-ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ । ಶಿಶುವಿನ ಕಾಳಜಿ ಕುರಿತು ಮಾಹಿತಿಕನ್ನಡಪ್ರಭ ವಾರ್ತೆ ಯಾದಗಿರಿ
ಬಾಲ್ಯದಲ್ಲಿ ಮಗುವಿನ ಆರೋಗ್ಯ ಸದೃಢಗೊಳಿಸಿದರೆ ಮಾತ್ರ ಭವಿಷ್ಯದಲ್ಲಿ ಸಶಕ್ತ ವ್ಯಕ್ತಿಯನ್ನು ರೂಪಿಸಲು ಸಾಧ್ಯ. ಹೀಗಾಗಿ, ಮಗು ಜನಿಸಿದ ತಕ್ಷಣ ಮೊದಲ ಅರ್ಧ ಗಂಟೆಯೊಳಗೆ ಸ್ತನ್ಯಪಾನ ಮಾಡಿಸುವುದು ಅಗತ್ಯ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಕ್ಷ್ಮಿ ಮುಂಡಾಸ ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಹಾಗೂ ಐ.ಇ.ಸಿ ವಿಭಾಗದ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ತಾಯಿಗೂ ತನ್ನ ಮಗುವಿಗೆ ಸಾಕಾಗುವಷ್ಟು ಹಾಲನ್ನು ಉತ್ಪಾದಿಸುವ ಸಾಮರ್ಥ್ಯವಿರುತ್ತದೆ. ಎದೆಹಾಲು ಬರುತ್ತಿಲ್ಲವೆಂದು ಬಾಟಲಿ ಹಾಲು, ಗ್ರೆಪ್ ವಾಟರ್ ಅಥವಾ ಇನ್ಯಾವುದೇ ಪದಾರ್ಥಗಳನ್ನು ಕುಡಿಸಬಾರದು. ಈ ಬಗ್ಗೆ ಜಿಲ್ಲೆಯಾದ್ಯಂತ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಗನ್ನಾಥ್ ಮಾತನಾಡಿ, ಸುಸ್ಥಿರ ಜೀವನದ ಭದ್ರ ಅಡಿಪಾಯಕ್ಕಾಗಿ ಸ್ತನ್ಯಪಾನ ಪರಿಣಾಮಕಾರಿ ವಿಧಾನಗಳನ್ನು ಸದೃಢಗೊಳಿಸೋಣ ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ. ತಾಯಿಯ ಎದೆಹಾಲು ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ತಿಳಿಸಿದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿನುತಾ ಮಾತನಾಡಿ, ಮಗುವಿನ ಆರೋಗ್ಯಕ್ಕಾಗಿ ಅನಗತ್ಯ ಹಣ ವೆಚ್ಚ ಮಾಡುವುದನ್ನು ತಪ್ಪಿಸಲು ಹೆರಿಗೆಯಾದ ಅರ್ಧ ಗಂಟೆಯೊಳಗೆ ಸ್ತನ್ಯಪಾನ ಮಾಡಿಸಬೇಕು. ಹೆರಿಗೆಯ ನಂತರ ತಕ್ಷಣ ಬರುವ ಹಳದಿ ಬಣ್ಣದ ಹಾಲು ಮಗುವಿಗೆ ಅತ್ಯಂತ ಶಕ್ತಿವರ್ಧಕವಾಗಿದೆ ಎಂದರು.
ವೈದ್ಯಾಧಿಕಾರಿ ಡಾ.ಕ್ಷಿತಿಜ ಮಾತನಾಡಿ, ಎದೆಹಾಲು ಅಮೃತಕ್ಕೆ ಸಮಾನ. ಆದರೆ ಕೆಲವರು ಮಗುವಿನ ಆರೋಗ್ಯಕ್ಕೆ ಹಾನಿ ಉಂಟುಮಾಡುವ ಸಕ್ಕರೆ ನೀರು, ಬೆಲ್ಲದ ನೀರು ಅಥವಾ ಜೇನುತುಪ್ಪವನ್ನು ಮಗುವಿಗೆ ನೀಡುತ್ತಾರೆ. ಇಂತಹ ಮೂಢನಂಬಿಕೆಗಳಿಗೆ ಯಾರೂ ಬಲಿಯಾಗಬಾರದು. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಡಾ.ವಿಭೂಷಣ, ಹಿರಿಯ ರೋಗ ನಿರೀಕ್ಷಣಾಧಿಕಾರಿ ಶಾಂತಿಲಾಲ್, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು, ತಾಯಂದಿರು ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಯಾದಗಿರಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ತುಳಸಿರಾಮ ಚವ್ಹಾಣ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.----ಫೋಟೊ----
6ವೈಡಿಆರ್7ಯಾದಗಿರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಹಾಗೂ ಐ.ಇ.ಸಿ ವಿಭಾಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಕ್ಷ್ಮಿ ಮುಂಡಾಸ ಉದ್ಘಾಟಿಸಿ ಮಾತನಾಡಿದರು.