ನಾಳೆ ಬ್ರಿಗೇಡ್ ಚಿಂತನ ಮಂಥನ ಸಭೆ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ

| Published : Oct 19 2024, 12:37 AM IST

ಸಾರಾಂಶ

ಅ.20 ರಂದು ಬಾಗಲಕೋಟೆ ಚರಂತಿಮಠ ಕಲ್ಯಾಣ ಮಂಟಪದಲ್ಲಿ ಬ್ರಿಗೇಡ್ ಬಗ್ಗೆ ಚಿಂತನ ಮಂಥನ ಸಭೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಕ್ಟೋಬರ್ 20ರಂದು ಬಾಗಲಕೋಟೆಯಲ್ಲಿ ಬ್ರಿಗೇಡ್ ಬಗ್ಗೆ ಚಿಂತನ-ಮಂಥನ ಸಭೆ ನಡೆಯಲಿದೆ. ಅನೇಕ ಮಠಾಧೀಶರು ನನಗೂ, ಯತ್ನಾಳ ಅವರಿಗೆ ರಾಯಣ್ಣ, ಚನ್ನಮ್ಮನ ರಕ್ತ ಹಂಚಿಕೊಂಡು ಹುಟ್ಟಿದ್ದೀರಿ. ಹಿಂದುಳಿದ, ಸಮಸ್ತ ಹಿಂದೂಗಳ ಏಳ್ಗೆಗೆ ಕೆಲಸ ಮಾಡಿ ಅಂದಿದ್ದಾರೆ. ಸಾಧು ಸಂತರು, ಸಮಾಜದ ಮುಖಂಡರು ಏನು ಹೇಳುತ್ತಾರೆ, ಅವರ ಅಭಿಪ್ರಾಯ ತೆಗೆದುಗೊಂಡು ಮುಂದುವರಿಯುವ ಸಿದ್ಧತೆ ಮಾಡುತ್ತಿದ್ದೇವೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅ.20 ರಂದು ಬಾಗಲಕೋಟೆ ಚರಂತಿಮಠ ಕಲ್ಯಾಣ ಮಂಟಪದಲ್ಲಿ ಬ್ರಿಗೇಡ್ ಬಗ್ಗೆ ಚಿಂತನ ಮಂಥನ ಸಭೆ ನಡೆಯಲಿದೆ. ಬ್ರಿಗೇಡ್ ಹೆಸರಿಡಬೇಕೋ ಹೇಗೆ ಎಂಬುವುದರ ಕುರಿತು ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಚರ್ಚೆ ಮಾಡಲಿದ್ದೇವೆ ಎಂದು ಹೇಳಿದರು.

ಸುಮಾರು ಎರಡು ಸಾವಿರ ಪ್ರಮುಖ ಕಾರ್ಯಕರ್ತರು ಸೇರಿ ಮುಂದಿನ ಕಾರ್ಯ ಯೋಜನೆಗಳನ್ನು ಸಭೆಯಲ್ಲಿ ತೀರ್ಮಾನ ಮಾಡಲಿದ್ದೇವೆ. ಬ್ರಿಗೇಡ್ ಹೆಸರು 20ನೇ ತಾರೀಕಿನಂದೇ ಘೋಷಣೆ ಮಾಡಬೇಕೋ, ಯಾವಾಗ ಮಾಡಬೇಕು ಎಂಬ ಬಗ್ಗೆ ಸಾಧು, ಸಂತರ ಮಾರ್ಗದರ್ಶನದಲ್ಲಿ ನಡೆಯಲಿದ್ದೇವೆ. ಹಿಂದುಳಿದವರು, ದಲಿತರು, ಎಲ್ಲರೂ ಬಳಸಿಕೊಳ್ಳುತ್ತಾರೆ. ಆದರೆ ಯಾರಿಗೂ ನ್ಯಾಯ ಕೊಡುವುದಕ್ಕೆ ಆಗುತ್ತಿಲ್ಲ. ಸಣ್ಣ, ಸಣ್ಣ ಸಮಾಜಗಳನ್ನು ಸಂಘಟಿತರಾಗಿ ಹೊರಗೆ ಬರಲು ಆಗುತ್ತಿಲ್ಲ. ಇಂತವರಿಗಾಗಿಯೂ ನಾವು ಈ ಬ್ರಿಗೇಡ್ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಅಮಿತ್ ಶಾ ಮಾತು ಕೇಳಿದ್ದು ತಪ್ಪಾಯ್ತು:

ಈಗ ಆರಂಭವಾಗಿರುವ ಬ್ರಿಗೇಡ್‌ ಅನ್ನು ನಾವು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ಕಳೆದ ಬಾರಿ ರಾಯಣ್ಣ ಬ್ರಿಗೇಡ್‌ಗೆ ಎಲ್ಲ ಸಮಾಜದವರು ಬೆಂಬಲ ಕೊಟ್ಟು, ಎಲ್ಲ ಪಕ್ಷದವರೂ ಬಂದಿದ್ದರು. ಆದರೆ, ಕೆಲವರು ಹೋಗಿ ಕೇಂದ್ರ ಬಿಜೆಪಿ ನಾಯಕ ಅಮಿತ್ ಶಾರನ್ನು ಭೇಟಿ ಮಾಡಿದಾಗ, ಶಾ ಅವರು ನನ್ನನ್ನು ಕರೆದು ರಾಯಣ್ಣ ಬ್ರಿಗೇಡ್ ಯಾಕೆ ಬೇಕು? ಬೇಡಾ ಅಂತಾ ಹೇಳಿದರು. ಏಕೆ ಬೇಡ ಅಂದ್ರೆ ಅವರ ಬಳಿ ಉತ್ತರ ಸಿಗಲಿಲ್ಲ. ಹಿರಿಯರ ಮಾತನ್ನು ಕೇಳಬೇಕು ಎಂಬುದು ನನ್ನ ಮುಂಚೆಯಿಂದ ಬಂದ ಸ್ವಭಾವ. ಆದರೆ ಈಗ ನನಗೆ ಅನಿಸುತ್ತಿದೆ. ಅವರ ಮಾತು ಕೇಳಿದ್ದು ತಪ್ಪಾಯ್ತಾ? ಆ ಸಂಘಟನೆ ಹಾಗೇ ಮುಂದುವರಿದಿದ್ರೆ, ದಲಿತರಿಗೆ, ಹಿಂದುಳಿದವರಿಗೆ ನ್ಯಾಯ ಸಿಗುತ್ತಿತ್ತು ಅನ್ನೋ ಭಾವನೆ ನಂದು. ಈಗ ಆರಂಭವಾಗೋ ಬ್ರಿಗೆಡ್‌ನ, ನಾವು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.

ಸದ್ಯಕ್ಕೆ ಬಿಜೆಪಿಗೆ ಹೋಗುವ ಚಿಂತನೆಯಿಲ್ಲ:

ನಾನೀಗ ಬಿಜೆಪಿಯಲ್ಲಿಲ್ಲ. ಬಿಜೆಪಿ ಸೇರಲು ಅನೇಕರು ಆಹ್ವಾನಿಸುತ್ತಿದ್ದಾರೆ. ಸದ್ಯಕ್ಕೆ ಬಿಜೆಪಿಗೆ ಹೋಗುವ ಚಿಂತನೆ ನನ್ನಲಿಲ್ಲ. ವೈಯಕ್ತಿಕವಾಗಿ ಬಿಜೆಪಿಯಲ್ಲಿ ನನಗೆ ಅನ್ಯಾಯ ಆಗಿದೆ. ಬಿಜೆಪಿ ಸದ್ಯದ ಪರಿಸ್ಥಿತಿ ಒಂದು ಕುಟುಂಬದ ಕೈಯಲ್ಲಿದ್ದು, ಹೊಂದಾಣಿಕೆ ರಾಜಕಾರಣ ಇದೆ ಎಂದು ಈಶ್ವರಪ್ಪ ಹೇಳಿದರು.

ನಾವು ಕೊಟ್ಟಿರುವ ಭಿಕ್ಷೆಯಿಂದ ನೀವು ಶಿಕಾರಿಪುರದಲ್ಲಿ ಗೆದ್ದು ಬಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದೀರಿ ಅಂತ ಸ್ವತಃ ಡಿಕೆಶಿ ಅವರು ಹೇಳಿರುವ ಮಾತು ಕೇಳಿ ನನಗೆ ತುಂಬಾ ನೋವಾಯಿತು. ಅಂದರೆ ನೇರವಾಗಿ ಹೊಂದಾಣಿಕೆ ಇದೆ ಅಂತ ಡಿಕೆಶಿ ಅವರು ವಿಜಯೇಂದ್ರಗೆ ಹೇಳಿದರು. ಹೊಂದಾಣಿಕೆ ರಾಜಕಾರಣ ಬಿಜೆಪಿಯಲ್ಲಿ ಎಂದೂ ಇರಲಿಲ್ಲ. ಹೊಂದಾಣಿಕೆ ರಾಜಕಾರಣದಿಂದ ಮುಕ್ತ ಆಗಬೇಕು ಎಂದರು. ಒಂದು ಕುಟುಂಬ ರಾಜಾಕಾರಣವನ್ನು ನರೇಂದ್ರ ಮೋದಿ ಅವರೇ ಒಪ್ಪುತ್ತಿಲ್ಲ. ಇದೆಲ್ಲ ಚರ್ಚೆ ಆಗಲಿ ಅನ್ನೋ ಉದ್ದೇಶಕ್ಕೆ ಲೋಕಸಭೆಗೆ ಸ್ಪರ್ಧಿಸಿದ್ದೇ, ಉದ್ದೇಶ ಈಡೇರಿದೆ. ಶುದ್ಧೀಕರಣದ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಇದು ಖುಷಿ ವಿಚಾರ ಎಂದು ಈಶ್ವರಪ್ಪ ತಮ್ಮ ಸ್ಪರ್ಧೆಯನ್ನು ಸಮರ್ಥಿಸಿಕೊಂಡರು.

ಎಂಪಿ ಮಾಡ್ತೀವಿ ಅಂದು ಅವ್ರೇ ಹೇಳಿ, ಅವ್ರೇ ಮೋಸ ಮಾಡಿದ್ರು:

ನಿಮ್ಮಮಗನಿಗೆ ಟಿಕೆಟ್ ಕೇಳಿದ್ದು ಕುಟುಂಬ ರಾಜಕಾರಣ ಅಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಕೆ.ಎಸ್.ಈಶ್ವರಪ್ಪ, ಪಕ್ಷದ ಸಿದ್ಧಾಂತ ಇದೆ. ಒಂದು ಕುಟುಂಬಕ್ಕೆ ಒಂದು ಸ್ಥಾನ, ನಾನೇನು ಎಂಎಲ್‌ಎ, ಎಂಪಿ ಅಲ್ಲ. ಹಾಗಾಗಿ ನನ್ನ ಮಗನಿಗೆ ಟಿಕೆಟ್ ಕೇಳಿದ್ರಲ್ಲಿ ತಪ್ಪಿಲ್ಲ. ನಾನು ಎಂಎಲ್‌ಎ, ಎಂಪಿ, ಮಂತ್ರಿ ಆಗಿಯೂ ಮಗನಿಗೆ ಟಿಕೆಟ್ ಕೇಳಿದರೆ ಅದು ಕುಟುಂಬ ರಾಜಕಾರಣವಾಗುತ್ತಿತ್ತು. ಈ ಚುನಾವಣೆಗೆ ನಿಲ್ಲಬಾರದು ಅಂತ ಪಕ್ಷ ಹೇಳಿತು. ನಾನು ಇದಕ್ಕೆ ಓಕೆ ಅಂದೆ. ಆ ಸಂದರ್ಭದಲ್ಲಿ ಎಲ್ಲರಿಗೂ ನನಗೆ ಪ್ರಾಮಿಸ್ (ವಚನ) ಮಾಡಿದ್ದೂ ಒಂದೇ ನಿಮ್ಮ ಮಗನಿಗೆ ಎಂಎಲ್‌ಎ ಮಾಡ್ತೀವಿ, ಎಂಪಿ ಮಾಡ್ತೀವಿ ಅಂದ್ರು ಅವರೇ ಹೇಳಿ, ಅವರೇ ಮೋಸ ಮಾಡಿದ್ರು ಎಂದು ದೂರಿದರು.

ಕೆಟ್ಟ ರಾಜಕಾರಣ ಕಾಂಗ್ರೆಸ್ ಮಾಡ್ತಿರೋದು ಮೊದಲೇನಲ್ಲ:

ಒಳಮೀಸಲಾತಿ ಜಾರಿ ಕುರಿತು ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ ಆದೇಶಕ್ಕೆ ಯಾರೂ ಅಡ್ಡಿ ಬರಲು ಆಗಲ್ಲ. ನ್ಯಾಯಾಲಯದ ಆದೇಶದ ಪ್ರಕಾರ ಒಳಮೀಸಲಾತಿ ಜಾರಿಗೆ ತಂದೇ ತರ್ಬೇಕು. ತಮಗೆ ಅನುಕೂಲ ಆದಾಗ ಸತ್ಯ ಮೇವ ಜಯತೆ ಅನ್ನುವುದು. ಮುಡಾ ವಿಚಾರದಲ್ಲಿ ಕೋರ್ಡ್‌ ತಮ್ಮ ಪರವಾಗಿ ಇಲ್ಲ ಅಂದಾಗ, ಯಾವ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಅಂತಾರೆ. ಎಲ್ಲ ಸಚಿವ ಸಂಪುಟದ ಸಚಿವರು ಅವರೇ ಸಿಎಂ ಅಂತಿದ್ದಾರೆ. ಆದರೆ, ಬೆನ್ನಿಗೆ ಚೂರಿ ಹಾಕ್ತಿದ್ದಾರೆ. ನಾನು ನಾನು ಮುಖ್ಯಮಂತ್ರಿ ಆಗಬೇಕು ಅಂತಿದ್ದಾರೆ. ಇಂತ ಕೆಟ್ಟ ರಾಜಕಾರಣ ಕರ್ನಾಟಕದಲ್ಲಿ ಕಾಂಗ್ರೆಸ್ ಮಾಡ್ತಿರೋದು ಇದು ಮೊದಲೇನಲ್ಲ, ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ ಅದನ್ನು ಮುಂದುವರೆಸಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಸಿಎಂ ಸ್ಥಾನ ಹೋದರೂ ಪರವಾಗಿಲ್ಲ, ಜಾತಿಗಣತಿ ವರದಿ ಬಿಡುಗಡೆಗೊಳಿಸಿ:

ಜಾತಿ ಗಣತಿ ಬಿಡುಗಡೆ ಕುರಿತು ಈಶ್ವರಪ್ಪ ಮಾತನಾಡಿ, ಕಾಂತರಾಜ ವರದಿಯನ್ನ ತಕ್ಷಣ ಬಿಡುಗಡೆ ಮಾಡಬೇಕು ಅಂತ ನಾನು ಹಿಂದೆಯೇ ವಿಧಾನ ಪರಿಷತ್‌ನಲ್ಲಿ ಇದ್ದಾಗ ಒತ್ತಾಯಿಸಿದ್ದೆ. ಆಗ ಸಿದ್ದರಾಮಯ್ಯ ಅವರೇ ಸಿಎಂ ಇದ್ರು. ಆ ಸರ್ಕಾರದಲ್ಲೆ ಬಿಡುಗಡೆ ಮಾಡಿಯೇ ಮಾಡ್ತೇವೆ ಅಂತ ಹೇಳಿದ್ರು. ಈಗಿನಂತೆ, ಆಗಲೂ ಸಿದ್ದರಾಮಯ್ಯ ಉತ್ತರ ಕುಮಾರನ ಪೌರುಷ ತೋರಿಸಿದ್ರು. ಮೊನ್ನೆ 18ನೇ ತಾರೀಖಿನ ಸಂಪುಟ ಸಭೆಯಲ್ಲಿ ತಂದೇ ತರ್ತೀನೆ ಅಂದಿದ್ರು. ಈಗ ಮತ್ತೆ ಅನಿವಾರ್ಯ ಕಾರಣದಿಂದ 25ನೇ ತಾರೀಖು ಅಂತಿದ್ದಾರೆ. ಇವರಿಗೆ (ಕಾಂಗ್ರೆಸ್) ಯಾವುದೇ ಕಳಕಳಿ ಇಲ್ಲ, ಅಹಿಂದ ಪದ ಹಿಡಕೊಂಡು ರಾಜಕಾರಣ ಮಾಡ್ತಿದ್ದಾರೆ. ಈ ಕಾಂಗ್ರೆಸ್ಸಿಗರು ಯಾವುದು ಮಾಡಲ್ಲ, ಇದು ನಂಗೆ ಗೊತ್ತು, ಆದರೂ ಕೂಡ ಸ್ವಲ್ಪ ಆಸೆ ಇದೆ. ಅವರ ಪಕ್ಷದಲ್ಲಿ ಕೆಲವರು ಹೇಳ್ತಿದ್ದಾರೆ ಮುಖ್ಯಮಂತ್ರಿ ಸ್ಥಾನ ಹೋದರೂ ಪರವಾಗಿಲ್ಲ, ಜಾರಿಗೆ ತನ್ನಿ ಅಂತ. ನಾನು ಅವರ ಸಿಎಂ ಸ್ಥಾನ ಹೋಗಲಿ ಎನ್ನುವ ಅಪೇಕ್ಷೆ ಪಡಲ್ಲ. ಮುಡಾ ಕೇಸ್‌ನಲ್ಲಿ ಅವರು ರಾಜೀನಾಮೆ ಕೊಟ್ಟು, ಕ್ಲೀನ್ ಚೀಟ್ ತಗೊಂಡು ಬರಲಿ ಅಂತ ಭಗವಂತನಲ್ಲಿ ಪ್ರಾರ್ಥನೆ ಮಾಡ್ತೇನೆ. ನಾನು ರಾಜಕಾರಣ ಮಾಡಲು ಇಷ್ಟಪಡಲ್ಲ. ಆದರೆ, ಅವರು ಅಹಿಂದ ಜನರನ್ನ ರಾಜಕಾರಣಕ್ಕೆ ಬಳಕೆ ಮಾಡ್ತಿದ್ದಾರಲ್ಲ, ಆ ನೋವು ಇದೆ ಎಂದರು.