ಮೇಘಸ್ಫೋಟಕ್ಕೆ ಕೊಚ್ಚಿಹೋದ ಸೇತುವೆ: ಮತ್ತಾವು ನಿವಾಸಿಗಳಿಗೆ ಹೊರ ಜಗತ್ತು ಸಂಪರ್ಕ ಕಷ್ಟ

| Published : Oct 09 2024, 01:42 AM IST

ಮೇಘಸ್ಫೋಟಕ್ಕೆ ಕೊಚ್ಚಿಹೋದ ಸೇತುವೆ: ಮತ್ತಾವು ನಿವಾಸಿಗಳಿಗೆ ಹೊರ ಜಗತ್ತು ಸಂಪರ್ಕ ಕಷ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಹೆಬ್ರಿ ತಾಲೂಕಿನಲ್ಲಿ ಭಾನುವಾರ ಸುರಿದ ಭಾರಿ ಮಳೆಗೆ ಕಬ್ಬಿನಾಲೆ ಗ್ರಾಮದ ಮತ್ತಾವು ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ಮತ್ತಾವು ಭಾಗದ ಸಂಪರ್ಕ ಕಡಿತಗೊಂಡಿದೆ. ಮೇಘಸ್ಫೋಟಕ್ಕೆ ಕಬ್ಬಿನಾಲೆ ಹಾಗೂ ಗುಮ್ಮಗುಂಡಿ ನದಿಯಲ್ಲಿ ಭಾರಿ ಪ್ರವಾಹ ಪರಿಸ್ಥಿತಿ ಉಂಟಾಗಿ ಓರ್ವ ವೃದ್ಧೆ ಮೃತಪಟ್ಟು, 2 ಕಾರು 2 ಬೈಕ್‌ಗಳೂ ಸೇರಿದಂತೆ ಒಟ್ಟು ನಾಲ್ಕು ವಾಹನಗಳು ಪ್ರವಾಹದಲ್ಲಿ ತೇಲಿ ಹೋಗಿದ್ದವು.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಹೆಬ್ರಿ ತಾಲೂಕಿನಲ್ಲಿ ಭಾನುವಾರ ಸುರಿದ ಭಾರಿ ಮಳೆಗೆ ಕಬ್ಬಿನಾಲೆ ಗ್ರಾಮದ ಮತ್ತಾವು ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ಮತ್ತಾವು ಭಾಗದ ಸಂಪರ್ಕ ಕಡಿತಗೊಂಡಿದೆ.

ಮೇಘಸ್ಫೋಟಕ್ಕೆ ಕಬ್ಬಿನಾಲೆ ಹಾಗೂ ಗುಮ್ಮಗುಂಡಿ ನದಿಯಲ್ಲಿ ಭಾರಿ ಪ್ರವಾಹ ಪರಿಸ್ಥಿತಿ ಉಂಟಾಗಿ ಓರ್ವ ವೃದ್ಧೆ ಮೃತಪಟ್ಟು, 2 ಕಾರು 2 ಬೈಕ್‌ಗಳೂ ಸೇರಿದಂತೆ ಒಟ್ಟು ನಾಲ್ಕು ವಾಹನಗಳು ಪ್ರವಾಹದಲ್ಲಿ ತೇಲಿ ಹೋಗಿದ್ದವು.

ಮೂಲ ಸೌಕರ್ಯ ಮರೀಚಿಕೆ:

ನಕ್ಸಲರು ನಾಡ ಬಾಂಬ್ ಸ್ಫೋಟಿಸಿ 19 ವರ್ಷಗಳು ಕಳೆದರೂ ಮತ್ತಾವು ಎಂಬ ಊರಿಗೆ ಇನ್ನೂ ಮೂಲಸೌಕರ್ಯ ಮರೀಚಿಕೆಯಾಗಿದೆ. ಈ ಮರದ ಸೇತುವೆಯನ್ನೇ ದಾಟಿ 11 ಮಲೆಕುಡಿಯ ಕುಟುಂಬಗಳು ವಾಸಿಸುತ್ತಿವೆ. ಸುಮಾರು 30ಕ್ಕೂ ಅಧಿಕ ಮಂದಿ ಇಲ್ಲಿ ವಾಸವಿದ್ದಾರೆ. ಈ‌ ಕುಟುಂಬಗಳು ಕಬ್ಬಿನಾಲೆ, ಹೆಬ್ರಿ, ಮುನಿಯಾಲು ಸಂಪರ್ಕಿಸಬೇಕಾದರೆ ಈ ಮರದ ಸೇತುವೆ ಮೇಲೆ ನಿತ್ಯ ದಾಟಬೇಕು. ಕಳೆದ ಮೂರು ವರ್ಷಗಳಲ್ಲಿ ಮಳೆಗಾಲದಲ್ಲಿ ಒಟ್ಟು ನಾಲ್ಕು ಬಾರಿ ಈ ಮರದ ಸೇತುವೆ ಕಬ್ಬಿನಾಲೆ ನದಿಯ ಹರಿವಿಗೆ ಕೊಚ್ಚಿಕೊಂಡು ಹೋಗಿತ್ತು. ಮಳೆಗಾಲದಲ್ಲಿ ಸೇತುವೆ ಕೊಚ್ಚಿ ಹೋದರೆ ನದಿ ಪ್ರವಾಹ ಇಳಿಯುವ ತನಕ ಇವರಿಗೆ ಹೊರ ಜಗತ್ತು ಸಂಪರ್ಕವೇ ಇರುವುದಿಲ್ಲ.

ಸಂಪರ್ಕವಿಲ್ಲ:

ಕಬ್ಬಿನಾಲೆ ನದಿಯ ಸೆಳೆತಕ್ಕೆ ಮರದ ಸೇತುವೆ ಕೊಚ್ಚಿಕೊಂಡು ಹೋದರೆ ಮತ್ತೆ ಆ ಮಳೆಗಾಲ ಕಳೆಯುವ ತನಕ ಮೂರು ತಿಂಗಳು ಪೇಟೆಯ ಸಂಪರ್ಕವಿಲ್ಲ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹರಿದು ಬರುವ ಕಬ್ಬಿನಾಲೆ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತದೆ‌. ಭಾರಿ ಮಳೆ ಬಂದರೆ ಇಲ್ಲಿಯ ಕುಟುಂಬಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ . ಈ ಸೇತುವೆ ಮೇಲೆ ಸಾಗಲು ಐದು ಕಬ್ಬಿಣದ ಸರಿಗೆ ಹಿಡಿದು ಸಾಗಬೇಕು. ಸೇತುವೆ ಗಟ್ಟಿಯಾಗಿಸಲು ಕಬ್ಬಿಣದ ಸರಿಗೆಯನ್ನು ಮರಕ್ಕೆ ಬಿಗಿಯಲಾಗಿದೆ.

ಗರ್ಭಿಣಿಯರು, ಅನಾರೋಗ್ಯ ಪೀಡಿತರು ಈ ಸೇತುವೆ ದಾಟುವುದೇ ಅಗ್ನಿ ಪರೀಕ್ಷೆ. ವಿದ್ಯಾಭ್ಯಾಸಕ್ಕೆ ಇಲ್ಲಿನ ವಿದ್ಯಾರ್ಥಿಗಳನ್ನು ಪೋಷಕರು ಕಾರ್ಕಳ ಹಾಗೂ ಹೆಬ್ರಿಯ ಹಾಸ್ಟೆಲ್‌ಗಳಿಗೆ ಸೇರಿಸಬೇಕು.

ಅಕ್ಕಿ, ತರಕಾರಿ ದಾಸ್ತಾನು:

ಮಳೆಗಾಲ ಬಂತೆಂದರೆ ಇಲ್ಲಿ ಅನಾನುಕೂಲಗಳೆ ಜಾಸ್ತಿ. ಮೂರು, ನಾಲ್ಕು ತಿಂಗಳಿಗೆ ಅಕ್ಕಿ ಹಾಗೂ ದಿನಸಿ ವಸ್ತುಗಳನ್ನು ಶೇಖರಿಸಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಮಳೆಯಲ್ಲಿ ಸಾಗುವುದೂ ಅಪಾಯಕಾರಿ. ಇಲ್ಲಿನ ಜಮೀನುಗಳಲ್ಲಿ ಬೆಳೆದ ಅಡಕೆ, ತೆಂಗು, ಬಾಳೆ ಮಾರಲು ಬೇಸಿಗೆ ಅಥವಾ ಚಳಿಗಾಲವನ್ನು ಆಶ್ರಯಿಸಬೇಕು. ಇಲ್ಲದಿದ್ದರೆ ಈ ಕಾಲು ಸಂಕದಲ್ಲಿ ಸಾಗುವುದೇ ಅಪಾಯಕಾರಿ.

ನಕ್ಸಲ್ ಕರಿ ನೆರಳು: ಕಬ್ಬಿನಾಲೆಯಲ್ಲಿ ನಕ್ಸಲ್ ಬಾಂಬ್ ದಾಳಿಯಾಗಿ 19 ವರ್ಷಗಳು ಕಳೆದಿವೆ. ಅಂದು, 2005 ರ ಜು.28 ರಂದು ಮತ್ತಾವು ಬಳಿ ನೆಲಬಾಂಬ್ ಸ್ಫೋಟಿಸಿ ನಕ್ಸಲರ ಇರುವಿಕೆ ರಾಜ್ಯಾದ್ಯಂತ ಗಮನ ಸೆಳೆದಿತ್ತು.

ವನ್ಯಜೀವಿ ವಿಭಾಗ ವ್ಯಾಪ್ತಿ:

ಕಬ್ಬಿನಾಲೆ ಸೇತುವೆ ಕುದುರೆಮುಖ ವನ್ಯ ಜೀವಿ ವಿಭಾಗದ ವ್ಯಾಪ್ತಿಯಲ್ಲಿ ಬರುವ ಕಾರಣ ಸ್ಟೇಟ್ ಬೋರ್ಡ್ ಫಾರ್ ವೈಲ್ಡ್ ಲೈಫ್ ಮಂಜೂರಾತಿ ಪಡೆಯಬೇಕು.

ಜಿಲ್ಲಾಧಿಕಾರಿ ಭೇಟಿ: ಕುದುರೆಮುಖ ವನ್ಯಜೀವಿ ಅರಣ್ಯ ವ್ಯಾಪ್ತಿಯ ಮತ್ತಾವು ಸೇತುವೆ ಗೆ ಜುಲೈ ತಿಂಗಳಲ್ಲಿ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದರು.

.........................

ಕುದುರೆಮುಖ ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ರಾಜ್ಯ ಬೋರ್ಡ್ ಫಾರ್ ವೈಲ್ಡ್ ಲೈಫ್ ಒಪ್ಪಿಗೆಗಾಗಿ ಸೇತುವೆ ನಿರ್ಮಾಣ ಪ್ರಸ್ತಾಪ ಇಡಲಾಗಿದೆ. ಒಪ್ಪಿಗೆ ಪಡೆದ ಬಳಿಕ ಸೇತುವೆ ನಿರ್ಮಾಣ ಮಾಡಲಾಗುವುದು.

-ಡಾ.ವಿದ್ಯಾಕುಮಾರಿ, ಉಡುಪಿ ಜಿಲ್ಲಾಧಿಕಾರಿ.

.....................

11 ಮಲೆಕುಡಿಯ ಕುಟುಂಬಗಳಿಗೆ ಈ ಸೇತುವೆ ಆಧಾರ. ಆದಷ್ಟು ಬೇಗ ಇಲ್ಲಿ ಸರ್ವಋತು ಸೇತುವೆ ನಿರ್ಮಾಣವಾಗಬೇಕು. ವಾಹನಗಳು ಮನೆತನಕ ಸಾಗಬೇಕು.

-ಗಂಗಾಧರ ಗೌಡ ಈದು, ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ.