ಬ್ರೇನ್‌ ಟ್ಯೂಮರ್‌: 7 ತಿಂಗಳ ಕೂಸಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

| Published : Jun 30 2024, 12:50 AM IST

ಬ್ರೇನ್‌ ಟ್ಯೂಮರ್‌: 7 ತಿಂಗಳ ಕೂಸಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡದ ದಂಪತಿಗೆ ಜನಿಸಿದ ಈ ಮಗುವಿಗೆ ಹುಟ್ಟಿದಾಗಲೇ ದೊಡ್ಡದಾದ ತಲೆ, ಮೂಗು ಸೋರುವಿಕೆ, ಕಿವಿ ಕೇಳದಿರುವಿಕೆ ಸಮಸ್ಯೆಯಿತ್ತು. ಕಣ್ಣುಗಳು ಹೊರಗೆ ಚಾಚಿಕೊಂಡಿದ್ದರಿಂದ ಮಲಗಿದಾಗಲೂ ಮಗು ಕಣ್ಣು ಬಿಟ್ಟುಕೊಂಡೇ ಮಲಗಿರುವಂತೆ ಭಾಸವಾಗುತ್ತಿತ್ತು.

ಹುಬ್ಬಳ್ಳಿ:

ಹುಟ್ಟುವಾಗಲೇ ಬ್ರೇನ್ ಟ್ಯೂಮರ್ (ಮೆದುಳಿನ‌ ಗಡ್ಡೆ) ಹಾಗೂ ಅಪರೂಪದ ಎನ್.ಎಫ್. 1 ನೂನನ್ ಸಿಂಡ್ರೋಮ್ (ಅನುವಂಶಿಕತೆ ಕಾಯಿಲೆ)ನಿಂದ ಬಳಲುತ್ತಿದ್ದ 7 ತಿಂಗಳ ಗಂಡು ಮಗುವಿಗೆ ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸುವಲ್ಲಿ ಹುಬ್ಬಳ್ಳಿಯ ಶ್ರೀಬಾಲಾಜಿ ನರರೋಗ ಆಸ್ಪತ್ರೆಯ ತಜ್ಞ ವೈದ್ಯರು ಯಶಸ್ವಿಯಾಗಿದ್ದಾರೆ.

ಧಾರವಾಡದ ದಂಪತಿಗೆ ಜನಿಸಿದ ಈ ಮಗುವಿಗೆ ಹುಟ್ಟಿದಾಗಲೇ ದೊಡ್ಡದಾದ ತಲೆ, ಮೂಗು ಸೋರುವಿಕೆ, ಕಿವಿ ಕೇಳದಿರುವಿಕೆ ಸಮಸ್ಯೆಯಿತ್ತು. ಕಣ್ಣುಗಳು ಹೊರಗೆ ಚಾಚಿಕೊಂಡಿದ್ದರಿಂದ ಮಲಗಿದಾಗಲೂ ಮಗು ಕಣ್ಣು ಬಿಟ್ಟುಕೊಂಡೇ ಮಲಗಿರುವಂತೆ ಭಾಸವಾಗುತ್ತಿತ್ತು, ಜತೆಗೆ ಮೂರ್ಚೆ (ಫಿಟ್ಸ್), ಉಸಿರಾಟ ತೊಂದರೆ ಸಹ ಕಾಣುತ್ತಿತ್ತು. ಬೇರೆಡೆ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿರಲಿಲ್ಲ. ಚಿಕಿತ್ಸೆಯ ಒಂದೆರೆಡು ದಿನದ ನಂತರ ಮತ್ತೆ ಸಮಸ್ಯೆ ಮರುಕಳಿಸುತ್ತಿತ್ತು. ಕೊನೆಗೆ ವೈದ್ಯರು ಎಂಆರ್‌ಐ ಸ್ಕ್ಯಾನ್ ಮಾಡಿಸಿದಾಗ ಮೆದುಳಿನಲ್ಲಿ ಗಡ್ಡೆ ಹಾಗೂ ನೀರು ತುಂಬಿಕೊಂಡಿರುವುದು ಕಂಡು ಬಂದಿತು.

ಶ್ರೀ ಬಾಲಾಜಿ ಆಸ್ಪತ್ರೆಗೆ ಬಂದು ಪೋಷಕರು ಮಗುವನ್ನು ತೋರಿಸಿದ್ದರು. ಮಗುವನ್ನು ಇನ್ನಷ್ಟು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಅಪರೂಪದ ಎನ್‌ಎಫ್‌ 1 ನೂನನ್‌ ಸಿಂಡ್ರೋಮ್‌ನಿಂದ ಬಳಲುತ್ತಿರುವುದು ಮತ್ತು ಎಂಆರ್‌ಐ ವರದಿಯಲ್ಲಿ ಮಗುವಿನ ಎಡಭಾಗದ ಮೆದುಳಿನಲ್ಲಿ ಟ್ಯೂಮರ್ ಇರುವುದು ಪತ್ತೆಯಾಯಿತು.

ಬಳಿಕ ಸತತ ನಾಲ್ಕು ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಮೆದುಳಿನ ಗಡ್ಡೆ ತೆಗೆದಿದ್ದರು. ಇದೀಗ ಮಗು ಚೇತರಿಸಿಕೊಳ್ಳುತ್ತಿದೆ.

ಈ ಕುರಿತು ಆಸ್ಪತ್ರೆ ಚೇರಮನ್‌ ಡಾ. ಕ್ರಾಂತಿಕಿರಣ ಮಾತನಾಡಿ, ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆತಂದಾಗ ಮಗುವಿನಲ್ಲಿನ ಅಸಹಜ ಬೆಳವಣಿಗೆ ಬಗ್ಗೆ ಅನುವಂಶಿಕತೆ ಪರೀಕ್ಷೆ ಮಾಡಿ ಮಗುವಿನ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಲಾಯಿತು. ಎನ್.ಎಫ್. 1 ಸಿಂಡ್ರೋಮ್ ಜತೆಗೆ ಮಗುವಿಗೆ ಬ್ರೇನ್ ಟ್ಯೂಮರ್ ಇದ್ದಿದ್ದರಿಂದ ಪದೇ ಪದೇ ಮೂರ್ಚೆ (ಫಿಟ್ಸ್) ಹೋಗುತ್ತಿತ್ತು. ಶಸ್ತ್ರಚಿಕಿತ್ಸೆ ಮೂಲಕ ಗಡ್ಡೆಯನ್ನು ಹೊರತೆಗೆಯಲಾಗಿದೆ. ಮಗು ಈಗ ಚೇತರಿಸಿಕೊಳ್ಳುತ್ತಿದೆ. ಇಂಥ ಅಪರೂಪದ ಪ್ರಕರಣ ವಿಶ್ವದಲ್ಲೇ ಕೆಲವೇ ಕೆಲ ಪ್ರಕರಣದಲ್ಲಿ ಕಂಡು ಬರುತ್ತವೆ. ಇದೀಗ ಮಗುವನ್ನು ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.

ಶಸ್ತ್ರಚಿಕಿತ್ಸಾ ತಂಡದಲ್ಲಿ ಡಾ. ಕ್ರಾಂತಿಕಿರಣ, ಡಾ. ಇತಿ ಸಿಂಗ್ ಪರಮಾರ್, ಡಾ. ಪ್ರಕಾಶ ವಾರಿ, ಡಾ. ಭೀಮಾಶಂಕರ, ಆಸ್ಪತ್ರೆಯ ಇತರೆ ವೈದ್ಯಕೀಯ ಸಿಬ್ಬಂದಿ ಇದ್ದರು.