ಬಿಪಿಎಲ್‌ ಕಾರ್ಡ್‌ ರದ್ದತಿ: ಮಾನದಂಡ ಬದಲಿಸಿ!

| Published : Sep 26 2025, 01:00 AM IST

ಬಿಪಿಎಲ್‌ ಕಾರ್ಡ್‌ ರದ್ದತಿ: ಮಾನದಂಡ ಬದಲಿಸಿ!
Share this Article
  • FB
  • TW
  • Linkdin
  • Email

ಸಾರಾಂಶ

ಬಿಪಿಎಲ್‌ ಕಾರ್ಡ್‌ಗಳು ರದ್ದಾಗುವುದಿಲ್ಲ. ಬದಲಿಗೆ ಎಪಿಎಲ್‌ ಕಾರ್ಡ್‌ಗಳಾಗಿ ಮಾರ್ಪಡಾಗುತ್ತವೆ ಎಂದು ಅಧಿಕಾರಿ ವರ್ಗ ಹೇಳುತ್ತದೆ. ಆದರೆ, ಬಿಪಿಎಲ್‌ಗೆ ಸಿಗುವಷ್ಟು ಸೌಲಭ್ಯ ಸಿಗುವುದಿಲ್ಲವಾದ್ದರಿಂದ ಎಪಿಎಲ್‌ ಇದ್ದರೂ ಅಷ್ಟೇ. ಇಲ್ಲದಿದ್ದರೂ ಅಷ್ಟೇ ಎಂಬ ಅಸಮಾಧಾನ ಜನರದ್ದು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ರಾಜ್ಯ ಸರ್ಕಾರ ಏಕಾಏಕಿ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸುತ್ತಿರುವುದಕ್ಕೆ ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೇ, ಇದಕ್ಕೆ ಅನುಸರಿಸುತ್ತಿರುವ ಮಾನದಂಡಗಳೇ ಸರಿಯಿಲ್ಲ. ಹೀಗಾಗಿ ಮಾನದಂಡ ಬದಲಿಸಬೇಕೆಂಬ ಕೂಗು ಜೋರಾಗಿದೆ.

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿಗಳಲ್ಲಿ ಅನ್ನಭಾಗ್ಯವೂ ಒಂದು. ಬಿಪಿಎಲ್‌ ಕಾರ್ಡ್‌ದಾರರ ಪ್ರತಿ ಸದಸ್ಯನಿಗೂ ಹತ್ತು ಕಿಜಿ ಅಕ್ಕಿ, ಜೋಳ ಸೇರಿದಂತೆ ವಿವಿಧ ಪಡಿತರ ವಿತರಿಸಲಾಗುತ್ತಿದೆ. ಆದರೆ, ಇದೀಗ ಸರ್ಕಾರ ಕೊಡುವ ಪಡಿತರ ಸಾಕಷ್ಟು ದುರುಪಯೋಗವಾಗುತ್ತಿರುವುದು ಕಂಡು ಬರುತ್ತಿದೆ. ಇಲ್ಲಿನ ಅನ್ನಭಾಗ್ಯ ಅಕ್ಕಿ ವಿದೇಶಗಳಿಗೆ ರವಾನೆಯಾಗುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿ ಅನರ್ಹರನ್ನು ತೆಗೆಯಬೇಕು ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಈ ಹಿನ್ನೆಲೆಯಲ್ಲಿ ಅನರ್ಹ ಕಾರ್ಡ್‌ ರದ್ದುಪಡಿಸಲು ಸರ್ಕಾರ ಯೋಚಿಸಿದೆ. ಅದನ್ನು ಜಾರಿ ಕೂಡ ಮಾಡುತ್ತಿದೆ.

ರದ್ದತಿ ಹೇಗೆ?:

ವಾರ್ಷಿಕ ಆದಾಯ ಗರಿಷ್ಠ ₹ 1.20 ಲಕ್ಷ ಮಾತ್ರ ಇರಬೇಕು. ಇನ್ನು 7.5 ಎಕರೆ ಜಮೀನು ಮಾತ್ರ ಇರಬೇಕು. ವೈಟ್‌ ಬೋರ್ಡ್‌ ಕಾರ್‌ ಇರಬಾರದು ಎಂಬ ನಿಯಮಗಳಿವೆ. ಇದಕ್ಕಿಂತ ಹೆಚ್ಚಿದ್ದರೆ ಅಂಥ ಕಾರ್ಡ್‌ಗಳನ್ನು ರದ್ದುಪಡಿಸಲಾಗುತ್ತಿದೆ. ಪ್ರತಿ ನ್ಯಾಯಬೆಲೆ ಅಂಗಡಿಗಳಲ್ಲಿ ಎಷ್ಟು ಜನ ಕಾರ್ಡ್‌ದಾರರಿದ್ದಾರೆ. ಅದರಲ್ಲಿ ಯಾರ್ಯಾರು ಇನಕಂ ಟ್ಯಾಕ್ಸ್‌ ರಿಟರ್ನ್‌ ಫೈಲ್‌ ಮಾಡುತ್ತಾರೆ ಎಂಬುದರ ಆಧಾರದ ಮೇಲೆ ಅವರ ಇನಕಂ ಎಷ್ಟಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಯಾವ ರೈತರ ಖಾತೆಗೆ ರೈತ ಸಮ್ಮಾನ ಸೇರಿದಂತೆ ಸರ್ಕಾರದ ಯೋಜನೆ ಹಣ ಜಮೆಯಾಗುತ್ತದೆ ಎಂಬುದರ ಮೇಲೆ ಎಷ್ಟು ಜಮೀನು ಹೊಂದಿದ್ದಾರೆ. ಇನ್ನು ಆರ್‌ಟಿಒ ಕಚೇರಿಯಲ್ಲಿ ವೈಟ್‌ ಬೋರ್ಡ್‌ ಕಾರ್‌ಗಳು ಯಾರ ಬಳಿ ಇವೆ ಎಂಬುದೆಲ್ಲವೂ ಇದೀಗ ಸಲೀಸಾಗಿ ಗೊತ್ತಾಗುತ್ತದೆ.

ಏಕೆಂದರೆ ಪ್ರತಿಯೊಂದಕ್ಕೂ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿರುವುದರಿಂದ ಎಲ್ಲ ಮಾಹಿತಿಯೂ ಕ್ಷಣದಲ್ಲೇ ಗೊತ್ತಾಗುತ್ತಿದೆ. ಅದರ ಆಧಾರದ ಮೇಲೆ ಕಾರ್ಡ್‌ಗಳನ್ನು ರದ್ದುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ ಎಲ್ಲ ನ್ಯಾಯಬೆಲೆ ಅಂಗಡಿಗಳ ಎದುರಿಗೆ ಯಾರ್‍ಯಾರು ಬಿಪಿಎಲ್‌ ಕಾರ್ಡ್‌ಗೆ ಅನರ್ಹರಾಗಿದ್ದಾರೋ ಅವರ ಹೆಸರು, ಕಾರ್ಡ್‌ ಸಂಖ್ಯೆಗಳನ್ನೆಲ್ಲ ಬರೆದು ಅಂಟಿಸಲಾಗಿದೆ. ಅಂಗಡಿಕಾರರು, ಅಗತ್ಯ ದಾಖಲೆ ತಂದು ಕೊಡುವಂತೆ ಸೂಚನೆಯನ್ನೂ ನೀಡಿರುವುದುಂಟು.

ರದ್ದಾಗಲ್ಲ; ಎಪಿಎಲ್‌ ಆಗ್ತವೆ:

ಹಾಗೆ ನೋಡಿದರೆ ಇರುವ ಬಿಪಿಎಲ್‌ ಕಾರ್ಡ್‌ಗಳು ರದ್ದಾಗುವುದಿಲ್ಲ. ಬದಲಿಗೆ ಎಪಿಎಲ್‌ ಕಾರ್ಡ್‌ಗಳಾಗಿ ಮಾರ್ಪಡಾಗುತ್ತವೆ ಎಂದು ಅಧಿಕಾರಿ ವರ್ಗ ಹೇಳುತ್ತದೆ. ಆದರೆ, ಬಿಪಿಎಲ್‌ಗೆ ಸಿಗುವಷ್ಟು ಸೌಲಭ್ಯ ಸಿಗುವುದಿಲ್ಲವಾದ್ದರಿಂದ ಎಪಿಎಲ್‌ ಇದ್ದರೂ ಅಷ್ಟೇ. ಇಲ್ಲದಿದ್ದರೂ ಅಷ್ಟೇ ಎಂಬ ಅಸಮಾಧಾನ ಜನರದ್ದು.

ಆಕ್ರೋಶ:

ವಾರ್ಷಿಕ ಆದಾಯ ₹ 1.20 ಲಕ್ಷಕ್ಕೆ ಸೀಮಿತಗೊಳಿಸಿರುವುದು ಯಾವ ಮಾನದಂಡ. ಅಂದರೆ ತಿಂಗಳಿಗೆ ₹ 10 ಸಾವಿರ ಸಂಬಳ ಪಡೆಯಬೇಕಾಗುತ್ತದೆ. ಸರ್ಕಾರವೇ ಕನಿಷ್ಠ ವೇತನ ನಿಯಮದ ಪ್ರಕಾರ ಕೆಲಸ ಮಾಡುವ ಕಾರ್ಮಿಕರ ಸಂಬಳವೂ ಕೂಡ ವರ್ಷಕ್ಕೆ ₹ 15ರಿಂದ ₹ 18 ಸಾವಿರ ದಾಟುತ್ತದೆ. ಇನ್ನು ಗಾರೆ ಕೆಲಸ ಮಾಡುವ ಮೇಸ್ತ್ರಿಗೆ ದಿನಕ್ಕೆ ಕನಿಷ್ಠ ₹1000ದಿಂದ ₹ 1200 ಸಂಬಳ ಪಡೆಯುತ್ತಾರೆ. ಸಹಾಯಕರಾಗಿ ಬರುವವರು ಕೆಲಸ ಮಾಡುವವರಿಗೂ ಸಹ ದಿನಕ್ಕೆ ₹ 700 ಪಡೆಯುತ್ತಾರೆ. ಇನ್ನು ವಾರ್ಷಿಕ ಆದಾಯ ₹ 1.20 ಲಕ್ಷ ನಿಗದಿಪಡಿಸಿದರೆ ಹೇಗೆ? ಪ್ರಶ್ನೆ ಸಾರ್ವಜನಿಕರದ್ದು.

ಸರ್ಕಾರ ಕೂಡಲೇ ನಿಗದಿಪಡಿಸಿರುವ ಮಾನದಂಡಗಳ ತಿದ್ದುಪಡಿ ಮಾಡಬೇಕು. ಕನಿಷ್ಠ ವೇತನದಡಿ ಕನಿಷ್ಠ ₹ 3 ಲಕ್ಷವಾದರೂ ವಾರ್ಷಿಕ ಆದಾಯ ಸೀಮಿತಗೊಳಿಸಬೇಕು ಎಂದು ಆಗ್ರಹಿಸುತ್ತಾರೆ.ವಾರ್ಷಿಕ ಆದಾಯ ₹ 1.20 ಲಕ್ಷಗೆ ನಿಗದಿಪಡಿಸಿರುವುದು ಎಷ್ಟು ಸರಿ. ಇಷ್ಟು ಆದಾಯ ಈಗ ಯಾರಿಗೆ ಇರಲ್ಲ ಹೇಳಿ. ಕೂಡಲೇ ಸರ್ಕಾರ ಬಿಪಿಎಲ್‌ ಕಾರ್ಡ್‌ಗಳ ಮಾನದಂಡ ಬದಲಿಸಬೇಕು.

ನಾಗರಾಜ ಪಾಟೀಲ, ಸಾರ್ವಜನಿಕಧಾರವಾಡ ಜಿಲ್ಲೆಯಲ್ಲಿ 3.90 ಲಕ್ಷ ಬಿಪಿಎಲ್‌ ಕಾರ್ಡ್‌ದಾರರಿದ್ದಾರೆ. ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸುತ್ತಿಲ್ಲ. ಎಪಿಎಲ್‌ ಕಾರ್ಡ್‌ಗಳನ್ನಾಗಿ ಮಾರ್ಪಡಾಗಲಿವೆ. ಆದಾಯ ಹೆಚ್ಚಾಗಿದ್ದವರನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ.

ವಿನೋದಕುಮಾರ ಹೆಗ್ಗಳಗಿ, ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಧಾರವಾಡ