ಸ್ತನ್ಯಪಾನ ಮಗುವಿನ ಮೆದುಳಿನ ಬೆಳವಣಿಗೆಗೂ ಸಹಕಾರಿ

| Published : Aug 08 2024, 01:38 AM IST

ಸ್ತನ್ಯಪಾನ ಮಗುವಿನ ಮೆದುಳಿನ ಬೆಳವಣಿಗೆಗೂ ಸಹಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಎದೆಹಾಲು ಮಗುವಿಗೆ ಸಂಪೂರ್ಣವಾದ ಆಹಾರವಾಗಿದೆ. ಮಗುವಿನ ಮೆದುಳಿನ ಬೆಳವಣಿಗೆಗೂ ಸಹಕಾರಿಯಾಗಿದೆ. ಮಕ್ಕಳಿಗೆ ಅತ್ಯುತ್ತಮ ಪೋಷಕಾಂಶಗಳನ್ನು ಒದಗಿಸುತ್ತದೆ. ಇದರಲ್ಲಿ ಶಿಶುಗಳ ಆರೋಗ್ಯಕರ ಬೆಳವಣಿಗೆಗೆ ಅಗತ್ಯವಿರುವ ವಿಟಮಿನ್, ಖನಿಜಗಳು, ಪ್ರೋಟಿನ್, ಕೊಬ್ಬಿನಾಂಶಗಳು ಸೇರಿವೆ ಎಂದು ಎಸ್.ಎಸ್. ಹೈಟೆಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮಕ್ಕಳ ವಿಭಾಗದ ಪ್ರಾಧ್ಯಾಪಕಿ ಡಾ. ಜಿ.ಎಸ್. ಲತಾ ದಾವಣಗೆರೆಯಲ್ಲಿ ಹೇಳಿದ್ದಾರೆ.

- ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ಪ್ರಾಧ್ಯಾಪಕಿ ಡಾ. ಜಿ.ಎಸ್. ಲತಾ ಮಾಹಿತಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಎದೆಹಾಲು ಮಗುವಿಗೆ ಸಂಪೂರ್ಣವಾದ ಆಹಾರವಾಗಿದೆ. ಮಗುವಿನ ಮೆದುಳಿನ ಬೆಳವಣಿಗೆಗೂ ಸಹಕಾರಿಯಾಗಿದೆ. ಮಕ್ಕಳಿಗೆ ಅತ್ಯುತ್ತಮ ಪೋಷಕಾಂಶಗಳನ್ನು ಒದಗಿಸುತ್ತದೆ. ಇದರಲ್ಲಿ ಶಿಶುಗಳ ಆರೋಗ್ಯಕರ ಬೆಳವಣಿಗೆಗೆ ಅಗತ್ಯವಿರುವ ವಿಟಮಿನ್, ಖನಿಜಗಳು, ಪ್ರೋಟಿನ್, ಕೊಬ್ಬಿನಾಂಶಗಳು ಸೇರಿವೆ ಎಂದು ಎಸ್.ಎಸ್. ಹೈಟೆಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮಕ್ಕಳ ವಿಭಾಗದ ಪ್ರಾಧ್ಯಾಪಕಿ ಡಾ. ಜಿ.ಎಸ್. ಲತಾ ಹೇಳಿದರು.

ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಗುರುವಾರ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ "ಸ್ತನ್ಯಪಾನದ ಅಂತರವನ್ನು ಕಡಿಮೆಗೊಳಿಸಿ, ಎದೆ ಹಾಲುಣಿಸಲು ತಾಯಂದಿರನ್ನು ಪ್ರೋತ್ಸಾಹಿಸಿ " ವಿಷಯ ಕುರಿತು ಅವರು ಮಾತನಾಡಿದರು.

ಸ್ತನ್ಯಪಾನ ಮಗುವಿನ ಉತ್ತಮ ಆರೋಗ್ಯಕ್ಕೆ ಸೋಪಾನ ಮಾತ್ರವಲ್ಲ, ಹೆರಿಗೆ ನಂತರ ಹಾಲುಣಿಸುವುದರಿಂದ ತಾಯಂದಿರಲ್ಲಿ ರಕ್ತಸ್ರಾವ ಕಡಿಮೆ ಮಾಡಿ, ತಾಯಂದಿರ ಮರಣವನ್ನು ತಪ್ಪಿಸಲು ಸಹಾಯಕವಾಗಲಿದೆ. ತಾಯಿ ಹಾಲಿನಲ್ಲಿರುವ ಸಾಕಷ್ಟು ಪೌಷ್ಠಿಕಾಂಶಗಳು ಮಗುವಿನ ಬೆಳವಣಿಗೆಗೆ ಸಹಕರಿಸುತ್ತವೆ. ಮಗುವಿನ ಆರೋಗ್ಯವನ್ನು ಕಾಪಾಡುತ್ತದೆ. ಹಸುವಿನ ಹಾಲಿಗಿಂತ ಬೇಗ ತಾಯಿಯ ಹಾಲು ಜೀರ್ಣ ಆಗುವುದರಿಂದ ಮಗುವಿಗೆ ತಾಯಿಯ ಹಾಲು ಉತ್ತಮ ಎಂದು ಹೇಳಿದರು.

ಎದೆಹಾಲು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮ್ಕಕಳ ಅತಿಸಾರ, ಶೀತ, ಕಫ ಮತ್ತು ಇತರೆ ಬ್ಯಾಕ್ಟಿರೀಯಾ, ವೈರಸ್ ದಾಳಿಯಿಂದ ಕಾಪಾಡುತ್ತದೆ. ಇತರೆ ಸಾಂಕ್ರಾಮಿಕ ರೋಗಗಳಿಂದ ಕೂಡ ರಕ್ಷಣೆ ಸಿಗುತ್ತದೆ. ಮುಂದೆ ಸಕ್ಕರೆ, ರಕ್ತದೊತ್ತಡ ಕಾಯಿಲೆಗಳು ಕಡಿಮೆ ಪ್ರಮಾಣದಲ್ಲಿ ಇರುವುದು ಕಂಡುಬಂದಿದೆ ಎಂದರು.

ಮಗುವಿನ ಚುರುಕುತನ, ಐಕ್ಯು ಹೆಚ್ಚಾಗುವಂತೆ ಮಾಡುವ ಶಕ್ತಿ ಸ್ತನ್ಯಪಾನಕ್ಕಿದೆ. ತಾಯಿ ಹಾಲು ಮಕ್ಕಳಿಗೆ ತಕ್ಷಣವೇ ಸಿಗುವುದರಿಂದ ತಾಜಾತನದಿಂದ ಕೂಡಿರುತ್ತದೆ. ಯಾವುದೇ ರೀತಿಯ ಕಲಬೆರಿಕೆ ಸಾಧ್ಯವಿಲ್ಲ. ಹಾಗಾಗಿಯೇ, ಎದೆಹಾಲು ಸುರಕ್ಷಿತವೂ ಹೌದು. ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳನ್ನೂ ಕಾಡುತ್ತಿರುವ ಬೊಜ್ಜಿನ ಸಮಸ್ಯೆ ನಿವಾರಿಸುವ ಶಕ್ತಿ ಸ್ತನ್ಯಪಾನಕ್ಕಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೇಂದ್ರದ ನಿರ್ದೇಶಕ ಡಾ. ಜಿ.ಗುರುಪ್ರಸಾದ್, ಡಾ.ಸುರೇಶ್‌ ಬಾಬು, ಡಾ.ಕೌಜಲಗಿ, ಡಾ. ಎ.ಎಸ್. ಮೃತ್ಯುಂಜಯ, ಡಾ.ಮೂಗನಗೌಡ, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಅಂಜಲಿ ಇತರರು ಇದ್ದರು.

- - -

ಕೋಟ್‌ ಆ.1ರಿಂದ 7ರವರೆಗೆ ಸ್ತನ್ಯಪಾನ ಸಪ್ತಾಹ ಜಾಗತಿಕವಾಗಿ ಆಚರಿಸಲಾಗುವುದು. ಸಪ್ತಾಹದಲ್ಲಿ ತಾಯಂದಿರು ಶಿಶುಗಳಿಗೆ ಸ್ತನ್ಯಪಾನವನ್ನು ಮಾಡಿಸಲು ಪ್ರೇರೇಪಿಸುವುದು, ತಾಯಿ ಹಾಲಿನ ಮಹತ್ವ ತಿಳಿಸುವುದು ಹಾಗೂ ಸ್ತನ್ಯ ಪಾನ ಕುರಿತಾದ ಜಾಗೃತಿ ಮೂಡಿಸುವುದ ಮುಖ್ಯ ಉದ್ದೇಶ

- ಡಾ. ಜಿ.ಎಸ್. ಲತಾ, ಪ್ರಾಧ್ಯಾಪಕಿ- - -

-6ಕೆಡಿವಿಜಿ42, 43ಃ:

ದಾವಣಗೆರೆಯ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ ಆರೋಗ್ಯ ಕಾರ್ಯಾಗಾರದಲ್ಲಿ ಡಾ. ಜಿ.ಎಸ್. ಲತಾ ಉಪನ್ಯಾಸ ನೀಡಿದರು.