ಮಂಡ್ಯ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಇಂದು ಬ್ರಾಹ್ಮಣ ಸಭಾ ಪ್ರತಿಭಟನೆ

| Published : Apr 22 2025, 01:47 AM IST

ಮಂಡ್ಯ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಇಂದು ಬ್ರಾಹ್ಮಣ ಸಭಾ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾನ್ಯ ಜ್ಞಾನ ಪರೀಕ್ಷಾ ನಿಯಮಗಳಲ್ಲಿ ಜನಿವಾರ ತೆಗೆದು ಪರೀಕ್ಷೆ ಬರೆಯಬೇಕು ಎಂಬ ನಿಯಮವಿಲ್ಲವಾದರೂ ಅಧಿಕಾರಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ದೃಷ್ಟಿಯಿಂದ ಬ್ರಾಹ್ಮಣ ವಿದ್ಯಾರ್ಥಿಗಳನ್ನು ಉದ್ದೇಶ ಪೂರ್ವಕವಾಗಿ ಗುರಿಯಾಗಿಸಿಕೊಂಡು ಈ ರೀತಿಯ ಕೃತ್ಯವೆಸಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜನಿವಾರ ಧರಿಸಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ಬರೆಯಲು ಅನುಮತಿ ನೀಡದ ಕ್ರಮ ಖಂಡಿಸಿ ಏ.22ರಂದು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬ್ರಾಹ್ಮಣ ಸಭಾದ ಜಿಲ್ಲಾಧ್ಯಕ್ಷ ಪ್ರೊ.ಎಚ್.ಎಸ್.ನರಸಿಂಹಮೂರ್ತಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆ ಬರೆಯಲು ಅನುಮತಿ ನೀಡದೆ ಬ್ರಾಹ್ಮಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತಂದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮತ್ತೆ ಈ ರೀತಿಯ ಅಹಿತರ ಘಟನೆ ನಡೆಯದಂತೆ ಕ್ರಮ ವಹಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಮಂಡ್ಯ ನಗರದ ಎಸ್.ಎಂ.ವಿಶ್ವೇಶ್ವರಯ್ಯ ಪ್ರತಿಮೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆ ನಡೆಸಿದ ನಂತರ ಕೆಲಕಾಲ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ರವಾನಿಸಲಾಗುವುದು ಎಂದರು.

ಸಮಾಜ ದ್ರೋಹಿ ಮನಸ್ಥಿತಿಗಳ ಅವಿವೇಕಿತನ ಅತಿರೇಕಕ್ಕೆ ಹೋಗುತ್ತಿದೆ. ಜನಿವಾರ ತೆಗೆದು ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಹೇಳಿ ಬ್ರಾಹ್ಮಣ ವಿದ್ಯಾರ್ಥಿಗಳನ್ನು ಪರೀಕ್ಷೆ ವಂಚಿತರನ್ನಾಗಿಸಿದ್ದಾರೆ ಎಂದು ದೂರಿದರು.

ಸಾಮಾನ್ಯ ಜ್ಞಾನ ಪರೀಕ್ಷಾ ನಿಯಮಗಳಲ್ಲಿ ಜನಿವಾರ ತೆಗೆದು ಪರೀಕ್ಷೆ ಬರೆಯಬೇಕು ಎಂಬ ನಿಯಮವಿಲ್ಲವಾದರೂ ಅಧಿಕಾರಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ದೃಷ್ಟಿಯಿಂದ ಬ್ರಾಹ್ಮಣ ವಿದ್ಯಾರ್ಥಿಗಳನ್ನು ಉದ್ದೇಶ ಪೂರ್ವಕವಾಗಿ ಗುರಿಯಾಗಿಸಿಕೊಂಡು ಈ ರೀತಿಯ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಿದರು.

ಹಿಂದೂ ಸಂಪ್ರದಾಯದಲ್ಲಿ ಮುತ್ತೈದೆಯರಿಗೆ ಮಾಂಗಲ್ಯದಂತೆ ವಿಪ್ರರಿಗೆ ಜನಿವಾರವೂ ಮುಖ್ಯ ಎಂಬುದನ್ನು ಸರ್ಕಾರ ಗಮನದಲ್ಲಿರಿಸಿಕೊಂಡು ಅದನ್ನು ತೆಗೆಸಿ ಪರೀಕ್ಷೆ ಬರೆಯಬೇಕು ಎಂಬ ಮನಸ್ಥಿತಿ ತೋರಿದವರ ವಿರುದ್ಧ ಕಾನೂನಾತ್ಮ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಗೋಪಾಲಕೃಷ್ಣ ಶಣೈ, ಖಜಾಂಚಿ ಎಸ್.ಶ್ರೀಧರ್, ಎಸ್.ಶಂಕರನಾರಾಯಣ ಶಾಸ್ತ್ರಿ, ಜಿ.ವಿ.ನಾಗರಾಜ್, ಸತ್ಯನಾರಾಯಣ್, ಪ್ರಭಾಕರ್, ರಾಘು ಇದ್ದರು.