ಜನಿವಾರ ಕತ್ತರಿಸಿದ ಘಟನೆಗೆ ಬ್ರಾಹ್ಮಣ ಸಮಾಜ ಆಕ್ರೋಶ

| Published : Apr 22 2025, 01:50 AM IST

ಸಾರಾಂಶ

ಹಿಂದು ವಿದ್ಯಾರ್ಥಿಗಳ ಜನಿವಾರ ಹಾಗೂ ಶಿವ ದಾರವನ್ನು ಕತ್ತರಿಸಿದ್ದು ಅಮಾನವೀಯ ಕೃತ್ಯ. ಹೀನ ಕೃತ್ಯ ನಡೆಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸುವ ಎಚ್ಚರಿಕೆ.

ಧಾರವಾಡ: ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ರಾಜ್ಯಾದ್ಯಂತ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ಘಟನೆ ಖಂಡಿಸಿ ಸೋಮವಾರ ಧಾರವಾಡ ತಾಲೂಕು ಬ್ರಾಹ್ಮಣ ಸಭಾ ಹಾಗೂ ಹಿಂದು ಪರ ಸಂಘಟನೆಗಳ ವತಿಯಿಂದ ಬೃಹತ್​ ಪ್ರತಿಭಟನೆ ನಡೆಸಲಾಯಿತು.

ಕೋರ್ಟ್​ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಹೊತ್ತು ಪ್ರತಿಭಟನೆ ನಡೆಸಿ, ಮೆರವಣಿಗೆ ಮೂಲಕ ಜಿಲ್ಲಾ ಪಂಚಾಯಿತಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಸರ್ಕಾರ, ಸಿದ್ಧರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ, ಸಾಗರ, ಬೀದರ ಹಾಗೂ ಧಾರವಾಡ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸುವ ಕೆಲಸ ಮಾಡಿದ್ದಾರೆ. ಇಂತಹ ಸಮಾಜ ವಿರೋಧಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಲಾಯಿತು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ, ಹಿಂದು ವಿದ್ಯಾರ್ಥಿಗಳ ಜನಿವಾರ ಹಾಗೂ ಶಿವ ದಾರವನ್ನು ಕತ್ತರಿಸಿದ್ದು ಅಮಾನವೀಯ ಕೃತ್ಯ. ಹೀನ ಕೃತ್ಯ ನಡೆಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ವಿಧಾನಪರಿಷತ್​ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಕಾಂಗ್ರೆಸ್​ ಸರ್ಕಾರ ಹಿಂದೂ ವಿರೋಧಿ ಸರ್ಕಾರ. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ಮರುಕಳಿಸದಂತೆ ಸರ್ಕಾರ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಆಗ್ರಹಿಸಿದರು. ನಂತರ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪೂರ್ಣಪ್ರಜ್ಞಾಚಾರ್ಯ ಮಳಗಿ, ಸಂದೀಪಾಚಾರ್ಯ ಪುರೋಹಿತ, ಪ್ರಮೋದಾಚಾರ್ಯ ಚಂದಿ, ಹನಮಂತ ಡಂಬಳ, ಆರ್​.ಡಿ. ಕುಲಕರ್ಣಿ, ಪೂರ್ಣಾ ಪಾಟೀಲ, ವಿವೇಕ ಏರಿ, ಹನುಮಂತ ಕೊಟಬಾಗಿ, ರಾಜೀವ ಪಾಟೀಲ ಕುಲಕರ್ಣಿ, ಪ್ರಮೋದ ಕಾರಕೂನ, ಅನುದೀಪ ಕುಲಕರ್ಣಿ, ಜಯತೀರ್ಥ ಮಳಗಿ, ವಿನಾಯಕ ಜೋಶಿ ಮತ್ತಿತರರು ಇದ್ದರು.

ದೀಪಕ ಚಿಂಚೊರೆಯೊಂದಿಗೆ ವಾಗ್ವಾದ: ಪ್ರತಿಭಟನೆ ಸಂದರ್ಭದಲ್ಲಿ ಕಾಂಗ್ರೆಸ್​ ಮುಖಂಡ ದೀಪಕ ಚಿಂಚೋರೆ ಬ್ರಾಹ್ಮಣ ಸಮುದಾಯದವರಾಗಿ ಪಾಲ್ಗೊಂಡಿದ್ದರು. ಆದರೆ, ಪ್ರತಿಭಟನಾಕಾರರು ಸರ್ಕಾರ ಹಾಗೂ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಂತೆ ದೀಪಕ ಅವರಿಗೆ ಇರಿಸುಮುರಿಸು ಪ್ರಸಂಗ ಉಂಟಾಯಿತು. ಸರ್ಕಾರದ ವಿರುದ್ಧ ಘೋಷಣೆ ಕೂಗದಂತೆ ಚಿಂಚೋರೆ ಹೇಳಿದರು. ಅಲ್ಲದೇ, ಮಹಾರಾಷ್ಟ್ರದಲ್ಲಿ ನಟ ಅನುರಾಗ ಕಷ್ಯಪ್‌ ಬ್ರಾಹ್ಮಣ ಸಮುದಾಯದ ವಿರುದ್ಧ ಹೇಳಿಕೆ ನೀಡಿದ್ದು ಅವರ ವಿರುದ್ಧ ಏತಕ್ಕೆ ಪ್ರತಿಭಟನೆ ಮಾಡಿಲ್ಲ ಎಂದರು. ಇದರಿಂದ ಕೆರಳಿದ ಹಿಂದುಪರ ಸಂಘಟನೆ ಪದಾಧಿಕಾರಿಗಳು ದೀಪಕ ಚಿಂಚೋರೆ ಜತೆಗೆ ಕೆಲ ಹೊತ್ತು ವಾಗ್ವಾದ ನಡೆಸಿದರು. ಬಳಿಕ ದೀಪಕ ಚಿಂಚೋರೆ ಪ್ರತಿಭಟನಾ ಸ್ಥಳದಿಂದ ತೆರಳಿದರು.