ಸಾರಾಂಶ
ಖಾತೆ ವರ್ಗಾವಣೆ ಮಾಡಿಸಿಕೊಡಲು ಲಂಚ ಸ್ವೀಕರಿಸಿದ ಆರೋಪದಡಿ ಗ್ರಾಪಂ ಅಧ್ಯಕ್ಷರೊಬ್ಬರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ದಾಖಲಿಸಿದ್ದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿದೆ.
ವೆಂಕಟೇಶ್ ಕಲಿಪಿ
ಬೆಂಗಳೂರು : ಲಂಚವಾಗಿ ಸ್ವೀಕರಿಸಲಾಗಿತ್ತು ಎನ್ನಲಾದ 10 ಸಾವಿರ ರು. ಅನ್ನು ಆರೋಪಿಯಿಂದ ಜಪ್ತಿ ಮಾಡದೆ ಆತನ ದ್ವಿಚಕ್ರ ವಾಹನದಲ್ಲಿ ಜಪ್ತಿ ಮಾಡಿದ ಅಂಶ ಪರಿಗಣಿಸಿದ ಹೈಕೋರ್ಟ್, ಖಾತೆ ವರ್ಗಾವಣೆ ಮಾಡಿಸಿಕೊಡಲು ಲಂಚ ಸ್ವೀಕರಿಸಿದ ಆರೋಪದಡಿ ಗ್ರಾಪಂ ಅಧ್ಯಕ್ಷರೊಬ್ಬರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ದಾಖಲಿಸಿದ್ದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿದೆ.
ತನ್ನ ವಿರುದ್ಧದ ಲಂಚ ಸ್ವೀಕಾರ ಪ್ರಕರಣ ರದ್ದುಪಡಿಸುವಂತೆ ಕೋರಿ ತುಮಕೂರಿನ ಬೆಳ್ಳಾವೆ ಗ್ರಾಪಂ ಅಧ್ಯಕ್ಷ ದೊಡ್ಡ ಓಬಳಯ್ಯ ಸಲ್ಲಿಸಿದ್ದ ತಕರಾರು ಅರ್ಜಿ ಪುರಸ್ಕರಿಸಿದ ಹೈಕೋರ್ಟ್ ಈ ಆದೇಶ ಮಾಡಿದೆ.
ಸಾರ್ವಜನಿಕ ಸೇವಕ ತನ್ನ ಕಾನೂನುಬದ್ಧ ಕರ್ತವ್ಯ ನಿರ್ವಹಣೆಗಾಗಿ ಭ್ರಷ್ಟ ಅಥವಾ ಕಾನೂನುಬಾಹಿರ ವಿಧಾನಗಳಿಂದ, ವೈಯಕ್ತಿಕವಾಗಿ ಇಲ್ಲವೇ ಮತ್ತೊಬ್ಬ ವ್ಯಕ್ತಿಯಿಂದ ಪ್ರಭಾವ ಬೀರುವ ಮೂಲಕ, ತನಗಾಗಿ ಅಥವಾ ಯಾವುದೇ ವ್ಯಕ್ತಿಗಾಗಿ ಅನುಚಿತ ಲಾಭ ಪಡೆಯುವ ಮತ್ತು ಪಡೆಯಲು ಪ್ರಯತ್ನಿಸುವುದು ಶಿಕ್ಷೆಗೆ ಅರ್ಹ ಎಂದು ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಸೆಕ್ಷನ್ 7(ಎ) ಪ್ರತಿಪಾದಿಸುತ್ತದೆ. ಅದರಲ್ಲೂ ಲಂಚ ಪ್ರಕರಣದಲ್ಲಿ ವೈಯಕ್ತಿಕವಾಗಿ ಅಥವಾ ಮತ್ತೊಬ್ಬರಿಂದ ಬೇಡಿಕೆಯಿಟ್ಟ ಮತ್ತು ಸ್ವೀಕರಿಸಿದ ಅಂಶ ಇರಬೇಕಾಗುತ್ತದೆ. ಆದರೆ, ಬೇಡಿಕೆಯಿದ್ದರೂ ಸ್ವೀಕಾರ ಇಲ್ಲದೆ ಹೋದರೆ ಆಗ ಸಾರ್ವಜನಿಕ ಸೇವಕನ ಲಂಚ ಪ್ರಕರಣ ದೃಢಪಡುವುದಿಲ್ಲ. ಬೇಡಿಕೆ ಮತ್ತು ಸ್ವೀಕಾರವು ಕೆಲ ಕೆಲಸ ನಿರ್ವಹಣೆ ಉದ್ದೇಶ ಒಳಗೊಂಡಿರಬೇಕು. ಅಂತಹ ಆ ಕೆಲಸವು ಆರೋಪಿತ ಸಾರ್ವಜನಿಕ ಸೇವಕನ ಬಳಿ ಬಾಕಿಯಿರಬೇಕಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದಲ್ಲಿ ಅರ್ಜಿದಾರರಿಗೆ ಸೇರಿದ ದ್ವಿಚಕ್ರ ವಾಹನದ ಡಿಕ್ಕಿಯಿಂದ 10 ಸಾವಿರ ರು. ಜಪ್ತಿ ಮಾಡಲಾಗಿದೆ. ಲಂಚಕ್ಕೆ ಬೇಡಿಕೆಯಿಡುವಾಗ ಅಥವಾ ಲಂಚ ಸ್ವೀಕರಿಸುವಾಗ ಅರ್ಜಿದಾರ ಸಿಕ್ಕಿಬಿದ್ದಿಲ್ಲ. ಲಂಚದ ಹಣ ಅರ್ಜಿದಾರನಿಂದ ಜಪ್ತಿ ಮಾಡಿಲ್ಲ. ದಾಳಿ ಪೂರ್ವದ ಮಹಜರು ಮತ್ತು ದಾಳಿ ನಂತರದ ಪಂಚನಾಮೆ ಸಾಕ್ಷಿಗಳು ಅರ್ಜಿದಾರ ಲಂಚ ಸ್ವೀಕರಿಸಿರುವುದು ದೃಢಪಡಿಸುವುದಿಲ್ಲ. ಒಂದೊಮ್ಮೆ ಅರ್ಜಿದಾರ ಲಂಚಕ್ಕೆ ಬೇಡಿಕೆಯಿಟ್ಟು ಸ್ವೀಕರಿಸಿದ್ದರೆ ಅಥವಾ ಕಳಂಕಿತ ನೋಟುಗಳನ್ನು ಅರ್ಜಿದಾರನ ಕೈಗಳಿಂದ ಜಪ್ತಿ ಮಾಡಿದ್ದರೆ ಆಗ ಸನ್ನಿವೇಶ ವಿಭಿನ್ನವಾಗಿರುತ್ತಿತ್ತು ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣದಲ್ಲಿ ಅರ್ಜಿದಾರನ ದ್ವಿಚಕ್ರ ವಾಹನದಲ್ಲಿ ದೂರುದಾರನೇ 10 ಸಾವಿರ ರು. ಇಟ್ಟಿರುವಂತೆ ತೋರುತ್ತದೆ. ದ್ವಿಚಕ್ರ ವಾಹನದಲ್ಲಿ ದೊರೆತ ನೋಟುಗಳನ್ನು ಮತ್ತು ಅರ್ಜಿದಾರರ ಕೈಗಳನ್ನು ಫೆನಾಪ್ತಲೀನ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅರ್ಜಿದಾರ ಕೈಗಳು ಗುಲಾಬಿ ಬಣ್ಣಕ್ಕೆ ತಿರುಗಲಿಲ್ಲ. ಸೋಡಿಯಂ ಕಾರ್ಬೋನೇಟ್ ಪುಡಿ ಮಿಶ್ರಿತ ನೀರು ಬಣ್ಣ ರಹಿತವಾಗಿಯೇ ಇತ್ತು. ಹೀಗಾಗಿ, ಲಂಚ ಸ್ವೀಕಾರ ಪ್ರಕರಣ ಸಾಬೀತಾಗುವುದಿಲ್ಲ. ದುರುದ್ದೇಶಪೂರಿತವಾಗಿ ದಾಖಲಿಸಿದ ಪ್ರಕರಣ ಮುಂದುವರಿಸಲು ಅನುಮತಿಸಿದರೆ ಅದು ಕಾನೂನು ದುರ್ಬಳಕೆಯಾಗುತ್ತದೆ ಮತ್ತು ನ್ಯಾಯದಾನದ ವೈಫಲ್ಯಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅರ್ಜಿದಾರನ ವಿರುದ್ಧದ ಲಂಚ ಸ್ವೀಕಾರ ಪ್ರಕರಣ ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ:
ಬೆಂಗಳೂರು ನಿವಾಸಿ ಶಿವು ಎಂಬಾತ 2020ರ ಮಾ.18ರಂದು ತುಮಕೂರು ಎಸಿಬಿ ಪೊಲೀಸರಿಗೆ ದೂರು ನೀಡಿ ತುಮಕೂರು ಬೆಳ್ಳಾವಿ ಗ್ರಾಮದಲ್ಲಿ ನನ್ನ ದೊಡ್ಡಮ್ಮನಾದ ನಾಗರತ್ನಮ್ಮಗೆ ಸೇರಿದ ಮನೆ ಮತ್ತು ನಿವೇಶನದ ಖಾತೆ ಮಾಡಿಕೊಡಲು ಬೆಳ್ಳಾವಿ ಗ್ರಾಪಂ ಅಧ್ಯಕ್ಷ ದೊಡ್ಡ ಓಬಳಯ್ಯ (57) ಅವರು 10 ಸಾವಿರ ರು. ಲಂಚಕ್ಕೆ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಪ್ರಕರಣ ದಾಖಲಿಸಿದ್ದ ಎಸಿಬಿ ಪೊಲೀಸರು ಗ್ರಾಪಂ ಕಚೇರಿ ಬಳಿ ದೊಡ್ಡ ಓಬಳಯ್ಯ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಶಿವು ನೀಡಿದ್ದರು ಎನ್ನಲಾದ 500 ರು. ಮುಖಬೆಲೆಯ 20 ನೋಟುಗಳನ್ನು ಪಂಚಾಯಿತಿ ಕಚೇರಿ ಹೊರಗೆ ನಿಲ್ಲಿಸಲಾಗಿದ್ದ ದೊಡ್ಡ ಓಬಳಯ್ಯಗೆ ಸೇರಿದ ಟಿವಿಎಸ್ ಜುಪಿಟರ್ ಗಾಡಿಯ ಡಿಕ್ಕಿಯಿಂದ ಜಪ್ತಿ ಮಾಡಿದ್ದರು. ನಂತರ ತನಿಖೆ ಪೂರ್ಣಗೊಳಿಸಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಸೆಕ್ಷನ್ 7(ಎ) ಅಡಿ ಲಂಚ ಸ್ವೀಕಾರ ಅಪರಾಧದಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ ಪ್ರಕರಣ ಕುರಿತ ತನ್ನ ವಿರುದ್ಧದ ಎಫ್‌ಐಆರ್ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ದೊಡ್ಡ ಓಬಳಯ್ಯ ಅರ್ಜಿ ಸಲ್ಲಿಸಿದ್ದರು.
)
;Resize=(128,128))
;Resize=(128,128))
;Resize=(128,128))