ಸಾರಾಂಶ
ಮಂಗಳವಾರ ಮತ ಎಣಿಕೆಯ ದಿನ ಕೂಡ ಬೆಳಗ್ಗಿನಿಂದಲೇ ಬಿಜೆಪಿಗರು ಆ ವೀಡಿಯೋವನ್ನು ಮತ್ತೆ ತಮ್ಮ ವಾಟ್ಸ್ಆ್ಯಪ್ ಸ್ಟೇಟಸ್‌ಗಳಲ್ಲಿ ಹಾಕಿಕೊಂಡಿದ್ದು, ಗ್ರೂಪ್‌ಗಳಲ್ಲೂ ಹಂಚಿಕೊಂಡು ಬ್ರಿಜೇಶ್ ಚೌಟ ಅವರ ಗೆಲವು ಸಂಭ್ರಮಿಸಿದ್ದಾರೆ.
ಬಂಟ್ವಾಳ: ದ.ಕ. ಲೋಕಸಭಾ ನೂತನ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಸ್ಥಾನದ ಅರ್ಚಕ ಪದ್ಮನಾಭ ಭಟ್ ಪ್ರಸಾದ ನೀಡಿದರು.
ದೇವಳದ ಅನುವಂಶಿಕ ಮೊಕ್ತೇಸರ ಪವಿತ್ರಪಾಣಿ ಮಾಧವ ಭಟ್, ಶ್ರೀಕಾಂತ್ ಮಯ್ಯ ಹಾಗೂ ವೆಂಕಟೇಶ್ ನಾವಡ ಪೊಳಲಿ, ಯಶವಂತ ಕೊಟ್ಯಾನ್ ಪೊಳಲಿ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು. ಚುನಾವಣೆ ಪೂರ್ವದಲ್ಲೇ ಗೆಲವಿನ ಸೂಚನೆ?ಚುನಾವಣಪೂರ್ವದಲ್ಲಿ ಪೊಳಲಿ ಜಾತ್ರೆಯ ಸಂದರ್ಭ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಪೊಳಲಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿ ಹಣೆಗೆ ಕುಂಕುಮ ಹಚ್ಚುತ್ತಿದ್ದಂತೆ ದೇವಸ್ಥಾನದ ಅಲಂಕಾರದ ಹೂವೊಂದು ಅವರ ಪ್ರಸಾದದ ತಟ್ಟೆಗೆ ಬಿದ್ದಿತ್ತು. ಅದು, ಶ್ರೀ ರಾಜರಾಜೇಶ್ವರೀ ತಾಯಿ ನೀಡಿದ ಗೆಲುವಿನ ಮುನ್ಸೂಚನೆಯ ಪ್ರಸಾದವೆಂದೇ ಬಿಜೆಪಿಗರು ಸಂಭ್ರಮಿಸಿದ್ದರು.
ಆ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್ ಉಳಿಪ್ಪಾಡಿಗುತ್ತು ಕೂಡ ಜತೆಗಿದ್ದು, ಹೂವು ಬೀಳುತ್ತಿದ್ದಂತೆ ಎಲ್ಲರೂ ಕೈ ಮುಗಿದು ಸಂತಸಪಟ್ಟಿದ್ದರು. ಹೂವು ಬೀಳುವ ವೀಡಿಯೋ ವೈರಲ್ ಆಗಿತ್ತು. ಮಂಗಳವಾರ ಮತ ಎಣಿಕೆಯ ದಿನ ಕೂಡ ಬೆಳಗ್ಗಿನಿಂದಲೇ ಬಿಜೆಪಿಗರು ಆ ವೀಡಿಯೋವನ್ನು ಮತ್ತೆ ತಮ್ಮ ವಾಟ್ಸ್ಆ್ಯಪ್ ಸ್ಟೇಟಸ್‌ಗಳಲ್ಲಿ ಹಾಕಿಕೊಂಡಿದ್ದು, ಗ್ರೂಪ್‌ಗಳಲ್ಲೂ ಹಂಚಿಕೊಂಡು ಬ್ರಿಜೇಶ್ ಚೌಟ ಅವರ ಗೆಲವು ಸಂಭ್ರಮಿಸಿದ್ದಾರೆ.