ರಾಜ್ಯ ಸರ್ಕಾರ ದಿವಾಳಿಯಾಗಿದ್ದರಿಂದ ಬಿಪಿಎಲ್‌ ಕಾರ್ಡ್‌ ಕಡಿತ : ಸಚಿವ ಪ್ರಹ್ಲಾದ ಜೋಶಿ ಕಿಡಿ

| Published : Nov 18 2024, 12:02 AM IST / Updated: Nov 18 2024, 01:19 PM IST

prahlad joshi
ರಾಜ್ಯ ಸರ್ಕಾರ ದಿವಾಳಿಯಾಗಿದ್ದರಿಂದ ಬಿಪಿಎಲ್‌ ಕಾರ್ಡ್‌ ಕಡಿತ : ಸಚಿವ ಪ್ರಹ್ಲಾದ ಜೋಶಿ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಾಲೋಚನೆ, ಯೋಜನಾ ಬದ್ಧವಿಲ್ಲದ ಗ್ಯಾರಂಟಿಗಳನ್ನು ಜಾರಿಗೊಳಿಸಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ: ರಾಜ್ಯ ಸರ್ಕಾರ ಆರ್ಥಿಕವಾಗಿ‌ ದಿವಾಳಿಯಾಗಿದ್ದರಿಂದ ಪಡಿತರ ಚೀಟಿಗಳನ್ನು ಕಡಿತ ಮಾಡುತ್ತಿದೆ. ಈ ರೀತಿಯಾಗಿ ದಿಢೀರನೇ ಬಿಪಿಎಲ್ ಕಾರ್ಡ್ ಏಕೆ ಕಡಿತ‌ ಮಾಡುತ್ತಿದೆ ಎಂಬುದು ತಿಳಿಯುತ್ತಿಲ್ಲ‌. ಈ ಕುರಿತು ರಾಜ್ಯದ ಆಹಾರ ಸಚಿವರೊಂದಿಗೆ ಚರ್ಚಿಸುವೆ ಎಂದು‌ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ಪ್ರತಿಯೊಬ್ಬ ಅರ್ಹ ಪಡಿತರದಾರನಿಗೆ 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಕನಿಷ್ಠ ಬೆಂಬಲ‌ ಬೆಲೆಯಲ್ಲಿ‌ ಗೋಧಿ, ಭತ್ತ ಇನ್ನಿತರ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗುತ್ತದೆ. ಇಷ್ಟಾದರೂ ಪಡಿತರ ಚೀಟಿ‌ ಕಡಿತ ಯಾಕೆ ಮಾಡುತ್ತಿದ್ದಾರೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಈ ರೀತಿ ಮಾಡಿದರೆ ಬಡವರಿಗೆ ತೊಂದರೆ ಆಗುತ್ತದೆ. ಇದಕ್ಕೆಲ್ಲ ಮುಂದಾಲೋಚನೆ, ಯೋಜನಾ ಬದ್ಧವಿಲ್ಲದ ಗ್ಯಾರಂಟಿಗಳನ್ನು ಜಾರಿಗೊಳಿಸಿರುವುದೇ ಈ ಸಮಸ್ಯೆಗೆ ಕಾರಣ‍ವಾಗಿದೆ ಎಂದು ಹರಿಹಾಯ್ದರು.

ದಿವಾಳಿಯತ್ತ ಸಾಗಿದೆ

ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಒಂದು ಗ್ಯಾರಂಟಿಯೂ ಸಮರ್ಪಕವಾಗಿ ಜಾರಿಗೆ ತಂದಿಲ್ಲ. ಕೊಡಲೂ ಆಗದ, ಬಿಡಲೂ ಆಗದ ಸ್ಥಿತಿ ರಾಜ್ಯ ಸರ್ಕಾರದ್ದಾಗಿದೆ. ಹಲವು ಯೋಜನೆಗಳು ಬಂದ್‌ ಆಗಿವೆ. ಬಹುತೇಕ ಎಲ್ಲ ಗ್ಯಾರಂಟಿಗಳು ಅರ್ಧಕ್ಕೆ ನಿಂತಿದೆ. ಇದನ್ನೆಲ್ಲ ನೋಡಿದರೆ ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ದಿವಾಳಿಯತ್ತ ಮುಖಮಾಡಿದೆ ಎಂಬುದು ಗೊತ್ತಾಗುತ್ತಿದೆ ಎಂದರು.

ಭಿನ್ನಾಭಿಪ್ರಾಯ ಬದಿಗಿಡಿ

ರಾಜ್ಯದಲ್ಲಿ ವಕ್ಫ್‌ನಿಂದಾಗಿ ಉಂಟಾಗುತ್ತಿರುವ ಸಮಸ್ಯೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತ್ಯೇಕ ಹೋರಾಟ ನಡೆಸಲು ಮುಂದಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಜೋಶಿ, ರಾಜ್ಯ ನಾಯಕರು ಮೊದಲು ತಮ್ಮಲ್ಲಿರುವ ಭಿನ್ನಾಭಿಪ್ರಾಯ ಬದಿಗೊತ್ತಿ ವಕ್ಫ್ ವಿರುದ್ಧ ಒಗ್ಗಟ್ಟಾಗಿ ಹೋರಾಡುವಂತೆ ಕಿವಿಮಾತು ಹೇಳಿದರು.

ವಕ್ಫ್ ಹಿಂದೂ ಸಮಾಜಕ್ಕೆ ಬಂದಿರುವ ದೊಡ್ಡ ಕಂಟಕ. ನಿಮ್ಮ ನಡುವೆ ಭಿನ್ನಾಭಿಪ್ರಾಯಗಳು ಏನೇ ಇರಲಿ ಒಟ್ಟಿಗೆ ಕುಳಿತು ಚರ್ಚಿಸಿ, ಒಟ್ಟಾಗಿ ಹೋರಾಟ ಮಾಡಿ ಎಂದು ಕರೆ ನೀಡಿದರು.

ಕಾಂಗ್ರೆಸ್‌ ಕ್ಷಮೆ ಕೇಳಲಿ

ಬಿಜೆಪಿ ವಿರುದ್ಧ 40% ಕಮಿಷನ್ ಆರೋಪ ವಿಚಾರ ತನಿಖೆ ನಡೆಸಿರುವ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿದೆ. 40% ಕಮಿಷನ್ ವಿಚಾರವಾಗಿ ಲೋಕಾಯುಕ್ತ ತನಿಖೆ ಮಾಡಿ ವರದಿ ಕೊಟ್ಟಿದೆ. ಈ ಹಿಂದೆ ಬಿಜೆಪಿ ವಿರುದ್ಧ ಆರೋಪ ಮಾಡಿದ್ದ ಕಾಂಗ್ರೆಸ್ ಬಹಿರಂಗ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಶಾಸಕರು ಕುರಿ, ಕೋಣಗಳೇ?: ಜೋಶಿ

ಹುಬ್ಬಳ್ಳಿ: ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಅವರೇನು ಕುರಿ, ಕೋಣ, ಕತ್ತೆಗಳೇ? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿಯವರು ಕಾಂಗ್ರೆಸ್‌ ಶಾಸಕರನ್ನು ಖರೀದಿಸುತ್ತಿದ್ದಾರೆ ಎಂಬ ಮುಖ್ಯಮಂತ್ರಿ ಹೇಳಿಕೆಗೆ ತಿರುಗೇಟು ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿಗಳು ತಮ್ಮ ಮತ್ತು ಸರ್ಕಾರದ ಮೇಲಿರುವ ಆರೋಪಗಳ ವಿಷಯಾಂತರಕ್ಕೆ ಹೀಗೆಲ್ಲ ಹೇಳುತ್ತಿದ್ದಾರೆ ಅಷ್ಟೆ. ಶಾಸಕರ ಸಾರ್ವಜನಿಕ ಬದುಕನ್ನು ಹೀಗೆ ಕಲುಷಿತಗೊಳಿಸುವ ಕೆಲಸವನ್ನು ಮುಖ್ಯಮಂತ್ರಿ ಆದವರು ಮಾಡಬಾರದು. ಕಾಂಗ್ರೆಸಿಗರು ಹೀಗೆ ಹುಚ್ಚು ರೀತಿ ಮಾತನಾಡುವುದರಿಂದ ಪ್ರಜಾಪ್ರಭುತ್ವದ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ ಎಂದು ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದರು.

ಬಿಜೆಪಿ ₹50 ಕೋಟಿ ಆಫರ್ ನೀಡಿದೆ ಎಂದು ಅಥವಾ ಮಧ್ಯವರ್ತಿಯನ್ನು ಹೆಸರಿಸಿ ಕಾಂಗ್ರೆಸ್‌ನ ಒಬ್ಬ ಶಾಸಕರಾದರೂ ಹೇಳಿದ್ದಾರೆಯೇ ಎಂದು ಪ್ರಶ್ನಿಸಿದ ಜೋಶಿ, ಮುಖ್ಯಮಂತ್ರಿ ಆದವರು ಸ್ವಲ್ಪ ಜವಾಬ್ದಾರಿ ಅರಿತು ಮಾತನಾಡಬೇಕಾಗುತ್ತದೆ ಎಂದು ಕುಟುಕಿದರು.

ಸಿಎಂ, ಮತ್ತವರ ತಂಡದ ಆರೋಪ ನೋಡಿದರೆ ಕಾಂಗ್ರೆಸ್ ಶಾಸಕರನ್ನು ಇವರು ಮಾರುಕಟ್ಟೆಯಲ್ಲಿ ಇಟ್ಟಂತೆ ಕಾಣುತ್ತದೆ. ಮಾರುಕಟ್ಟೆಯಲ್ಲಿ ಸಿಗುವುದು ಕುರಿ, ಕೋಣ, ಕತ್ತೆಗಳು ಶಾಸಕರಲ್ಲ ಎಂದು ಹರಿಹಾಯ್ದರು.

ಒಬ್ಬೊಬ್ಬ ಶಾಸಕರಿಗೆ ₹50 ಕೋಟಿ ಅಂದರೆ ₹2500 ಕೋಟಿ ಆಗುತ್ತದೆ. ಸಿಎಂಗೆ ಸ್ವಲ್ಪವಾದರೂ ಬುದ್ಧಿ ಇದೆಯೇ? ಎಂದು ಪ್ರಶ್ನಿಸಿದ ಜೋಶಿ, ಮುಖ್ಯಮಂತ್ರಿ ರಾಜಕಾರಣ ಮಾಡಬೇಕೆಂಬ ಕಾರಣಕ್ಕೆ ಹೀಗೆ ಏನೆಲ್ಲ ಹೇಳುವುದು ಸರಿಯಲ್ಲ ಎಂದರು.