- ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಎತ್ತ ಸಾಗುತ್ತಿದೆ? । ಉಪ ರಾಷ್ಟ್ರಪತಿ, ರಾಜ್ಯಪಾಲರ ಗಮನಕ್ಕೂ ತಂದ ಟಿಜಿಎ ಪದಾಧಿಕಾರಿಗಳು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಡ, ಮಧ್ಯಮ ವರ್ಗ, ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲಾ ಜಾತಿ, ವರ್ಗಗಳ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಶಿಕ್ಷಣ ಸಿಗಲೆಂಬ ಸದುದ್ದೇಶದಿಂದ ದಾವಣಗೆರೆಯ ಉದ್ಯಮಿಗಳಾಗಿದ್ದ ಬ್ರಹ್ಮಪ್ಪ ತವನಪ್ಪನವರ ಕುಟುಂಬದ ಸಹಕಾರದಿಂದ ಸ್ಥಾಪನೆಯಾದ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜು ಈಗ ವಾಣಿಜ್ಯೀಕರಣಗೊಂಡಿದೆ. ಆಡಳಿತಾತ್ಮಕ ನಿರ್ಲಕ್ಷ್ಯ, ವಿದ್ಯಾರ್ಥಿಗಳ ಹಿತಾಸಕ್ತಿಗಿಂತ ಆದಾಯ ಸಂಗ್ರಹಣೆಗೆ ಹೆಚ್ಚು ಒತ್ತು ನೀಡುತ್ತಿರುವುದು ಈಗ ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿಗಳು, ಪಾಲಕರನ್ನು ಆಂತಕಕ್ಕೆ ನೂಕಿದೆ ಎಂದು ಟೆಕ್ನಿಕಲ್ ಗ್ರಾಜ್ಯುಯೇಚ್ಸ್ ಅಸೋಸಿಯೇಷನ್ ಆತಂಕ ವ್ಯಕ್ತಪಡಿಸಿದೆ.

ಬೆಳಗಾವಿಯ ವಿಟಿಯು ಅಧೀನಕ್ಕೆ ಒಳಪಡುವ ದಾವಣಗೆರೆ ಯುಬಿಡಿಟಿ ಕಾಲೇಜು 1951ರಲ್ಲಿ ಸ್ಥಾಪನೆಯಾಗಿತ್ತು. ಈ ಹಿಂದೆ ಮೈಸೂರು ವಿವಿ, ನಂತರ ಶಿವಮೊಗ್ಗದ ಕುವೆಂಪು ವಿವಿ, ಆನಂತರ ದಾವಣಗೆರೆ ವಿ.ವಿ. ವ್ಯಾಪ್ತಿಗೆ ಒಳಪಟ್ಟಿತ್ತು. ಈಗ ವಿಟಿಯು ಅಧೀನದ ಘಟಕ ಕಾಲೇಜಾಗಿ ಮಾರ್ಪಟ್ಟಿದ್ದು, 8 ಪದವಿ, 7 ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌.ಡಿ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳಿಗೆ ಆಸರೆಯಾಗಿದೆ. ಆದರೆ, ಕಾಲೇಜು ಸ್ಥಾಪನೆ ಮೂಲ ಉದ್ದೇಶ ಈಗ ಉಳಿದಿಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ವ್ಯಕ್ತವಾಗುತ್ತಿದೆ ಎಂದು ಸಂಸ್ಥೆ ಉಪಾಧ್ಯಕ್ಷ ಬಿ.ಎಚ್. ಗಿರೀಶಕುಮಾರ, ಪ್ರಧಾನ ಕಾರ್ಯದರ್ಶಿ ಕೆ.ಅಂಬರೀಷ್ ತಿಳಿಸಿದ್ದಾರೆ.


ಯುಬಿಡಿಟಿ ಹಾಗೂ ಇತರೆ ಘಟಕ ಕಾಲೇಜುಗಳ ಶುಲ್ಕ ಭಾರ, ಸಂಸ್ಥೆಯ ಆದ್ಯತೆಗಳು, ತಾಂತ್ರಿಕ ಶಿಕ್ಷಣದ ಕುಸಿಯುತ್ತಿರುವ ಗುಣಮಟ್ಟದ ಬಗ್ಗೆ ಮೇ 29ರಂದು ದಾವಣಗೆರೆ ಯುಬಿಡಿಟಿ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭಕ್ಕೆ ಆಗಮಿಸುತ್ತಿರುವ ಉಪ ರಾಷ್ಟ್ರಪತಿ, ರಾಜ್ಯಪಾಲರು ಗಮನಹರಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸಂಸ್ಥೆಯಿಂದ ಮನವಿ ಮಾಡಿದ್ದೇವೆ. ಬಿಟಿ ಕುಟುಂಬದ ದೇಣಿಕೆಯಿಂದ ಸ್ಥಾಪಿತ ಯುಬಿಡಿಟಿ ಕಾಲೇಜು ರಾಜ್ಯದ ಅತ್ಯಂತ ಹಳೆಯ ಹಾಗೂ ಗೌರವಾನ್ವಿತ ಸರ್ಕಾರಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿದೆ. ಈಗ ಸಂಸ್ಥೆಯ ಮೂಲ ಉದ್ದೇಶ ಗ್ರಾಮೀಣ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೈಗೆಟುಕುವ ಮತ್ತು ಗುಣಮಟ್ಟದ ತಾಂತ್ರಿಕ ಶಿಕ್ಷಣ ಒದಗಿಸುವುದಾಗಿತ್ತು. ಆದರೆ, ಈಗ ಹೆಚ್ಚುತ್ತಿರುವ ವಾಣಿಜ್ಯೀಕರಣ, ಆಡಳಿತಾತ್ಮಕ ನಿರ್ಲಕ್ಷ್ಯ ಹಾಗೂ ವಿದ್ಯಾರ್ಥಿ ಹಿತಾಸಕ್ತಿಗಳಿಗಿಂತ ಆದಾಯ ಸಂಗ್ರಹಣೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಬೇಸರ ಹೊರಹಾಕಿದ್ದಾರೆ.

ವಿಟಿಯು ಯುಬಿಡಿಟಿ ಕಾಲೇಜಿನಲ್ಲಿ ಪ್ರವೇಶ ಸಾಮರ್ಥ್ಯ ಹೆಚ್ಚಿಸುವ ಜೊತೆಗೆ “ಸಾಮಾನ್ಯ ಶುಲ್ಕ” ಹಾಗೂ “ಹೆಚ್ಚು ಶುಲ್ಕದ ಪೇಮೆಂಟ್ ಸೀಟ್” ಎಂಬ ದ್ವಂದ್ವ ಶುಲ್ಕ ವ್ಯವಸ್ಥೆ ಜಾರಿಗೊಳಿಸಿರುವುದು ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಮೇಲೆ ಭಾರೀ ಆರ್ಥಿಕ ಒತ್ತಡ ಹಾಕುತ್ತಿದೆ. ವರ್ಷಕ್ಕೆ ಸುಮಾರು ₹1 ಲಕ್ಷವರೆಗೆ ಶುಲ್ಕ ವಿಧಿಸುತ್ತಿರುವುದರಿಂದ ರೈತರು, ಕೂಲಿ ಕಾರ್ಮಿಕರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಬಹುತೇಕ ಅಸಾಧ್ಯವಾಗಿದೆ. ರೈತರು, ಕೂಲಿ ಕಾರ್ಮಿಕರು, ದಿನಗೂಲಿ ಕಾರ್ಮಿಕರು, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ಕುಟುಂಬಗಳ ಮೇಲೆ ನೇರ ಪರಿಣಾಮ ಬೀರುವ ಕಾರಣದಿಂದ ವಿದ್ಯಾರ್ಥಿಗಳು, ಪೋಷಕರು, ಹಳೇ ವಿದ್ಯಾರ್ಥಿಗಳು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ವ್ಯಾಪಕ ಆಕ್ಷೇಪಕ್ಕೂ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ.

ಬಡ, ಮಧ್ಯಮ ವರ್ಗದ ಕುಟುಂಬಗಳ ವಿದ್ಯಾರ್ಥಿಗಳಿಗೆ 4 ವರ್ಷದ ಅವದಿಗೆ ಕೇವಲ ಟ್ಯೂಷನ್ ಶುಲ್ಕವಾಗಿಯೇ ಸುಮಾರು ₹4 ಲಕ್ಷ ವೆಚ್ಚ ಮಾಡುವುದು, ಅದಕ್ಕೂ ಮೀರಿ ವಸತಿ, ಸಂಚಾರ, ಆಹಾರ, ಪುಸ್ತಕ ಮತ್ತು ಇತರೆ ವೆಚ್ಚ ಭರಿಸುವುದು ಕಷ್ಟ ಸಾಧ್ಯ. ರಾಜ್ಯದ ಇತರೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಇನ್ನೂ ಕೈಗೆಟಕುವ ಶಿಕ್ಷಣದ ಮೂಲ ಉದ್ದೇಶವನ್ನು ಉಳಿಸಿಕೊಂಡಿರುವಾಗ ವಿಟಿಯು ಘಟಕ ಸಂಸ್ಥೆಗಳಾದ ಯುಬಿಡಿಟಿ ಕಾಲೇಜಿನಲ್ಲಿ ಮಾತ್ರ ಈ ಭೇದಭಾವಪೂರ್ಣ ಶುಲ್ಕ ವ್ಯವಸ್ಥೆಯನ್ನು ಜಾರಿಗೊಳಿಸಿರುವುದು ಅತ್ಯಂತ ಪ್ರಶ್ನಾರ್ಹವಾಗಿದೆ ಎಂದಿದ್ದಾರೆ.

ಕಾಲೇಜಿನ ಅನೇಕ ವಿಭಾಗ ಮುಖ್ಯಸ್ಥರು ಹಾಗೂ ಹಿರಿಯ ಅಧ್ಯಾಪಕರು ಸಂಸ್ಥೆಯ ಮೂಲ ಧ್ಯೇಯ ಮತ್ತು ದೀರ್ಘಕಾಲೀನ ಹಿತಾಸಕ್ತಿ ರಕ್ಷಿಸುವುದಕ್ಕಿಂತ ಆದಾಯ, ವೇತನ, ಆರ್ಥಿಕ ಸೌಲಭ್ಯ ಹಾಗೂ ಆಡಳಿತಾತ್ಮಕ ಅನುಕೂಲತೆಗಳ ಬಗ್ಗೆ ಹೆಚ್ಚು ಚಿಂತಿಸುತ್ತಿರುವಂತೆ ಕಾಣುತ್ತಿದೆ. ವಿವಿ ಅಧಿಕಾರಿಗಳಿಗೆ ಜೀ ಹುಜೂರ್ ಎನ್ನುತ್ತಾ ತಮ್ಮ ವೈಯಕ್ತಿಕ ಹಿತಾಸಕ್ತಿ ಕಾಪಾಡಿಕೊಳ್ಳುವತ್ತ ಕೆಲವರು ಹೆಚ್ಚು ಒತ್ತು ನೀಡಿರುವುದು ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳಲ್ಲಿ ಬೇಸರ ಹಾಗೂ ನಿರಾಶೆಗೆ ಕಾರಣ‍ವಾಗಿದೆ. ಇಂದು ಕೆಲ ಅಧ್ಯಾಪಕರು ವೇದಿಕೆಗಳ ಮೇಲೆ ದಾನಿಗಳ ಕುಟುಂಬವನ್ನು ಎಷ್ಟೇ ಹೊಗಳಿದರೂ, ಬಿಟಿ ಕುಟುಂಬದವರು ದಾನವಾಗಿ ನೀಡಿದ ಸಂಸ್ಥೆಯ ಮೂಲ ಉದ್ದೇಶವೇ ಕ್ರಮೇಣ ಮರೆಯಾಗುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ. ಬಡ ವಿದ್ಯಾರ್ಥಿಗಳ ಮೇಲೆ ಹೆಚ್ಚುವರಿ ಆರ್ಥಿಕ ಭಾರ ಹೇರುವ ನಿರ್ಧಾರ ಅಂಗೀಕರಿಸಿದಾಗ, ವಿಭಾಗ ಮುಖ್ಯಸ್ಥರು ಹಾಗೂ ಹಿರಿಯ ಅಧ್ಯಾಪಕರು ಏಕೆ ವಿರೋಧ ವ್ಯಕ್ತಪಡಿಸಲಿಲ್ಲ ಎಂದು ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

- - -

-28ಕೆಡಿವಿಜಿ7, 8: ದಾವಣಗೆರೆ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜು.