ಕನ್ನಡಪ್ರಭ ವಾರ್ತೆ ಹೊನ್ನಾವರ
ಮಗುವಿಗೆ ಅಮೃತ ಸಮಾನ ಆಹಾರವೆಂದರೆ ಅದು ತಾಯಿ ಎದೆ ಹಾಲು. ಮಗುವಿನ ಸರ್ವತೋಮುಖ ಬೆಳವಣಿಗೆಗೆ ತಾಯಿ ಎದೆ ಹಾಲು ಅತಿಮುಖ್ಯವಾದುದು ಎಂದು ತಾಲೂಕು ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ. ಬಾಲಚಂದ್ರ ಮೇಸ್ತ ಹೇಳಿದರು.ತಾಲೂಕು ಆಸ್ಪತ್ರೆಯ ಹೆರಿಗೆ ವಾರ್ಡ್ ವಿಭಾಗದಲ್ಲಿ ನಡೆದ ವಿಶ್ವ ಸ್ತನ್ಯಪಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಹೆರಿಗೆಯಾದ ತಾಯಂದಿರನ್ನು ಉದ್ದೇಶಿಸಿ ಮಾತನಾಡಿದರು. ಇವತ್ತಿನ ತಾಯಂದಿರಲ್ಲಿ ಹೆಚ್ಚಾಗಿ ಮಗು ಮತ್ತು ಮೊಬೈಲ್ ನಡುವಿನ ವ್ಯತ್ಯಾಸವೇ ಗೊತ್ತಿಲ್ಲದಂತೆ ವರ್ತಿಸುತ್ತಾರೆ. ಮಗು ದೂರದಲ್ಲಿದ್ದರೆ ಮೊಬೈಲ್ ಪಕ್ಕದಲ್ಲೇ ಇಟ್ಟುಕೊಳ್ಳುತ್ತಾರೆ. ದಯವಿಟ್ಟು ಹಾಗೇ ಮಾಡಬೇಡಿ. ಮಗು ಪಕ್ಕದಲ್ಲಿರಲ್ಲಿ ಮೊಬೈಲ್ ದೂರವಿರಲ್ಲಿ. ತಾಯಿಯ ಎದೆ ಹಾಲು ಎನ್ನುವುದು ಮಗುವಿನ ಪಾಲಿಗೆ ಅಕ್ಷಯ ಪಾತ್ರ ಇದ್ದಂತೆ. ಯಾವುದೇ ಸೊಂಕಿಲ್ಲದ, ಮಗುವಿಗೆ ಅವಶ್ಯಕವಿರುವ ಬೆಚ್ಚಗಿನ ರೀತಿಯಲ್ಲಿ ಸಿಗುವ ಆಹಾರವೆಂದರೆ ತಾಯಿ ಎದೆಹಾಲು. ತಾಯಂದಿರು ಮಗುವಿಗೆ ಸರಿಯಾದ ರೀತಿಯಲ್ಲಿ ಏದೆಹಾಲನ್ನು ನೀಡುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಆಡಳಿತ ಸಹಾಯಕ ಅಧಿಕಾರಿ ಶಶಿಕಲಾ ನಾಯ್ಕ ಮಾತನಾಡಿ, ಸಮಾಜದಲ್ಲಿ ಆರೋಗ್ಯಯುತ ಮಗುವಿನ ಬೆಳವಣಿಗೆಯಲ್ಲಿ ತಾಯಿ ಎದೆ ನೀಡುವಿಕೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ ಕಿಣಿ ಮಾತನಾಡಿ, ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಸಾರ್ವಜನಿಕರು ಕೈ ಜೋಡಿಸಬೇಕು. ಹೆರಿಗೆ ವಾರ್ಡ್ ಸದಾ ತುಂಬಿರುತ್ತದೆ. ಸ್ವಚ್ಛತೆ ನಿಭಾಯಿಸಲು ನಿಮ್ಮೆಲ್ಲರ ಸಹಕಾರ ಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಶ್ರೀನಿವಾಸ್ ನಾಯಕ, ರಮೇಶ ಗೌಡ, ಡಾ. ಗುರುದತ್ತ ಕುಲಕರ್ಣಿ, ಶೂಶ್ರೂಷಾಧಿಕಾರಿಗಳಾದ ಜಯಂತಿ ನಾಯ್ಕ, ಭಾರತಿ ನಾಯ್ಕ ಉಪಸ್ಥಿತರಿದ್ದರು. ಐಸಿಟಿಸಿ ಆಪ್ತಸಮಾಲೋಚಕ ವಿನಾಯಕ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು.