ಸಾರಾಂಶ
ಕಳೆದ ಬಾರಿ ಮಳೆಗಾಲದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿದ್ದರಿಂದ ಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹ ಆಗಿರಲಿಲ್ಲ. ಈ ಎಲ್ಲಾ ಕಾರಣದಿಂದಾಗಿ ಕೆರೆಯಲ್ಲಿ ನೀರು ತೀರಾ ಕ್ಷೀಣಿಸಿತ್ತು. ಇದೇ ಸಮಯ ಬಳಸಿಕೊಂಡ ಕೊಪ್ಪ ದೊಡ್ಡಕೆರೆ ಮೇಲ್ಭಾಗದ ಅಂಚಿನಲ್ಲಿದ್ದ ಕೆಲ ರೈತರು ಕೆರೆ ಹೂಳು ಮತ್ತು ಮಣ್ಣನ್ನು ತಮ್ಮ ಜಮೀನಿಗೆ ಸಾಗಿಸಿಕೊಂಡು ಕೈಲಾಷ್ಟು ಒತ್ತುವರಿ ಮಾಡಿಕೊಂಡಿದ್ದಾರೆ.
-ಕಡಿಮೆ ಮಳೆ; ಕೆರೆಯಲ್ಲಿ ನೀರು ಕ್ಷೀಣ । ಪೈಪೋಟಿಗೆ ಬಿದ್ದು ಒತ್ತುವರಿ! । ಕ್ರಮಕ್ಕೆ ಆಗ್ರಹಕನ್ನಡಪ್ರಭ ವಾರ್ತೆ ಹೊಳೆಹೊನ್ನೂರುಪಟ್ಟಣಕ್ಕೆ ಹೊಂದಿಕೊಂಡಿರುವ ಕೊಪ್ಪ ದೊಡ್ಡಕೆರೆ ಜಾಗವನ್ನು ಕೆರೆಬೀರನಹಳ್ಳಿ ಗ್ರಾಮ ಸಮೀಪ ಅಕ್ರಮವಾಗಿ ಒತ್ತುವರಿ ಮಾಡುತ್ತಿರುವುದನ್ನು ಅಚ್ಚುಕಟ್ಟು ಪ್ರದೇಶದ ರೈತರು ಭಾನುವಾರ ತಡೆದು ಪೊಲೀಸರಿಗೆ ದೂರು ನೀಡಿದ್ದಾರೆ.
ಹೊಳೆಹೊನ್ನೂರು-1ನೇ ಹೋಬಳಿ ವ್ಯಾಪ್ತಿಗೆ ಒಳಪಡುವ ಕೊಪ್ಪ ಗ್ರಾಮ ಸರ್ವೆ ನಂ.52ರಲ್ಲಿ ಒಟ್ಟು 220.19 ಎಕರೆ ವಿಸ್ತಾರದಲ್ಲಿ ಕೊಪ್ಪ ದೊಡ್ಡಕೆರೆ ಇರುತ್ತದೆ. ಈ ಕೆರೆ ನೀರು ಸಾವಿರಾರು ಎಕರೆ ಜಮೀನುಗಳ ಅಟ್ಟುಕಟ್ಟು ಪ್ರದೇಶ ಹೊಂದಿದೆ. ಕಳೆದ ಬಾರಿ ಮಳೆಗಾಲದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿದ್ದರಿಂದ ಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹ ಆಗಿರಲಿಲ್ಲ. ಅಲ್ಲದೆ, ಭದ್ರಾ ಜಲಾಶಯದ ನಾಲೆಯ ಹೆಚ್ಚುವರಿ ನೀರು ಕೂಡ ಬಂದು ಸೇರುತ್ತದೆ. ಆದರೆ ಈ ಬಾರಿ ನಾಲೆಗೆ ಹರಿಸಿದ ನೀರು ಕಡಿಮೆ ಆಗಿದ್ದರಿಂದ ಕೆರೆ ನೀರು ಕಡಿಮೆ ಆಗಿದೆ. ಅಲ್ಲದೆ ಸಂಗ್ರಹ ಆಗಿದ್ದ ನೀರನ್ನು ಕೂಡ ರೈತರು ತಮ್ಮ ತೋಟದ ಬೆಳೆಯನ್ನು ಉಳಿಸಿಕೊಳ್ಳಲು ಸಾಕಷ್ಟು ನೀರು ಪಂಪ್‍ಸೆಟ್ ಮೂಲಕ ಹರಿಸಿಕೊಂಡಿದ್ದಾರೆ. ಈ ಎಲ್ಲಾ ಕಾರಣದಿಂದಾಗಿ ಕೆರೆಯಲ್ಲಿ ನೀರು ತೀರಾ ಕ್ಷೀಣಿಸಿತ್ತು. ಇದೇ ಸಮಯ ಬಳಸಿಕೊಂಡ ಕೆರೆ ಮೇಲ್ಭಾಗದ ಅಂಚಿನಲ್ಲಿದ್ದ ಕೆಲ ರೈತರು ಕೆರೆ ಹೂಳು ಮತ್ತು ಮಣ್ಣನ್ನು ತಮ್ಮ ಜಮೀನಿಗೆ ಸಾಗಿಸಿಕೊಂಡು ಕೈಲಾಷ್ಟು ಒತ್ತುವರಿ ಮಾಡಿಕೊಂಡಿದ್ದಾರೆ. ಈ ರೀತಿ ಅನೇಕ ದಿನಗಳಿಂದ ಸ್ವಲ್ಪಸ್ವಲ್ಪವಾಗಿಯೇ ಕೆರೆ ಒತ್ತುವರಿ ಕಾರ್ಯ ನಡೆದಿದೆ.ಸ್ಪರ್ಧೆಗೆ ಬಿದ್ದು ಒತ್ತುವರಿ!: ಇದನ್ನು ನೋಡಿದ ಅಕ್ಕಪಕ್ಕದೆ ಇನ್ನೂ ಕೆಲವರು ದುರಾಸೆಯಿಂದಾಗಿ ದೊಡ್ಡ ಇಟಾಚಿ, ಜೆಸಿಬಿ ಯಂತ್ರಗಳನ್ನು ಬಳಸಿ ರಾತ್ರಿ ಇಡೀ ಸ್ಪರ್ಧಿಗಳಂತೆ ಒತ್ತುವರಿ ಕೆಲಸ ಮಾಡಿದ್ದಾರೆ. ಈ ವಿಷಯ ಭಾನುವಾರ ಕೆರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋಗಿ ಒತ್ತುವರಿ ಕಾರ್ಯವನ್ನು ತಡೆದಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳದಲ್ಲಿದ್ದ ಇಟಾಚಿ, ಜೆಸಿಬಿ ಹಾಗೂ ಟ್ರಾಕ್ಟರ್‌ಗಳನ್ನು ದಸ್ತಗಿರಿ ಮಾಡಿಕೊಂಡಿದ್ದಾರೆ.
ಕಾನೂನು ಕ್ರಮಕ್ಕೆ ಆಗ್ರಹ: ಈ ರೀತಿಯಾಗಿ ಸರಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ. ಕೊಪ್ಪದ ಕೆರೆಯು ಅತ್ಯಂತ ವಿಶಾಲವಾದ ಭೂ ಪ್ರದೇಶ ಹೊಂದಿದೆ. ಆದರೆ ಈಗಾಗಲೆ 20-30 ಎಕರೆಯಷ್ಟು ಒತ್ತುವರಿ ಮಾಡಿದ್ದಾರೆ. ಪರಿಣಾಮ ಅಚ್ಚಕಟ್ಟುದಾರರಿಗೆ ಇಂತಹ ತುರ್ತು ಸಂದಭದಲ್ಲಿ ನೀರಿನ ತೊಂದರೆ ಅನುಭವಿಸು ವಂತಾಗಿದೆ. ಆದ್ದರಿಂದ ಕೆರೆ ಒತ್ತುವರಿ ಮಾಡಿರುವ ವ್ಯಕ್ತಿಗಳ ವಿರುದ್ಧ ತಕ್ಷಣ ಸೂಕ್ತ ಕಾನೂನು ಕ್ರಮ ಜರುಗಿಸಿ ಒತ್ತುವರಿ ಮಾಡಿಕೊಂಡಿರುವ ಕೆರೆ ಜಾಗವನ್ನು ತೆರವುಗೊಳಿಸ ಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಹೊಳೆಹೊನ್ನೂರು ಸಮೀಪದ ಕೊಪ್ಪ ಗ್ರಾಮದ ದೊಡ್ಡಕೆರೆ ಜಾಗವನ್ನು ಅಕ್ರಮ ಒತ್ತು ಮಾಡುತ್ತಿರುವುದನ್ನು ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ತಡೆದಿರುವುದು.