ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳ, ಬೇಸಿಗೆಯಲ್ಲಿ ಬರಿದಾಗುತ್ತದೆ. ಮಾತ್ರವಲ್ಲ, ಗಬ್ಬೆದ್ದು ವಾಸನೆಯಿಂದ ನಾರುತ್ತದೆ. ಕಾರಣ ಅಶಿಸ್ತಿನ ವರ್ತನೆ. ಎಲ್ಲ ಕಸ, ತ್ಯಾಜ್ಯವನ್ನು ಜನರು, ರಹವಾಸಿಗಳು, ವ್ಯಾಪಾರಿಗಳು ಹಳ್ಳಕ್ಕೆ ತಂದು ಸುರಿಯುತ್ತಾರೆ. ಸಹಜವಾಗಿ ಹಳ್ಳ ಮಳೆಗಾಲದಲ್ಲಿ ನೀರಿನಿಂದ ತುಂಬಿ ಹರಿದರೆ, ಬೇಸಿಗೆಯಲ್ಲಿ ಕಸಗಳಿಂದಲೇ ತುಂಬಿಕೊಂಡಿರುತ್ತದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳ, ಬೇಸಿಗೆಯಲ್ಲಿ ಬರಿದಾಗುತ್ತದೆ. ಮಾತ್ರವಲ್ಲ, ಗಬ್ಬೆದ್ದು ವಾಸನೆಯಿಂದ ನಾರುತ್ತದೆ. ಕಾರಣ ಅಶಿಸ್ತಿನ ವರ್ತನೆ. ಎಲ್ಲ ಕಸ, ತ್ಯಾಜ್ಯವನ್ನು ಜನರು, ರಹವಾಸಿಗಳು, ವ್ಯಾಪಾರಿಗಳು ಹಳ್ಳಕ್ಕೆ ತಂದು ಸುರಿಯುತ್ತಾರೆ. ಸಹಜವಾಗಿ ಹಳ್ಳ ಮಳೆಗಾಲದಲ್ಲಿ ನೀರಿನಿಂದ ತುಂಬಿ ಹರಿದರೆ, ಬೇಸಿಗೆಯಲ್ಲಿ ಕಸಗಳಿಂದಲೇ ತುಂಬಿಕೊಂಡಿರುತ್ತದೆ.

ಬನಹಟ್ಟಿ ಹೃದಯ ಭಾಗದ ಶ್ರೀ ಕಾಡಸಿದ್ಧೇಶ್ವರ ದೇವಸ್ಥಾನದ ಬಲಭಾಗದ ಇಳಿಜಾರು ಪ್ರದೇಶದಲ್ಲಿ ಹಾಯ್ದು ಹೋಗುವ ಹಳ್ಳವೇ ಈಗ ತ್ಯಾಜ್ಯದಿಂದ ತುಂಬಿಕೊಂಡು ಗಬ್ಬೆದ್ದು ನಾರುವ ಪರಿಸ್ಥಿತಿಗೆ ಬಂದಿದೆ. ಈ ವಾಸನೆಗೆ ಕಾರಣವೇನು ಎಂದು ಕಾರಣಗಳೇನು ಎಂದು ಹುಡುಕಿಕೊಂಡು ಹೊರಟರೆ ಆಶ್ಚರ್ಯವಾಗುತ್ತದೆ. ಮಾತ್ರವಲ್ಲ, ಈ ಹಳ್ಳದ ಹತ್ತಿರವಿರುವ ನಿವಾಸಿಗಳು, ವ್ಯಾಪಾರಿಗಳು, ಮಾಂಸಾದ ಅಂಗಡಿಗಳು ಅಷ್ಟೇ ಅಲ್ಲ ಇನ್ನೂ ಹಲವರು ಕಾರಣವಾಗಿ ಸಿಕ್ಕುತ್ತಾರೆ. ಈ ಎಲ್ಲ ತ್ಯಾಜ್ಯವನ್ನು ಮೈದುಂಬಿಕೊಂಡಿರುವ ಈ ಹಳ್ಳ ಮುಂದೆ ಹೋಗುವುದಿಲ್ಲ. ಬಿಸಿಲಿನ ಹೊಡೆತಕ್ಕೆ ಹಸಿ ತ್ಯಾಜ್ಯ ಮತ್ತಷ್ಟು ಕೊಳೆಯುತ್ತದೆ. ಇದರಿಂದ ವಾಸನೆ ಕೂಡ ಹೆಚ್ಚಳವಾಗುತ್ತದೆ. ಹೀಗಾಗಿ ಈ ಭಾಗದಲ್ಲಿರುವ ಅಡ್ಡಾಡ್ಡುವ ಜನರು ಮೂಗು ಮುಚ್ಚಿಕೊಂಡೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕೇವಲ ಈ ವರ್ಷದಲ್ಲೇ ಇಷ್ಟೊಂದು ಗಬ್ಬೆದ್ದು ನಾರುತ್ತಿಲ್ಲ. ಹತ್ತು ಹಲವಾರು ವರ್ಷಗಳಿಂದ ಈ ಹಳ್ಳವು ಇಂತಹ ಪರಿಸ್ಥಿತಿಯಿಂದಲೇ ಬಳಲುತ್ತಿದೆ. ಸ್ವಚ್ಛತೆಯತ್ತ ಗಮನಹರಿಸಿ ನಗರದ ಹಾಗೂ ಅಲ್ಲಿ ವಾಸಿಸುವ ಜನರ ಆರೋಗ್ಯ ಕಾಪಾಡಬೇಕಾಗಿದ್ದ ನಗರಸಭೆ ಅಧಿಕಾರಿಗಳು ಈಗ ಜಾಣ ಮೌನಕ್ಕೆ ಜಾರಿದ್ದಾರೆ. ಹಾಗಾದರೆ ಹಳ್ಳದ ಸ್ವಚ್ಛತೆ ಜವಾಬ್ದಾರಿ ಯಾರು ಹೊರಬೇಕು ಎಂಬ ಪ್ರಶ್ನೆ ಈಗ ಎದುರಾಗಿದೆ. ಮಾತ್ರವಲ್ಲ, ಇದಕ್ಕೆ ಅಧಿಕಾರಿಗಳ ನಡೆ ಕೂಡ ಜವಾಬ್ದಾರಿಯಾಗಿರುತ್ತದೆ ಎಂಬುವುದು ಸಾರ್ವಜನಿಕರ ಆರೋಪ.ಇದಕ್ಕೇನು ಕಾರಣ?:

ಹಳ್ಳದ ಎರಡೂ ಬದಿಯಲ್ಲಿ ಗಿಡಗಂಟಿಗಳು ಬೆಳೆದಿವೆ. ಇದರಿಂದ ಮಳೆಗಾಲದ ಸಂದರ್ಭದಲ್ಲಿ ನೀರು ಸಹ ಸರಾಗವಾಗಿ ಹರಿದು ಹೋಗದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ನಗರದ ಜನರು ಬಳಸಿದ ತ್ಯಾಜ್ಯವನ್ನು ಕೂಡ ಇಲ್ಲಿಯೇ ತಂದು ಎಸೆಯುತ್ತಾರೆ. ಅವಳಿ ನಗರದ ಮೂಲ ಕಸುಬು ನೂಲಿಗೆ ಬಣ್ಣ ಹಾಕೋದು. ಸಾಕಷ್ಟು ಕೆಮಿಕಲ್ ಬಳಸಿದ ಬಣ್ಣದ ನೀರು ಕೂಡ ಇದೇ ಹಳ್ಳಕ್ಕೆ ಸೇರುತ್ತದೆ.ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಗೆ ಅಂಟಿಕೊಂಡಿರುವ ಈ ಹಳ್ಳದ ಸುತ್ತಲೂ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳಿವೆ. ಇಲ್ಲಿಯೇ ಮಾಂಸಾಹಾರಿ ವ್ಯಾಪಾರಿಗಳು ಸಹ ಬಳಸಿದ ಮಾಂಸದ ತುಂಡುಗಳನ್ನು ಸಹ ಇದೇ ರಸ್ತೆ ಬದಿಯ ಹಳ್ಳಕ್ಕೆ ಎಸೆದು ಹೋಗುತ್ತಾರೆ. ಇದರಿಂದ ದಿನಂಪ್ರತಿ ಸಂಚರಿಸುವ ವಾಯುವಿಹಾರಿಗಳು ಮೂಗು ಮುಚ್ಚಿಕೊಂಡೇ ಹೋಗುವಂತಾಗಿದೆ. ಹಾಗಾದರೆ ಕಸವನ್ನು ಬೇಕಾಬಿಟ್ಟಿಯಾಗಿ ಎಸೆಯುವ ಕಾಯಕಕ್ಕೆ ಅಧಿಕಾರಿಗಳು ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಈಗ ಹಳ್ಳ ಅಸ್ವಚ್ಛತೆಯ ದಾರಿ ಹಿಡಿದಿದೆ. ಮುಂದೆ ನಗರವೇ ಸ್ವಚ್ಛತೆಯ ವಿಷಯದಲ್ಲಿ ಹಳ್ಳ ಹಿಡಿಯುವ ಪರಿಸ್ಥಿತಿ ಉದ್ಭವವಾಗುವುದರಲ್ಲಿ ಯಾವ ಅನುಮಾನ ಇಲ್ಲ ಎನ್ನುವಂತಾಗಬಹುದು. ಕೇವಲ ದಂಡ ವಿಧಿಸಿದರೆ ಸಾಲದು:

ನಾಗರಿಕರು, ವ್ಯಾಪಾರಿಗಳು ಇಲ್ಲೇ ಏಕೆ ಕಸ ಹಾಕುತ್ತಾರೆ ಎಂಬ ಪ್ರಶ್ನೆ ಮೂಡುತ್ತದೆ. ನಗರದಲ್ಲಿ ಸರಿಯಾಗಿ ಕಸದ ನಿರ್ವಹಣೆ ಇಲ್ಲದಿರುವುದು ಕೂಡ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಅದು ಸಮರ್ಪಕವಾಗಿ ನಿರ್ವಹಣೆಯಾದರೆ ಏಕೆ ಇಂತಹ ದುಸ್ಥಿತಿ ಬರುತ್ತಿತ್ತು ಎಂಬ ಪ್ರಶ್ನೆ ಕೂಡ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಈ ಹಳ್ಳದಲ್ಲಿ ಕಸ ಹಾಕದಂತೆ ಕಟ್ಟುನಿಟ್ಟಿನ ದಂಡ ವಿಧಿಸಬೇಕು ಎಂಬ ಒತ್ತಾಯ ಕೂಡ ಕೇಳಿಬಂದಿದೆ. ಮಾತ್ರವಲ್ಲ, ಇಲ್ಲಿ ಕಸ ಹಾಕದಂತೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ನಾಗರಿಕರು ಕೂಡ ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಆದರೆ, ಕಸದಿಂದ ಮಾತ್ರ ಮುಕ್ತಿ ಸಿಕ್ಕಿಲ್ಲ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಹಳ್ಳಕ್ಕೆ ಕಸ ಬೀಳುವುದನ್ನು ತಡೆಯಲಿ ಎಂಬ ಆಗ್ರಹ ಹೆಚ್ಚಾಗಿದೆ.