ಸಾರಾಂಶ
ರೋಣ: ಬ್ರಾಂಡ್ ಬೆಂಗಳೂರು ನಿರ್ಮಾಣ ಕಾಂಗ್ರೆಸ್ ಸರ್ಕಾರದ ಕನಸಿನ ಕೂಸಾಗಿದ್ದು, ಇದಕ್ಕಾಗಿ ಕಾಂಗ್ರೆಸ್ ಸರ್ಕಾರ ಸಕಲ ರೀತಿಯಲ್ಲಿ ತಯಾರಿ ನಡೆಸಿದ್ದು, ಬ್ರಾಂಡ್ ಬೆಂಗಳೂರು ಸಾಕಾರಗೊಂಡಲ್ಲಿ ರಾಜ್ಯದಲ್ಲಿ ಮಾತ್ರವಲ್ಲದೇ ದೇಶ, ವಿದೇಶಗಳಲ್ಲಿ ಬೆಂಗಳೂರಿನ ಹೆಸರು ಕೇಳಿ ಬರಲಿದೆ ಎಂದು ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ ಹೇಳಿದರು.
ಅವರು ಶುಕ್ರವಾರ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಾತೋಶ್ರೀ ಬಸಮ್ಮ ಎಸ್. ಪಾಟೀಲ ಪುಣ್ಯಸ್ಮರಣೋತ್ಸವ ಸಮಿತಿ ವತಿಯಿಂದ ಜರುಗಿದ ಮಾತೋಶ್ರೀ ಬಸಮ್ಮ ಪಾಟೀಲ ಅವರ 21ನೇ ಪುಣ್ಯ ಸ್ಮರಣೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.ಕೆಲ ವರ್ಷಗಳ ಹಿಂದೆ ಜನರು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ವಾಸ ಮಾಡುತ್ತಿದ್ದರು. ಆದರೆ ಸದ್ಯದ ಬದಲಾದ ಕಾಲಘಟ್ಟದಲ್ಲಿ ಉದ್ಯೋಗ ಅರಸಿ ಗ್ರಾಮೀಣ ಭಾಗದ ಲಕ್ಷಾಂತರ ಜನರು ಪಟ್ಟಣ ಪ್ರದೇಶಗಳಿಗೆ ವಲಸೆ ಬರುತ್ತಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ 1 ಕೋಟಿ 40 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ವಾಸ ಮಾಡುತ್ತಿದ್ದು, ಜನರಿಗೆ ಬೇಕಾಗುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಹಾಗೂ ಉತ್ತಮ ಸೇವೆಗಳನ್ನು ನೀಡುವಲ್ಲಿ, ಆಡಳಿತಾತ್ಮಕ ಅನುಕೂಲಕ್ಕಾಗಿ ಸರ್ಕಾರ ಚಿಂತನೆ ನಡೆಸಿದೆ. ಬೆಂಗಳೂರು ನಗರವನ್ನು ಬ್ರಾಂಡ್ ಬೆಂಗಳೂರನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಹಿಂದೆಯೇ ಸಿದ್ದರಾಮಯ್ಯನವರು ಸಮಿತಿಯನ್ನು ರಚಿಸಿದ್ದರು. ಈಗ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಬ್ರಾಂಡ್ ಬೆಂಗಳೂರು ನಿರ್ಮಾಣಕ್ಕೆ ವೇಗ ದೊರೆತಿದೆ. ಬ್ರಾಂಡ್ ಬೆಂಗಳೂರ ಸಾಕಾರಗೊಂಡು ದೇಶದ ಗಮನ ಸೆಳೆಯುವದರಲ್ಲಿ ಸಂದೇಹವಿಲ್ಲ ಎಂದರು.
ಸಾನಿಧ್ಯ ವಹಿಸಿದ್ದ ಹಾಲಕೆರೆ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ಸಂಸ್ಕಾರ ಇಲ್ಲದಿದ್ದಲ್ಲಿ ದೊಡ್ಡವರಾಗಲು ಸಾಧ್ಯವಿಲ್ಲ. ಮನುಷ್ಯ ಎಷ್ಟೆ ದೊಡ್ಡ ಹುದ್ದೆಯಲ್ಲಿದ್ದರೂ ಸಂಸ್ಕಾರಯುತ ವ್ಯಕ್ತಿತ್ವವನ್ನು ಹೊಂದಬೇಕು. ತಾಯಿಯ ಸಂಸ್ಕಾರ ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ. ಈ ನಿಟ್ಟಿನಲ್ಲ ತಾಯಿ ಬಸಮ್ಮ ಪಾಟೀಲ ಅವರು ತಮ್ಮ ಎಲ್ಲ ಮಕ್ಕಳಿಗೂ ಉತ್ತಮ ಸಂಸ್ಕಾರವನ್ನು ನೀಡಿದ್ದಾರೆ. ತಾಯಿ ಬಸಮ್ಮನವರ ಮಕ್ಕಳೆಲ್ಲರು ಉನ್ನತ ಹುದ್ದೆಯಲ್ಲಿದ್ದು, ಜನ ಸೇವೆಗಾಗಿ ಇಂದಿಗೂ ಪಾಟೀಲ ಕುಟುಂಬ ಶ್ರಮಿಸುತ್ತ ಬರುತ್ತಿದೆ. ರೋಣ ಮತಕ್ಷೇತ್ರವನ್ನು ಶೈಕ್ಷಣಿಕವಾಗಿ,ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ದಿ ಪಡಿಸುವಲ್ಲಿ ಶಾಸಕ ಜಿ.ಎಸ್. ಪಾಟೀಲ ಅವರು ಶ್ರಮಿಸುತ್ತಿದ್ದಾರೆ. ಕಳೆದ 21 ವರ್ಷಗಳಿಂದ ಬಸಮ್ಮ ತಾಯಿಯವರ ಪುಣ್ಯಸ್ಮರಣೋತ್ಸವದ ನಿಮಿತ್ತ ಆರೋಗ್ಯ ತಪಾಸಣೆ, ನೇತ್ರ ಚಿಕಿತ್ಸೆ, ಹೃದಯ ಕಾಯಿಲೆ ತಪಾಸಣೆ, ಗರ್ಭಕೋಶ ಕ್ಯಾನ್ಸರ್ ಗೆ ಬಲಿಯಾಗದಂತೆ ಎಚ್.ಪಿ.ವಿ ಲಸಿಕೆ ಉಚಿತವಾಗಿ ಹಾಕಿಸಲು ಮುಂದಾಗಿರುವದು ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತ ಬಡ ಜನರ ಆಶಾಕಿರಣವಾಗಿದ್ದಾರೆ. ಅವರ ಸೇವೆ ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದರು.ಜಿ.ಎಸ್. ಪಾಟೀಲ ಸಚಿವರಾಗಲು ಹೋರಾಡಿ: ಜಿ.ಎಸ್. ಪಾಟೀಲ ಹಿರಿಯ ಶಾಸಕರಾಗಿದ್ದು, ಮತಕ್ಷೇತ್ರ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. 5 ದಶಕಗಳ ರಾಜಕೀಯ ಅನುಭವ ಹೊಂದಿದ್ದು, ಇವರಲ್ಲಿನ ಅಭಿವೃದ್ಧಿಪರ ಚಿಂತನೆ, ಸಮಾಜಮುಖಿ ನಿಸ್ವಾರ್ಥ ಸೇವಾ ಗುಣ, ಮುತ್ಸದ್ದಿತನ ಗುರುತಿಸಿ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಇವರಿಗೆ ಸಚಿವ ಸ್ಥಾನ ಸಿಗಲು ಕಾರ್ಯಕರ್ತರು, ಅಭಿಮಾನಿಗಳು ಸುಮ್ಮನೆ ಇದ್ದರೆ ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಹೊರಾಡಬೇಕು. ನಿಮ್ಮ ಹೋರಾಟ ಹೈಕಮಾಂಡ್ ಗಮನ ಸಳೆಯುವಂತೆ ಇರಬೇಕು. ಜಿ.ಎಸ್. ಪಾಟೀಲ ಮಂತ್ರಿಯಾಗದಿರಲು ಒಂದೇ ಒಂದು ಕಂಠಕವಿದೆ. ಆ ಕಂಠಕ, ತೊಡಕು ಯಾವುದೆಂದು ನನಗೆ ಗೊತ್ತಿದೆ. ಅದು ನಿಮಗೂ ಗೊತ್ತಿರಬಹುದು. ಆ ಕಂಠಕ ದೂರವಾದರೇ ಮಾತ್ರ ಜಿ.ಎಸ್. ಪಾಟೀಲರು ಮಂತ್ರಿಯಾಗುವರು ಎಂದು ಕುದರಿಮೋತಿ ಮೈಸೂರ ಮಠದ ವಿಜಯ ಮಹಾಂತ ಸ್ವಾಮೀಜಿ ಹೇಳಿದರು.
ಸಾನಿಧ್ಯವನ್ನು ಕಮತಗಿ ಹಿರೇಮಠದ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು, ಗಂಗಾಧರ ಮಹಾಸ್ವಾಮಿಗಳು, ಚನ್ನಬಸವ ಸ್ವಾಮಿಗಳು, ರಾಜೇಂದ್ರ ಶಿವಯೋಗಿಗಳು ವಹಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಆರ್.ಎಸ್. ಪಾಟೀಲ, ಶಾಸಕ ಜಿ.ಎಸ್. ಪಾಟೀಲ, ದೊಡ್ಡನಗೌಡ ಪಾಟೀಲ, ಮಾಜಿ ಸಂಸದ ಮಂಜುನಾಥ ಕುನ್ನೂರ, ಬಿ.ಆರ್. ಯಾವಗಲ್, ಶಾಸಕ ಎನ್.ಎಚ್.ಕೋನರಡ್ಡಿ, ಆನಂದ ಗಡ್ಡದೇವರಮಠ, ಮಲ್ಲಿಕಾರ್ಜುನ ಸರಾಪುರ, ರಾಮಕೃಷ್ಣ ದೊಡ್ಡಮನಿ, ಐ,ಎಸ್. ಪಾಟೀಲ, ರಾಜೇಂದ್ರ ಪಾಟೀಲ, ಸಂಜಯ ನಾಡಗೌಡ್ರ, ದಶರಥ ಗಾಣಗೇರ, ಮಿಥುನ.ಪಾಟೀಲ, ವಿ.ಬಿ. ಸೋಮನಕಟ್ಟಿಮಠ, ವಿ.ಆರ್. ಗುಡಿಸಾಗರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ವ್ಹಿ.ಬಿ. ಸೋಮನಕಟ್ಟಿಮಠ ನಿರೂಪಿಸಿದರು. ಮಿಥುನ ಜಿ. ಪಾಟೀಲ ಸ್ವಾಗತಿಸಿದರು.