ದೇವನಹಳ್ಳಿ: ಚಿಕ್ಕಬಳ್ಳಾಪುರ ಜಿಲ್ಲಾ ರೈತರ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ಮಾನವ ಹಕ್ಕುಗಳ ಕಮಿಟಿ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಸಾಮಾಜಕ ಕಾರ್ಯಕರ್ತರ ವೇದಿಕೆ, ಹಲವು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಎಲ್ಲಾ ತಾಲೂಕುಗಳಿಂದ ಪಟ್ಟಣದ ರಾಣಿ ವೃತ್ತದಲ್ಲಿ ಜಮಾವಣೆಗೊಂಡು ಹೊರಡಲು ಅಣಿಯಾದ ರೈತರನ್ನು ಬೆಂಗಳೂರಿನೆಡೆಗೆ ತೆರಳದಂತೆ ತಡೆದು ಚಿಕ್ಕಬಳ್ಳಾಪುರ ಕಡೆಗೆ ಡಿಸಿಪಿ ಮಿಥುನ್ ಕುಮಾರ್ ಮತ್ತು ಸಿಬ್ಬಂದಿ ಕಳುಹಿಸಿಕೊಟ್ಟು ಬೈಕ್ ರ್‍ಯಾಲಿ ತಡೆದರು.

ತಾಲೂಕು ಅಧ್ಯಕ್ಷ ಗಾರೆ ರವಿಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಕೈಗಾರಿಕೆಗಳ ಹೆಸರಲ್ಲಿ ರೈತರ ಭೂಮಿ ಕಬಳಿಸುತ್ತಿದೆ. ಆದರೆ ಕಳೆದ ೨೦ ವರ್ಷಗಳಿಂದ ಲಕ್ಷಾಂತರ ಎಕರೆ ಭೂಸ್ವಾಧೀನ ಪಡಿಸಿಕೊಂಡಿದ್ದು, ಅದರಲ್ಲಿ ಶೇ.೨೫ರಷ್ಟು ಭೂಮಿ ಕೈಗಾರಿಕೆಗೆ ಬಳಸಿಲ್ಲ. ಇದೊಂದು ಹಗಲು ದರೋಡೆ. ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ ೧೩ ಹಳ್ಳಿಗಳ ೨೮೨೩ ಎಕರೆ ಕೃಷಿ ಭೂಮಿ ಭೂಸ್ವಾಧೀನಪಡಿಸಿಕೊಂಡಿದ್ದು, ಈ ಭೂಮಿಯಲ್ಲಿ ಹೂವು, ಹಣ್ಣು, ಕಾಯಿ, ತರಕಾರಿ, ಸೊಪ್ಪು, ಮಾವು, ಗೋಡಂಬಿ, ಶುಂಠಿ, ಅಲ್ಲದೇ ರೇಷ್ಮೆ ಬೆಳೆಯುತ್ತಾರೆ. ಹೀಗಾಗಿ ಈ ಭೂಮಿಯನ್ನು ಕೈಬಿಡಬೇಕೆಂದು ಈವರೆಗೂ ಅನೇಕ ಹೋರಾಟಗಳು ನಡೆದಿವೆ ಎಂದರು.

ಕೆಲದಿನಗಳ ಹಿಂದೆ ಜಿಲ್ಲಾ ಮಂತ್ರಿಗಳ ಗಮನ ಸೆಳೆಯಲು ಹೋರಾಟದ ವೇದಿಕೆಗೆ ಬಂದು ಆತಂಕ ದೂರಮಾಡಲು ಒತ್ತಾಯಿಸಿದಾಗ ರಾಜ್ಯ ಸರ್ಕಾರ ರೈತರ ಮೇಲೆ ಬಲ ಪ್ರಯೋಗಿಸಿದ್ದು ಸರಿ ಅಲ್ಲ. ಕೇವಲ ೧೩ ಹಳ್ಳಿಗಳ ಸಮಸ್ಯೆಯಾಗದೆ ರಾಜ್ಯದ ಸಾವಿರಾರು ಹಳ್ಳಿಗಳ ಕಷ್ಟ ಕೂಡ ಇದಾಗಿದೆ. ಈ ಕಾರಣಕ್ಕೆ ಸರ್ಕಾರ ಕೂಡಲೇ ಈ ಬಲವಂತದ ಭೂಸ್ವಾಧೀನ ಕೈಬಿಟ್ಟು ೨೦೧೩ ಭೂಸ್ವಾಧೀನ ಕಾಯ್ದೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಈ ತಿದ್ದುಪಡಿ ಕೈಬಿಟ್ಟು ರೈತರನ್ನು ಭಯಮುಕ್ತರನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕಚೇರಿಯಿಂದ ೧೦,೦೦೦ ಬೈಕ್ ರ್‍ಯಾಲಿಯೊಂದಿಗೆ ವಿಧಾನಸೌಧ ಮುತ್ತಿಗೆ ಹಾಕಲು ನಿರ್ಧರಿಸಲಾಗಿತ್ತು. ಇಲ್ಲಿಂದ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವುದರಿಂದ ನಮ್ಮನ್ನು ರಾಣಿ ವೃತ್ತದಿಂದ ಮುಂದೆ ಸಾಗದಂತೆ ತಡೆದಿದ್ದಾರೆ. ನಾವು ವಾಪಾಸ್ ಚಿಕ್ಕಬಳ್ಳಾಪುರ ರೈತರ ಜೊತೆಗೂಡಿ ನಮ್ಮ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತೀರ್ಮಾನದಂತೆ ಮುಂದಿನ ಹೋರಾಟದ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.

ರಾಜ್ಯ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ರೈತರ ಭೂಮಿಯನ್ನು ಕೈಗಾರಿಕೆಗಳ ಹೆಸರಲ್ಲಿ ಕಾರ್ಪೂರೇಟ್ ಕಂಪನಿಗಳ ಪಾಲು ಮಾಡಲು ಈ ಜೆಸಿಬಿ ಸರ್ಕಾರ ನಡೆಸಿದ ಮೂರೂ ಪಕ್ಷಗಳು ಸಹ ಒಂದೆ. ಹಾಗಾಗಿ ನಾವು ಇಂತಹ ಸರ್ಕಾರಗಳನ್ನು ದೂರವಿಡಲು ಸಂಘಟಿತರಾಗೋಣ ಇವರು ಪೊಲೀಸರ ಮೂಲಕ ರೈತ ಚಳವಳಿ ಹತ್ತಿಕ್ಕುವ ಯತ್ನಕ್ಕೆ ನಾವು ಹೆದರುವುದಿಲ್ಲ ಎಂದು ಸವಾಲು ಹಾಕಿದರು.


ರಾಜ್ಯ ಉಪಾಧ್ಯಕ್ಷ ಕೆಂಚೇಗೌಡ ಮಾತನಾಡಿ, ಹಿಂದಿನ ರೈತ ಚಳವಳಿಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಿದಂತೆ ಈ ಬಾರಿಯೂ ಪೊಲೀಸರು ತಡೆ ಒಡ್ಡಿದ್ದಾರೆ. ರೈತ ಹೋರಾಟಕ್ಕೆ ಹೆದರಿದ ಸರ್ಕಾರ ಪೊಲೀಸರನ್ನು ಕಳುಹಿಸಿ ತಡೆ ಒಡ್ಡುತ್ತಿರುವುದು ಖಂಡನೀಯ. ಸಂವಿಧಾನದಲ್ಲಿ ಹೋರಾಟ ಚಳವಳಿಗಳಿಗೂ ಅವಕಾಶ ನೀಡಲಾಗಿದೆ. ರೈತ ಉಳಿಯಬೇಕು, ನ್ಯಾಯ ದೊರೆಯಬೇಕು, ಕೃಷಿ ಭೂ ಕಬಳಿಕೆ ಸರ್ಕಾರ ಕೈಬಿಡಿಬೇಕು. ಬಲವಂತದ ಭೂಸ್ವಾಧೀನ ನಿಲ್ಲಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ವೆಂಕಟನಾರಾಯಣಪ್ಪ, ಕೆಂಚೇಗೌಡ, ತಾಲೂಕು ಅಧ್ಯಕ್ಷ ಗಾರೆ ರವಿಕುಮಾರ್, ಜಿಲ್ಲಾ ಕಾರ್ಯದರ್ಶಿ ಬಿದಲೂರು ರಮೇಶ್, ರೈತ ಹೋರಾಟಗಾರ ಕಾರಹಳ್ಳಿ ಶ್ರೀನಿವಾಸ್, ವಕೀಲ ಸಿದ್ದಾರ್ಥ, ಶಶಿಧರ್ , ರವಿಕುಮಾರ್, ನಾರಾಯಣಸ್ವಾಮಿ ಮುಂತಾದವರಿದ್ದರು.

೦೬ ದೇವನಹಳ್ಳಿ ಚಿತ್ರಸುದ್ದಿ: ೦೧

ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ರಾಜ್ಯಮಟ್ಟದ ಬೈಕ್ ರ್‍ಯಾಲಿಗೆ ಅಣಿಯಾಗಿ ತೆರಳಿದ್ದ ರೈತರನ್ನು ದೇವನಹಳ್ಳಿ ರಾಣಿ ವೃತ್ತದಲ್ಲಿ ತಡೆದ ಪೊಲೀಸರ ಕ್ರಮದ ವಿರುದ್ಧ ರೈತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.