ಸಾರಾಂಶ
ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಇಷ್ಟು ದಿನ ಬೀಗ ಹಾಕಿದ್ದ ಮನೆಗಳನ್ನು ಮಾತ್ರ ಕದಿಯುತ್ತದ್ದ ಕಳ್ಳರಿ ಇದೀಗ ರಾಜಾರೋಷವಾಗಿ ಮನೆಗಳಿಗೆ ನುಗ್ಗಿ ಮನೆಯವರಿಗೆ ಮಾರಕಾಸ್ತ್ರಗಳನ್ನು ತೋರಿಸಿ ದರೋಡೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಪರರಾಜ್ಯದ ಗ್ಯಾಂಗೊಂದು ಸಕ್ರಿಯವಾಗಿದ್ದು, ಜನರ ನಿದ್ದೆ ಗೆಡಿಸಿದೆ. ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡು ಬರುವ ಮುಸುಕುಧಾರಿಗಳು ಒಂದೇ ದಿನ ನಾಲ್ಕು ಕಡೆಗಳಲ್ಲಿ ದರೋಡೆ ಹಾಗೂ ಒಂದೇ ವಾರದಲ್ಲಿ ಮೂರು ಬೇರೆ ಬೇರೆ ದರೋಡೆ ಕೃತ್ಯಗಳನ್ನು ಎಸಗಿದ್ದಾರೆ. ಹೀಗೆಯೇ ಜಿಲ್ಲಾದ್ಯಂತ ವಿವಿಧೆಡೆ ಕಳ್ಳತನ ಕೃತ್ಯಗಳನ್ನು ಎಸಗಿದ್ದು, ಬುಧವಾರ ರಾತ್ರಿ ನಡೆದ ಘಟನೆಯೊಂದು ನಗರವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.
ಮಾಲಿಕನನ್ನು ಮನೆ ಮೇಲಿಂದ ತಳ್ಳಿದ ದುರುಳರು:ಬುಧವಾರ ತಡರಾತ್ರಿ ಜೈನಾಪುರ ಬಡಾವಣೆಗೆ ನುಗ್ಗಿದ ಐವರು ಮುಸುಕುಧಾರಿಗಳ ತಂಡ ಅಲ್ಲಿನ ಮನೆಯೊಂದರ ಮೊದಲ ಮಹಡಿಯಲ್ಲಿ ಬಾಡಿಗೆ ಮನೆಯಲ್ಲಿರುವ ಸಂತೋಷ ಕನ್ನಾಳ ಎಂಬುವವರ ಮನೆಯ ಬಾಗಿಲನ್ನು ಮುರಿದು ಒಳಗೆ ನುಗ್ಗಿದ್ಧಾರೆ. ಈ ವೇಳೆ ವಿರೋಧ ವ್ಯಕ್ತಪಡಿಸಿದ ಸಂತೋಷನಿಗೆ ಚಾಕು ಚುಚ್ಚಿ, ಮನೆಯ ಮೊದಲ ಮಹಡಿಯಿಂದ ಕೆಳಗೆ ನೂಕಿದ್ದಾರೆ. ಮನೆಯಲ್ಲಿದ್ದ ಆತನ ಪತ್ನಿಯ ಮೇಲೆಯೂ ಹಲ್ಲೆ ನಡೆಸಿ, ಆಕೆಯ ಕೊರಳಲ್ಲಿದ್ದ 15 ಗ್ರಾಂ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ. ಮಹಡಿ ಮೇಲಿನಿಂದ ಬಿದ್ದು ಹಾಗೂ ತೀವ್ರ ಹಲ್ಲೆಗೊಳಗಾದ ಸಂತೋಷ ಕನ್ನಾಳ ಇದೀಗ ಜಿಲ್ಲಾಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಧ್ಯರಾತ್ರಿ 1 ಗಂಟೆಯಿಂದ 3ರ ವರೆಗಿನ ಸಮಯದಲ್ಲಿ ಬರುವ ಮುಸುಕುಧಾರಿಗಳ ಗುಂಪು ಮೊದಲು ಸುತ್ತಮುತ್ತಲಿನ ಮನೆಗಳಿಗೆ ಹೋಗಿ ಯಾರು ಹೊರಬರದಂತೆ ಆ ಮನೆಗಳ ಬಾಗಿಲು ಕೊಂಡಿಗಳನ್ನು ಲಾಕ್ ಮಾಡುತ್ತಾರೆ. ಆಮೇಲೆ ಟಾರ್ಗೆಟ್ ಮಾಡಿದ ಮನೆಯ ಬಾಗಿಲು ಮುರಿದು ಒಳನುಗ್ಗಿ ಕೈಯಲ್ಲಿದ್ದ ಚಾಕು ಹಾಗೂ ಆಯುಧಗಳಿಂದ ಮನೆಯವರ ಹಲ್ಲೆ ಮಾಡುತ್ತಾರೆ. ಬಳಿಕ ಹಣ, ಒಡವೆಗಳನ್ನು ದೋಚಿಕೊಂಡು ಪರಾರಿಯಾಗುತ್ತಾರೆ. ಈ ಮುಸುಕುಧಾರಿಗಳು ನೋಡಲು ಅಜಾನುಬಾಹುಗಳಾಗಿದ್ದು, ಇವರಿಗೆ ಕನ್ನಡ ಬರುವುದಿಲ್ಲ. ಹೀಗಾಗಿ, ಇವರು ಅನ್ಯ ರಾಜ್ಯದ ಗ್ಯಾಂಗ್ ಇರಬಹುದು ಎಂದು ಶಂಕಿಸಲಾಗಿದೆ.ನಗರದ ಜನರಲ್ಲಿ ಹೆಚ್ಚಿದ ಆತಂಕ:
ಜೈನಾಪುರ ಆರ್‌ಸಿ ಸೆಂಟರ್, ಬಾಲಾಜಿ ನಗರ, ರಾಜಕುಮಾರ ಲೇಔಟ್, ಶಿಖಾರಖಾನೆ ಏರಿಯಾ, ಆಲ್‌ಅಮೀನ್ ಹಿಂಭಾಗ, ಹಿಟ್ನಳ್ಳಿ ಹೀಗೆ ಹಲವಾರು ಕಡೆಗಳಲ್ಲಿ ರಾತ್ರಿ ವೇಳೆ ಮನೆಗಳಿಗೆ ನುಗ್ಗಿರುವ ದರೋಡೆಕೋರರು ಮನೆಯವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ಇದ್ದುಬದ್ದಿದ್ದನ್ನೆಲ್ಲ ದೋಚಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಕಳ್ಳರು ಯಾವಾಗ ನಮ್ಮ ಮನೆಗೆ ನುಗ್ಗುತ್ತಾರೋ ಎಂದು ಆತಂಕ ನಗರದ ಜನರಲ್ಲಿ ಮನೆಮಾಡಿದೆ. ಆದ್ದರಿಂದ ರಾತ್ರಿ ವೇಳೆ ಪೊಲೀಸ್ ಬೀಟ್(ಗಸ್ತು) ಹೆಚ್ಚಿಸಬೇಕು. ಇಂತಹ ಕಳ್ಳರು, ದರೋಡೆಕೋರರನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.ಒಂದೇ ರಾತ್ರಿ ನಾಲ್ಕು ಕಡೆ ದರೋಡೆ
ಜನೇವರಿ 9ರಂದು ಒಂದೇ ದಿನ ನಾಲ್ಕು ಕಡೆಗಳಲ್ಲಿ ಕೃತ್ಯ ಎಸಗಿದ್ದು, ಮನೆಗಳಿಗೆ ನುಗ್ಗಿ ಹಲ್ಲೆ ಮಾಡಿ, ಮನೆಗಳಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. 1)ಬಾಲಾಜಿ ನಗರದ ರವಿಚಂದ್ರ ಕೌಜಲಗಿ ಮನೆಗೆ ಬಾಗಿಲು ಮುರಿದು ಒಳನುಗ್ಗಿ ನಾಲ್ವರು ದರೋಡೆಕೋರರು ಚಾಕು ತೋರಿಸಿ ಮನೆಯಲ್ಲಿದ್ದ ₹ 3.20 ಲಕ್ಷ ಮೌಲ್ಯದ 80ಗ್ರಾಂ ಚಿನ್ನಾಭರಣ ಸುಲಿಗೆ ಮಾಡಿದ್ದಾರೆ.2) ಬಳಿಕ ಇದೇ ಏರಿಯಾದ ಹರೀಶ ದೇಶಪಾಂಡೆ ಅವರ ಮನೆಬಾಗಿಲು ಮುರಿದು ಚಾಕು ತೋರಿಸಿ ಹೆದರಿಸಿದ್ದು, ₹ 59 ಸಾವಿರ ಮೌಲ್ಯದ 12 ಗ್ರಾಂ ಚಿನ್ನಾಭರಣ ದರೋಡೆ ಮಾಡಿದ್ದಾರೆ. ಗಾಂಧಿಚೌಕ್ ಠಾಣೆಯಲ್ಲಿ ದೂರು ಈ ಬಗ್ಗೆ ದಾಖಲಾಗಿದ್ದು, ಎರಡೂ ಮನೆಗಳು ಸೇರಿ ಒಟ್ಟು 3.84 ಲಕ್ಷ ದೋಚಿದ್ದಾರೆ.
3) ಅಲ್ಅಮೀನ ಹಿಂದುಗಡೆ ನಿವಾಸಿ ಶಾಂತಪ್ಪ ಅಸ್ಕಿ ಹಾಗೂ ಸುಮಿತ್ರಾ ಮುಧೋಳ ಮನೆಗಳಿಗೆ ನುಗ್ಗಿ ನಾಲ್ವರು ಮುಸುಕುಧಾರಿಗಳು ಇವರಿಬ್ಬರ ಮನೆಯಿಂದ ಒಟ್ಟು ₹ 2.37 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ.4) ಕಳೇದ ಡಿ.9ರಂದು ತಾಲೂಕಿನ ಹಿಟ್ನಳ್ಳಿ ಗ್ರಾಮದ ಯಶವಂತ ಗಾಯಕವಾಡ ಹಾಗೂ ಗೋದಾವರಿ ಬಿರಾದಾರ ಮನೆಗಳಿಂದ ಚಿನ್ನಾಭರಣ, ಬೆಳ್ಳಿ ಆಭರಣ, ಹಣ, ಮೊಬೈಲ್ ಸೇರಿ ಒಟ್ಟು 8.52 ಲಕ್ಷ ಮೌಲ್ಯದ ಸ್ವತ್ತು ದರೋಡೆ ಮಾಡಿದ್ಧಾರೆ.
ಕೋಟ್:ಕಳೆದ ರಾತ್ರಿ 1 ಗಂಟೆಗೆ ನಾವು ಮೊದಲ ಮಹಡಿಯ ಮನೆಯಲ್ಲಿ ಮಲಗಿದ್ದ ವೇಳೆ ಬಾಗಿಲು ಮುರಿದು ಮನೆಗೆ ನುಗ್ಗಿದ ಮುಸುಕುಧಾರಿ ದರೋಡೆಕೋರರು, ನನ್ನ ಪತಿಯ ಬೆನ್ನಿಗೆ ಹಾಗೂ ಎದೆಗೆ ಚಾಕು ಚುಚ್ಚಿ ಅವರನ್ನು ಮನೆ ಮೇಲಿಂದ ಕೆಳಕ್ಕೆ ನೂಕಿದರು. ಬಳಿಕ ನನಗೆ ಚಾಕು ತೋರಿಸಿ ಕೊರಳಲ್ಲಿದ್ದ ಒಂದೂವರೆ ತೊಲೆ ತಾಳಿಚೈನ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ಭಾಗ್ಯಜ್ಯೋತಿ ಕನ್ನಾಳ, ದರೋಡೆಗೊಳಗಾದ ಮನೆಯವರುಕೋಟ್
ಹೊರಗಿನಿಂದ ಬಂದ ಗುಂಪೊಂದು ಈ ರೀತಿ ದರೋಡೆ ಮಾಡುತ್ತಿರುವ ಮಾಹಿತಿ ಬಂದಿದೆ. ಕಳೆದ ಒಂದು ವಾರದಲ್ಲಿ 3ನೇ ಪ್ರಕರಣ ಇದಾಗಿದೆ. ಈಗಾಗಲೇ ಪೊಲೀಸ್ ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿದೆ. ಒಂದು ವಾರದಿಂದಲೇ ನಮ್ಮವರು ಪ್ರಕರಣ ಬೇಧಿಸಲು ಯತ್ನಿಸುತ್ತಿದ್ದು, ಶೀಘ್ರದಲ್ಲೇ ಆರೋಪಿಗಳ ಹೆಡೆಮುರಿ ಕಟ್ಟಲಾಗುವುದು.ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್‌ಪಿ