ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆಗೆ ಹಣ ಒದಗಿಸಲಾಗದೆ ಬಿಪಿಎಲ್ ಕಾರ್ಡ್‌ಗಳನ್ನು ಕಡಿತಗೊಳಿಸುವ ಹುನ್ನಾರ ನಡೆಸುತ್ತಿರುವುದು ಸರಿಯಲ್ಲ ಸರ್ಕಾರ ಕೂಡಲೆ ಕೈಬಿಡಬೇಕೆಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.ನಗರದ ತಮ್ಮ ಗೃಹ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಚುನಾವಣೆಯಲ್ಲಿ ಹೇಳಿದ್ದೇ ಒಂದು ಈಗ ಮಾಡುತ್ತಿರುವುದು ಮತ್ತೊಂದಾಗಿದೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಈಗ ಹಣ ಸಾಕಾಗಾದೆ ಸರ್ಕಾರ ಹೊಸ ಹೊಸ ನಿಯಮಗಳನ್ನು ಜಾರಿಗೆ ತಂದು ಬಡ ವರ್ಗದ ಜನರ ಬದುಕನ್ನು ಕಸಿಯುತ್ತಿದೆ. ಇದೀಗ ಸರ್ಕಾರ ಗೃಹಲಕ್ಷ್ಮೀ ಯೋಜನೆಯ ನೆಪವೊಡ್ಡಿ ಒಂದು ಲಕ್ಷದ ೨೦ಸಾವಿರ ಆದಾಯ ಹೊಂದಿರುವ ಬಿಪಿಎಲ್ ಕಾರ್ಡ್‌ದಾರರ ಕಾರ್ಡ್‌ಗಳನ್ನು ವಜಾಗೊಳಿಸುವ ಹುನ್ನಾರ ನಡೆಸುತ್ತಿದೆ. ಇದರಿಂದ ಬಡವರು, ರೈತರು, ಕೂಲಿ ಕಾರ್ಮಿಕರಿಗೆ ಅನ್ಯಾಯವಾಗಲಿದೆ. ಎಲ್ಲರ ಆದಾಯ ಒಂದು ಲಕ್ಷ ಇದ್ದೇ ಇರುತ್ತದೆ. ಜೀವನ ನಿರ್ವಹಣೆಗೆಂದು ಲೋನ್ ಮೂಲಕ ಕಾರು ಖರೀದಿಸಿ ಜೀವನ ಮಾಡುತ್ತಿರುತ್ತಾರೆ. ಆಸ್ಪತ್ರೆ ಖರ್ಚು ಸೇರಿದಂತೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಬಿಪಿಎಲ್ ಕಾರ್ಡ್ ಅನಿವಾರ್ಯ. ಇದು ತಿಳಿದಿದ್ದರೂ ಗೃಹಲಕ್ಷ್ಮೀ ಯೋಜನೆಗೆ ಹಣ ಹೊಂದಿಸಲಾಗದೆ ಇಂತಹ ನಡೆಯನ್ನು ಸರ್ಕಾರ ಕೈಗೊಂಡಿರುವುದು ಸರಿಯಲ್ಲ. ತಾಲೂಕಿನಲ್ಲಿ ೫೨ಸಾವಿರ ಬಿಪಿಎಲ್ ಕಾರ್ಡ್‌ದಾರರಿದ್ದು ಸರ್ಕಾರ ನಿಗದಿಪಡಿಸಿರುವ ಮಾನದಂಡದಂತೆ ಇಲ್ಲಿ ೨೦-೩೦ಸಾವಿರ ಬಿಪಿಎಲ್ ಕಾರ್ಡುದಾರರು ಕಾರ್ಡ್‌ಗಳು ವಜಾಗೊಳ್ಳಲಿವೆ. ಒಂದು ತಾಲೂಕಿನಲ್ಲೇ ಸಾವಿರಾರು ಕಾರ್ಡ್‌ಗಳು ವಜಗೊಂಡರೆ ರಾಜ್ಯದಲ್ಲಿ ಲಕ್ಷಾಂತರ ಕಾರ್ಡ್‌ಗಳು ಕಡಿತವಾಗಲಿದ್ದು, ತೆರಿಗೆ ಕಟ್ಟುತ್ತಿರುವ ಹಾಗೂ ಸರ್ಕಾರಿ ಅಧಿಕಾರಿಗಳನ್ನು ಮಾತ್ರ ಗುರ್ತಿಸಿ ಕಾರ್ಡ್‌ಗಳನ್ನು ವಜಾಗೊಳಿಸಿ. ಕೂಲಿ ಮಾಡಿ ಜೀವನ ನಡೆಸುತ್ತಿರುವ ಬಡವರು, ನಿರ್ಗತಿಕರ ಮೇಲೆ ಸರ್ಕಾರ ಪ್ರಹಾರ ಮಾಡದಿರಲಿ. ಒಂದು ವೇಳೆ ಇದು ಮುಂದುವರೆದರೆ ಜನರೇ ರೊಚ್ಚಿಗೇಳಲಿದ್ದಾರೆಂದು ಎಚ್ಚರಿಸಿದರು. ತಾಲೂಕಿನಲ್ಲಿ ಪ್ರತಿ ವರ್ಷವೂ ಯೂರಿಯಕ್ಕೆ ರೈತರು ಪರದಾಡುವಂತಾಗಿದೆ. ರೈತರು ದುಪ್ಪಟ್ಟು ಹಣ ನೀಡಿ ಕಾಳ ಸಂತೆಯಲ್ಲಿ ರಸದಗೊಬ್ಬರ ಖರೀದಿಸುವಂತಾಗಿದೆ. ರೈತರಿಗೆ ಸಮಪರ್ಕ ಗೊಬ್ಬರ ಒದಗಿಸುವಲ್ಲಿ ಇಲ್ಲಿನ ಶಾಸಕರು ವಿಫಲರಾಗಿದ್ದು ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಧೋರಣೆ ಬಿಟ್ಟು ರೈತರಿಗೆ ಬೇಕಾದ ಅಗತ್ಯ ಪರಿಕರಗಳನ್ನು ವಿತರಣೆ ಮಾಡಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಶಿವಸ್ವಾಮಿ, ನಗರಾಧ್ಯಕ್ಷ ಕಂಚಘಟ್ಟ ರಾಜು, ಯುವ ಘಟಕದ ಅಧ್ಯಕ್ಷ ಸುದರ್ಶನ್, ಮುಖಂಡರಾದ ಚಂದ್ರಶೇಖರ್, ರಾಜಶೇಖರ್, ಕುಮಾರ್, ಚನ್ನೇಗೌಡ, ಲೋಕೇಶ್, ಶ್ರೀನಿವಾಸ್ ಮತ್ತಿತರರಿದ್ದರು. ------------------