ಸಾರಾಂಶ
ಹಾವೇರಿ: ಪ್ಯಾನ್ ಕಾರ್ಡ್‌ಗೆ ಆಧಾರ್ ಲಿಂಕ್ ವಿಳಂಬಕ್ಕೆ ಆದಾಯ ತೆರಿಗೆ ಇಲಾಖೆಗೆ ದಂಡ ಪಾವತಿಸಿದ್ದ ಬಿಪಿಎಲ್ ಕಾರ್ಡ್ ಕುಟುಂಬಗಳನ್ನು ಆದಾಯ ತೆರಿಗೆ ಪಾವತಿದಾರರ ಪಟ್ಟಿಗೆ ಸೇರಿಸಿ, ರಾಜ್ಯದ ಒಂದು ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್‌ಗಳನ್ನು ಕಡಿತ ಮಾಡಿರುವುದನ್ನು ಡಿವೈಎಫ್ಐ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೇಂದ್ರ ಸರ್ಕಾರ ಈ ಹಿಂದೆ ಬಿಪಿಎಲ್ ಕಾರ್ಡ್ ಪರಿಶೀಲನೆಗೆ ಪ್ಯಾನ್ ನಂಬರ್‌ಗೆ ಆಧಾರ್ ಲಿಂಕ್ ಮಾಡಬೇಕೆಂದು ಆದೇಶ ನೀಡಿತ್ತು. ಜನರಿಗೆ ಇದರ ಕುರಿತು ಸರಿಯಾದ ಮಾಹಿತಿ ಇಲ್ಲದ್ದರಿಂದ ನಿಗದಿತ ಗಡುವಿನೊಳಗೆ ಆಧಾರ್ ಲಿಂಕ್ ಮಾಡಲು ಸಾಧ್ಯವಾಗಲಿಲ್ಲ. ಕೇಂದ್ರ ಸರ್ಕಾರ ದಂಡ ವಿಧಿಸಿತು. ತಡವಾಗಿ ಲಿಂಕ್ ಮಾಡಿದವರು ಒಂದು ಸಾವಿರ ರುಪಾಯಿ ದಂಡ ಪಾವತಿಸಿದ್ದರು. ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆ ದಂಡವನ್ನೇ ಆದಾಯವೆಂದು ಪರಿಗಣಿಸಿತು. ಇದು ಬಡವರನ್ನು ಸೌಲಭ್ಯಗಳಿಂದ ಹೊರದೂಡಿತು. ಇದು ನಿಚ್ಛಳವಾಗ ಕೇಂದ್ರ ಸರ್ಕಾರವು ಬಡಜನತೆಗೆ ಗೈದ ಮಹಾದ್ರೋಹವಾಗಿದೆ ಎಂದು ಹೇಳಿದ್ದಾರೆ.ಈಚೆಗೆ ಕರ್ನಾಟಕ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಬಿಪಿಎಲ್ ಕಾರ್ಡ್‌ಗಳ ಅರ್ಹತೆ ಪರಿಶೀಲನೆ ಮಾಡಲು ಉಪಕ್ರಮಿಸಿ ಸರಿಯಾಗಿ ಗಮನಿಸದೆ, ದಂಡ ಪಾವತಿ ಮಾಡಿದವರನ್ನು ಆದಾಯ ತೆರಿಗೆ ಪಾವತಿದಾರರ ಪಟ್ಟಿಗೆ ಸೇರಿಸಿದೆ. ಮಾತ್ರವಲ್ಲ, ಅದೇ ನೆಪದಲ್ಲಿ ರಾಜ್ಯದ ಸುಮಾರು ಒಂದು ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್‌ಗಳನ್ನು ಅವಸರದಲ್ಲಿ ರದ್ದು ಮಾಡಿದೆ. ಇದರಿಂದ, ರಾಜ್ಯದ ಅಪಾರ ಸಂಖ್ಯೆಯ ನೈಜ ಬಿಪಿಎಲ್ ಕಾರ್ಡ್‌ದಾರರು ತೊಂದರೆಗೊಳಗಾಗಿದ್ದಾರೆ. ಈಗ ಅವರಿಗೆ ಸೌಲಭ್ಯ ಪಡೆಯಬೇಕೆಂದರೆ ಆದಾಯ ತೆರಿಗೆ ಇಲಾಖೆಯಿಂದ ನಿರಾಪೇಕ್ಷಣ ಪತ್ರ ತರಬೇಕೆಂದು ಕೇಳಲಾಗುತ್ತಿದೆ. ಇದು ಬಡಜನರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡುವ ನಡೆಯಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ತಕ್ಷಣವೇ ಬಿಪಿಎಲ್ ಕಾರ್ಡ್ ರದ್ದತಿ ಕ್ರಮ ವಾಪಸ್ ಪಡೆಯಬೇಕು ಮತ್ತು ಅಲ್ಲಿಯ ವರೆಗೆ ಫಲಾನುಭವಿಗಳಾಗಿ ಸೌಲಭ್ಯ ಪಡೆಯಲು ಅನುವಾಗುವಂತೆ ಅಗತ್ಯ ಕ್ರಮವಹಿಸಬೇಕು. ಅದೇ ರೀತಿ ಆದಾಯ ತೆರಿಗೆ ಇಲಾಖೆಗೆ ದಂಡ ಕಟ್ಟಿದ ಈ ಬಡ ಕುಟುಂಬಗಳನ್ನು ಆದಾಯ ತೆರಿಗೆ ಪಾವತಿದಾರರ ಪಟ್ಟಿಯಿಂದ ತೆಗೆಯಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದ್ದಾರೆ.