ಸಾರಾಂಶ
- ಆಡುವಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿಶ್ವ ಸ್ಥನ್ಯಪಾನ ಸಪ್ತಾಹ 2025- ಉದ್ಘಾಟನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಮಗುವಿಗೆ ಎದೆ ಹಾಲು ನೀಡಲು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆಡುವಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್ ಗೌಡ ತಿಳಿಸಿದರು.
ಮಂಗಳವಾರ ತಾಲೂಕಿನ ಆರೋಗ್ಯ ಇಲಾಖೆ, ಸಿಡಿಪಿಒ ಇಲಾಖೆ, ಆಡುವಳ್ಳಿ ಗ್ರಾಪಂ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಗುವಿಗೆ ಎದೆ ಹಾಲು ನೀಡದಿದ್ದರೆ ಮಗುವಿನ ಮುಂದಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಶಿಶು ಮರಣ ಸಂಭವಿಸುವ ಸಂಭವ ಜಾಸ್ತಿ ಆಗುತ್ತದೆ. ಆದ್ದರಿಂದ ಆರೋಗ್ಯ ಇಲಾಖೆಯವರು ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಈ ಅರಿವು ಮೂಡಿಸಿ ಸ್ತನ್ಯಪಾನದ ಮಹತ್ವ ಹೆಚ್ಚಿಸಬೇಕು ಎಂದು ಕರೆ ನೀಡಿದರು.ಕಟ್ಟನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ವಿನಯ ಪ್ರಾಸ್ತಾವಿಕವಾಗಿ ಮಾತನಾಡಿ, ಆ.1 ರಿಂದ 7 ರವರೆಗೆ ವಿಶ್ವದಾದ್ಯಂತ ವಿಶ್ವ ಸ್ತನ್ಯಪಾನ ಸಪ್ತಾಹ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ ಎದೆ ಹಾಲಿನ ಮಹತ್ವವನ್ನು ತಾಯಿಗೆ ಮತ್ತು ಮಗುವಿಗೆ ತಿಳಿಸಲಾಗುತ್ತದೆ. ಸ್ತನ್ಯಪಾನ ಸಪ್ತಾಹದಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಈ ವರ್ಷ ತಾಯಿ ಎದೆ ಹಾಲಿನ ಮೇಲೆ ಹೂಡಿಕೆ ಮಾಡಿದರೆ ಮಕ್ಕಳ ಆರೋಗ್ಯದ ಮೇಲೆ ಭವಿಷ್ಯ ಮಾಡಿದಂತೆ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಹುಟ್ಟಿದ ತಕ್ಷಣ ಮಕ್ಕಳಿಗೆ ಎದೆ ಹಾಲು ನೀಡುವುದನ್ನು ಪ್ರಾರಂಭಿಸಿ 6 ತಿಂಗಳವರೆಗೆ ಕೇವಲ ಎದೆ ಹಾಲನ್ನು ಮಾತ್ರ ನೀಡಬೇಕು. ಕನಿಷ್ಟ ಎರಡು ವರ್ಷಗಳವರೆಗಾದರೂ ಎದೆ ಹಾಲನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು.ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ಎದೆ ಹಾಲು ಸ್ವಾಭಾವಿಕ ಲಸಿಕೆಯಾಗಿದ್ದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬೇಕಾಗುವ ಎಲ್ಲಾ ಅಂಶಗಳನ್ನು ಹೊಂದಿರುವ ಸಂಜೀವಿನಿಯಾಗಿದೆ ಎಂದು ತಿಳಿಸಿದರು. ನಂತರ ಪ್ರಾತ್ಯಕ್ಷಿಕೆ ಮೂಲಕ ಎದೆ ಹಾಲಿನಿಂದ ತಾಯಿ ಹಾಗೂ ಮಗುವಿಗೆ ಆಗುವ ಪ್ರಯೋಜನ, ಹಾಲುಣಿಸುವ ಸರಿಯಾದ ಬಂಗಿ, ತೇಗನ್ನು ತೆಗೆಯುವುದು, ಪೂರಕ ಆಹಾರಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿಜಯ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಅರ್ಪಿತ, ಕವಿತಾ, ಪೂರ್ಣಿಮಾ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗರ್ಭಿಣಿ ಬಾಣಂತಿಯರು ಹಾಜರಿದ್ದರು.