ಸಾರಾಂಶ
ಚಿಂತಾಮಣಿ : ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕೈವಾರದ ಅಮರನಾರೇಯಣಸ್ವಾಮಿ ಬ್ರಹ್ಮರಥೋತ್ಸವವು ಫಾಲ್ಗುಣ ಮಾಸದ ಹೋಳಿ ಹುಣ್ಣಿಮೆಯ ಮಾ. ೧೪ರಂದು ಶುಕ್ರವಾರ ಮಧ್ಯಾಹ್ನ ೧ ಗಂಟೆಗೆ ನೆರವೇರಲಿದೆ. ರಥೋತ್ಸವದ ಅಂಗವಾಗಿ ದೇವಾಲಯದ ಪ್ರಾಂಗಣದಲ್ಲಿ ಶ್ರೀ ಕೃಷ್ಣ ಗಂಧೋತ್ಸವ ಸೇವೆಯನ್ನು ಸದ್ಗುರು ಶ್ರೀ ಯೋಗಿನಾರೇಯಣ ತಾತಯ್ಯನವರ ವತಿಯಿಂದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಸಲ್ಲಿಸುವರು.
ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ೧೮ ದಿನಗಳ ಪೂಜಾ ಕೈಂಕರ್ಯಗಳನ್ನು ಅಂಕುರಾರ್ಪಣೆ, ಧ್ವಜಾರೋಹಣ ಸೇವೆಯೊಂದಿಗೆ ಬ್ರಹ್ಮರಥೋತ್ಸವದ ಪೂಜೆಗಳು ಆರಂಭವಾಗಿವೆ. ಅಂಕುರಾರ್ಪಣೆಯ ಅಂಗವಾಗಿ ಹೋಮವನ್ನು ಹಮ್ಮಿಕೊಳ್ಳಲಾಗಿತ್ತು. ಗರುಡಧ್ವಜವನ್ನು ರಥಬೀದಿಯಲ್ಲಿ ಪ್ರದಕ್ಷಿಣೆಯೊಂದಿಗೆ ಮೆರವಣಿಗೆಯನ್ನು ಮಾಡಲಾಯಿತು. ದೇವಾಲಯದ ಧ್ವಜಸ್ತಂಭದ ಬಳಿ ಪೂಜೆಯನ್ನು ಸಲ್ಲಿಸಿ ಧ್ವಜಾರೋಹಣವನ್ನು ನೆರವೇರಿಸಲಾಯಿತು.ಶ್ರೀದೇವಿ- ಭೂದೇವಿ ಸಮೇತ ಶ್ರೀಅಮರನಾರೇಯಣಸ್ವಾಮಿಯ ಉತ್ಸವ ವಿಗ್ರಹಗಳ ಮಂಟಪೋತ್ಸವವು ನೆರವೇರಿತು. ಬಲಿಪೀಠಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಪ್ರತಿದಿನವೂ ರಾತ್ರಿ ವಿಶೇಷ ಸಿಂಹವಾಹನೋತ್ಸವ, ಹನುಮಂತವಾಹನೋತ್ಸವ, ಶೇಷವಾಹನೋತ್ಸವ, ಗರುಡೋತ್ಸವ, ಚಿತ್ರಗೋಪುರೋತ್ಸವ ಮುಂತಾದ ಹಲವಾರು ವಾಹನೋತ್ಸವಗಳನ್ನು ಹಮ್ಮಿಕೊಳ್ಳಲಾಗಿದೆ.
ಸದ್ಗುರು ತಾತಯ್ಯನವರ ರಥೋತ್ಸವ:ಮಾ.೧೫ರ ಶನಿವಾರ ತ್ರಿಕಾಲಜ್ಞಾನಿ, ಸದ್ಗುರು ಯೋಗಿನಾರೇಯಣ ಯತೀಂದ್ರ ತಾತಯ್ಯನವರ ರಥೋತ್ಸವವನ್ನು ಮಧ್ಯಾಹ್ನ ೧೨.೩೦ ಗಂಟೆಗೆ ನಡೆಸಲಾಗುತ್ತದೆ. ರಥೋತ್ಸವದ ಎರಡೂ ದಿನಗಳಂದು ಸದ್ಗುರು ತಾತಯ್ಯನವರ ಉತ್ಸವ ವಿಗ್ರಹಕ್ಕೆ ವಿಶೇಷ ಅಭಿಷೇಕ, ಅಷ್ಟಾವಧಾನಸೇವೆ ಏರ್ಪಡಿಸಲಾಗುತ್ತದೆ. ರಥೋತ್ಸವದ ದಿನಗಳಲ್ಲಿ ನಾದಸುಧಾರಸ ವೇದಿಕೆಯಲ್ಲಿ ವಿಶೇಷ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.