ಸಾರಾಂಶ
ಬೆಂಗಳೂರು : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷೀಯ ಚುನಾವಣೆ-2025ರಲ್ಲಿ ಎಸ್. ರಘುನಾಥ್ ಚುನಾಯಿತರಾಗಿದ್ದಾರೆ.
ಭಾನುವಾರ ಬನಶಂಕರಿ 2ನೇ ಹಂತದ ಗಾಯತ್ರಿ ಭವನದಲ್ಲಿ ನಡೆದ ಚುನಾವಣೆಯಲ್ಲಿ ಎಸ್.ರಘುನಾಥ್ 13,399 ಮತಗಳನ್ನು ಪಡೆದರೆ ಪ್ರತಿಸ್ಪರ್ಧಿ ಭಾನುಪ್ರಕಾಶ್ ಶರ್ಮ ಅವರು 11,235 ಮತಗಳನ್ನು ಪಡೆದರು. 2,164 ಮತಗಳಿಂದ ಎಸ್. ರಘುನಾಥ್ ಜಯಶೀಲರಾದರು. ಇವರು 2025-30ರ ಅವಧಿಗೆ ಅಧ್ಯಕ್ಷರಾಗಿರುತ್ತಾರೆ ಎಂದು ಚುನಾವಣಾಧಿಕಾರಿಗಳ ಕಚೇರಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯದಲ್ಲಿ 66 ಸಾವಿರ ಮತದಾರರಿದ್ದು, ಬೆಂಗಳೂರು ನಗರ ಪ್ರದೇಶದಲ್ಲಿ 34 ಸಾವಿರ ಮತದಾರರು ಇದ್ದಾರೆ. ಭಾನುವಾರ ಬೆಳಗ್ಗೆ 8 ರಿಂದ 4 ಗಂಟೆಗೆವರಗೆ ಮತದಾನ ನಡೆಯಿತು. ನಂತರ ಮತ ಏಣಿಕೆ ಕಾರ್ಯ ಜರುಗಿತು. ಬೆಂಗಳೂರು ನಗರ ಪ್ರದೇಶದಲ್ಲಿ 8 ಜಿಲ್ಲಾ ಪ್ರತಿನಿಧಿ ಸ್ಥಾನಗಳಿಗೆ, ದಕ್ಷಿಣ ಜಿಲ್ಲಾ ಪ್ರತಿನಿಧಿ 4 ಸ್ಥಾನ ಹಾಗೂ ಕೇಂದ್ರ ಜಿಲ್ಲಾ ಪ್ರತಿನಿಧಿ 2 ಸ್ಥಾನ, ಉತ್ತರ ಜಿಲ್ಲಾ ಪ್ರತಿನಿಧಿ 2 ಸ್ಥಾನಕ್ಕೆ ಚುನಾವಣೆ ನಡೆಯಿತು.
ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಪ್ರತಿಕ್ರಿಯಿಸಿದ ಎಸ್. ರಘುನಾಥ್, ರಾಜ್ಯದಲ್ಲಿ ಬ್ರಾಹ್ಮಣರ ಜನಸಂಖ್ಯೆ 45 ಲಕ್ಷ ಇದೆ. ನಮ್ಮಲ್ಲಿ ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಪೌರೋಹಿತ್ಯ, ಅಡುಗೆ ಕೆಲಸ ಮಾಡುವವರು ಹಾಗೂ ಅರ್ಚಕ ವೃತ್ತಿ ಮಾಡುವವರು ಹಾಗೂ ಇನ್ನಿತರೆ ವೃತ್ತಿ ಮಾಡುವವರ ಮಕ್ಕಳ ಶಿಕ್ಷಣ, ಉದ್ಯೋಗಕ್ಕೆ ಹೆಚ್ಚಿನ ಅವಕಾಶ ಒದಗಿಸಲು ಪ್ರಯತ್ನಿಸುತ್ತೇನೆ. ಬ್ರಾಹ್ಮಣ ಸಮುದಾಯದ ಮಕ್ಕಳ ಶಿಕ್ಷಣ ಮತ್ತು ಆರ್ಥಿಕವಾಗಿ ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿ ತರಲು ಕೆಲಸ ಮಾಡುತ್ತೇನೆ ಎಂದು ಹೇಳಿದರು.