಂಗಪ್ಪ ಹೊನ್ನಪ್ಪ ಮುಂತಾದವರು ಇದ್ದರು.