ದೇಸಿ ಭತ್ತಗಳನ್ನು ಮತ್ತೆ ರೈತರ ಹೊಲಕ್ಕೆ ತರಲು ಬಿ.ಪಿ.ರವಿಶಂಕರ್ ಆಗ್ರಹ

| Published : Aug 10 2025, 01:30 AM IST

ದೇಸಿ ಭತ್ತಗಳನ್ನು ಮತ್ತೆ ರೈತರ ಹೊಲಕ್ಕೆ ತರಲು ಬಿ.ಪಿ.ರವಿಶಂಕರ್ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ದೇಸಿ ಅಕ್ಕಿಗಳು ನಮ್ಮ ಆಹಾರ ಸಂಸ್ಕೃತಿ- ಸೊಗಡಿನೊಂದಿಗೆ ಬೆಳೆದುಕೊಂಡು ಬಂದಿವೆ. ಈ ತಳಿಗಳನ್ನು ಮುಂದಿನ ಪೀಳಿಗೆಗೂ ನೀಡುವ ಹೊಣೆ ಎಲ್ಲರ ಮೇಲಿದೆ. ಗ್ರಾಹಕರು ಇವುಗಳ ಬಳಕೆ ಮಾಡಿ ಆರೋಗ್ಯ ವೃದ್ದಿ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಭತ್ತದ ಕೃಷಿ ದುಬಾರಿಯಾಗುತ್ತಿದೆ. ವಾಣಿಜ್ಯ ಬೆಳೆಗಳ ಆಗಮನದಿಂದ ಮೂಲೆಗೆ ಸರಿಯುತ್ತಿರುವ ದೇಸಿ ಭತ್ತಗಳನ್ನು ಮತ್ತೆ ರೈತರ ಹೊಲಕ್ಕೆ ತರಲು ಅಗತ್ಯವಿರುವ ನೆರವನ್ನು ಸರ್ಕಾರ ನೀಡಬೇಕು ಎಂದು 57 ಬಗೆಯ ದೇಸಿ ಭತ್ತವನ್ನು ಸಂರಕ್ಷರಾದ ಕೊಡಗಿನ ಪೊನ್ನಂಪೇಟೆಯ ಹುದೂರಿನ ಬೀಜ ಸಂರಕ್ಷಕ ಬಿ.ಪಿ.ರವಿಶಂಕರ್ ಆಗ್ರಹಿಸಿದರು.

ನಗರದ ನಂಜರಾಜ ಬಹದ್ದೂರು ಛತ್ರದಲ್ಲಿ ಸಹಜ ಸಮೃದ್ಧ ಮತ್ತು ಭತ್ತ ಉಳಿಸಿ ಆಂದೋಲನ ಆಶ್ರಯದಲ್ಲಿ ಆಯೋಜಿಸಿರುವ 2 ದಿನಗಳ ದೇಸಿ ಅಕ್ಕಿ ಮೇಳವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ನೂರಾರು ವರ್ಷಗಳಿಂದ ರೈತರು ಸ್ಥಳೀಯ ಭತ್ತದ ತಳಿಗಳನ್ನು ಉಳಿಸಿ ಬೆಳೆಸುತ್ತಾ ಬಂದಿದ್ದಾರೆ ಎಂದರು.

ದೇಸಿ ಅಕ್ಕಿಗಳು ನಮ್ಮ ಆಹಾರ ಸಂಸ್ಕೃತಿ- ಸೊಗಡಿನೊಂದಿಗೆ ಬೆಳೆದುಕೊಂಡು ಬಂದಿವೆ. ಈ ತಳಿಗಳನ್ನು ಮುಂದಿನ ಪೀಳಿಗೆಗೂ ನೀಡುವ ಹೊಣೆ ಎಲ್ಲರ ಮೇಲಿದೆ. ಗ್ರಾಹಕರು ಇವುಗಳ ಬಳಕೆ ಮಾಡಿ ಆರೋಗ್ಯ ವೃದ್ದಿ ಮಾಡಿಕೊಳ್ಳಬೇಕು ಎಂದರು.

ಔಷಧೀಯ ಅಕ್ಕಿಗಳನ್ನು ಅನಾವರಣ ಮಾಡಿದ ಸಿ.ಎಫ್.ಟಿ.ಆರ್.ಐ ನಿವೃತ್ತ ನಿರ್ದೇಶಕಿ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಮಾತನಾಡಿ, ಸಾಂಪ್ರದಾಯಿಕ ತಳಿಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಕಪ್ಪು ಮತ್ತು ಕೆಂಪು ಅಕ್ಕಿಗಳಲ್ಲಿ ಔಷಧೀಯ ಗುಣವಿದೆ. ಗ್ರಾಹಕರು ಇವುಗಳ ಬಳಕೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಮಿಳುನಾಡಿನ ಭತ್ತ ಉಳಿಸಿ ‌ಆಂದೋಲನದ ಸುರೇಶ್ ಕನ್ನಾ ಮಾತನಾಡಿ, ಕಳೆದ ದಶಕದಲ್ಲಿ ನಮ್ಮಳ್ವಾರ್ ಮತ್ತು ನೆಲ್ ಜಯರಾಮನ್ ಆರಂಭಿಸಿದ ದೇಸಿ ಭತ್ತ ಉಳಿಸುವ ಆಂದೋಲದಿಂದಾಗಿ ನಾಶದ ಜಾಡಿನಲ್ಲಿದ್ದ ನೂರಾರು ಭತ್ತದ ತಳಿಗಳು ಮತ್ತೆ ರೈತರ ಹೊಲಕ್ಕೆ ಬಂದಿವೆ. ತಮಿಳುನಾಡು ಸರ್ಕಾರ ದೇಸಿ ತಳಿಗಳನ್ನು ಜನಪ್ರಿಯಗೊಳಿಸುವ ಯೋಜನೆ ರೂಪಿಸಿದೆ ಎಂದರು.

ದೇಸಿ ಭತ್ತ ಬೆಳೆಗಾರರ ಬಳಗದ ಪ್ರೇಮ ಮಾತನಾಡಿ, ಮಳೆ ಆಶ್ರಿತದಲ್ಲಿ ಬೆಳೆಯುವ ದೊಡ್ಯಗ, ನವಿಲು ಸಾಲಿ, ಡಂಬರ ಸಾಳಿ, ಉದುರು ಸಾಲಿ ಮೊದಲಾದ ಕೆಂಪಕ್ಕಿ ತಳಿಗಳು ನಮ್ಮಲ್ಲಿವೆ. ಸ್ಥಳೀಯವಾಗಿ ಬೇಡಿಕೆ ಇಲ್ಲದ ಕಾರಣ ಈ ರುಚಿಕರ ತಳಿಗಳು ಗೋವಾ ಮತ್ತು ಕೇರಳದ ಪಾಲಾಗುತ್ತಿವೆ. ಆರೋಗ್ಯದ ದೃಷ್ಟಿಯಿಂದ ಈ ತಳಿಗಳು ಅಮೂಲ್ಯವಾದವು. ಇವುಗಳನ್ನು ಬಳಸಲು ಗ್ರಾಹಕರು ಮುಂದಾಗಬೇಕು ಎಂದು ಹೇಳಿದರು.

ಸಹಜ ಸಮೃದ್ಧ- ಸಾವಯವ ಕೃಷಿಕರ ಬಳಗದ ನಿರ್ದೇಶಕ ಜಿ. ಕೃಷ್ಣಪ್ರಸಾದ್ ಮಾತನಾಡಿ, ಕರ್ನಾಟಕದ ರೈತ ವಿಜ್ಞಾನಿಗಳು ಸಿದ್ದ ಸಣ್ಣ, ಸಿಂಧೂರ ಮಧುಸಾಲೆ, ಅಂದನೂರು ಸಣ್ಣ, ಎನ್ಎಂಎಸ್-2 ಮೊದಲಾದ ಉತ್ತಮ ತಳಿಯ ಭತ್ತಗಳನ್ನು ಅಭಿವೃದ್ದಿಪಡಿಸಿದ್ದಾರೆ. ರೈತರ ಮೆಚ್ಚುಗೆಗೆ ಪಾತ್ರವಾಗಿರುವ ಈ ತಳಿಗಳನ್ನು ಬಿಡುಗಡೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪರಿಸರ ಮತ್ತು ಗ್ರಾಹಕರ ಆರೋಗ್ಯಕ್ಕೆ ಅಪಾಯ ತಂದೊಡ್ಡುವ ಕುಲಾಂತರಿ ಭತ್ತದ ತಳಿಗಳನ್ನು ಕೃಷಿಗೆ ತರುವ ಪ್ರಯತ್ನ ನಡೆಯುತ್ತಿದೆ. ಕುಲಾಂತರಿ ಭತ್ತದ ತಳಿಗಳು ರೈತರ ಹೊಲಕ್ಕೆ ಬರದಂತೆ ಗ್ರಾಹಕರು ಮತ್ತು ರೈತರು ಎಚ್ಚರವಹಿಸಬೇಕು ಎಂದು ಕರೆ ನೀಡಿದರು.

ಧಾರವಾಡ ಜಿಲ್ಲೆ ಕುಂದಗೋಳ ತಾಲೂಕು ತೀರ್ಥ ಗ್ರಾಮದ ಬೀಬಿ ಫಾತಿಮಾ ಮಹಿಳಾ ಸಂಘದ ಅಧ್ಯಕ್ಷೆ ಬೀಬಿ ಜಾನ್,

ಭತ್ತ ಉಳಿಸಿ ‌ಆಂದೋಲನದ ಸಂಚಾಲಕ ಸಿ.ಶಾಂತಕುಮಾರ್ ಇದ್ದರು.ದೇಸಿ ಅಕ್ಕಿ, ಭತ್ತಗಳ ಪ್ರದರ್ಶನ

ಎರಡು ದಿನಗಳ ದೇಸಿ ಅಕ್ಕಿ ಮೇಳದಲ್ಲಿ ವಿವಿಧ ರಾಜ್ಯಗಳ ನೂರಕ್ಕೂ ಹೆಚ್ಚಿನ ದೇಸಿ ಅಕ್ಕಿಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಬಂದಿದೆ. ಕೆಂಪಕ್ಕಿ, ಸುವಾಸನೆ ಅಕ್ಕಿ, ಕಪ್ಪು ಅಕ್ಕಿ, ಔಷಧಿ ಅಕ್ಕಿ, ದಪ್ಪಕ್ಕಿ ಮೊದಲಾದ ಅಪರೂಪದ ಅಕ್ಕಿಗಳ ಮತ್ತು ಅಕ್ಕಿಯ ಮೌಲ್ಯವರ್ಧಿತ ಪದಾರ್ಥಗಳ ಮಾರಾಟದ ಭರಾಟೆ ಜೋರಿದೆ.

ರಾಜ್ಯದ ವಿವಿಧ ಭಾಗಗಳ ಭತ್ತ ಸಂರಕ್ಷಕರು ತಾವು ಬೆಳೆದ ದೇಸಿ ಅಕ್ಕಿಗಳ ನೇರ ಮಾರಾಟ ಮಾಡುತ್ತಿದ್ದಾರೆ. ರಾಜಮುಡಿ, ಬರ್ಮಾ ಬ್ಲಾಕ್, ಸಿದ್ದ ಸಣ್ಣ, ರತ್ನಚೂಡಿ, ನವರ, ಗೋವಿಂದ ಭೋಗ್ , ಎಚ್ಎಂಟಿ, ಸಿಂಧೂರ ಮಧುಸಾಲೆ ಮೊದಲಾದ ಜನಪ್ರಿಯ ದೇಸಿ ಭತ್ತಗಳ ಬೀಜ ಕೂಡ ಕೊಳ್ಳಬಹುದು.

ಮೇಳದಲ್ಲಿ ಸಿರಿಧಾನ್ಯ, ತರಕಾರಿ ಬಿತ್ತನೆ ಬೀಜಗಳು, ಗೆಡ್ಡೆ ಗೆಣಸು ಮತ್ತು ಸಾವಯವ ಉತ್ಪನ್ನಗಳು, ಹಣ್ಣಿನ ಗಿಡಗಳು ಮಾರಾಟಕ್ಕೆ ಬಂದಿವೆ. ಭಾನುವಾರ ಬೆಳಗ್ಗೆ 10 ರಿಂದ ರಾತ್ರಿ 8 ರವರೆಗೆ ಅಕ್ಕಿ ಮೇಳ ನಡೆಯಲಿದೆ.ಅನ್ನ ಮಾಡಲು ಬೆಂಕಿಯೇ ಬೇಡ; ಬಿಸಿನೀರು ಸಾಕು!

ಅಸ್ಸಾಂನಿಂದ ಬಂದಿರುವ ಕೋಮಲ್ ಚಾವಲ್ ಅಕ್ಕಿಯ ಅನ್ನ ಮಾಡಲು ‌ಸ್ಟೌವ್ ಹೊತ್ತಿಸಬೇಕಿಲ್ಲ; ಉಗುರು ಬೆಚ್ಚಗಿನ ಅಥಾವ ಕುದಿ ನೀರು ಸಾಕು. ಅದರಲ್ಲಿ ಅಕ್ಕಿ ನೆನೆಸಿಟ್ಟರೆ ಹತ್ತು ನಿಮಿಷದಲ್ಲಿ ಅನ್ನ ಸಿದ್ಧ. ಮ್ಯಾಜಿಕ್ ರೈಸ್ ಎಂದು ಕರೆಯುವ ಈ ಅಕ್ಕಿಯನ್ನು ನೋಡಲು ಜನ ಮುಗಿಬಿದ್ದರು.

ಭತ್ತ ಮೊಳಕೆ ಕಟ್ಟುವುದು ನಮಗೆಲ್ಲಾ ಗೊತ್ತು. ಆದರೆ ಅಕ್ಕಿಯನ್ನೇ ಮೊಳಕೆ ಬರಿಸಿ ಆಹಾರ ತಯಾರಿಕೆಗೆ ಬಳಸುವ ಥಾಯ್ ಲ್ಯಾಂಡಿನ ವಿಧಾನವನ್ನು ಮೇಳದಲ್ಲಿ ಪ್ರಾಯೋಗಿಕವಾಗಿ ತೋರಿಸಲಾಗಿದೆ.

ತಮಿಳುನಾಡಿನ ರೈತರು ಮಾಪಿಳ್ಳೆ ಸಾಂಬ ಎಂಬ ಔಷಧೀಯ ಭತ್ತವನ್ನು ಮಾರಾಟಕ್ಕೆ ತಂದಿದ್ದಾರೆ. ಮದುಮಗ ತಿನ್ನುವ ಈ ಅಕ್ಕಿಯ ನಿರಂತರ ಬಳಕೆಯಿಂದ ಕಲ್ಲು ಗುಂಡು ಎತ್ತುವಷ್ಟು ಶಕ್ತಿ ಬರುತ್ತದಂತೆ.