ಸಾರಾಂಶ
ಬೆಂಗಳೂರು : ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಪರ-ವಿರೋಧ ಅಭಿಪ್ರಾಯಗಳು ತಾರಕಕ್ಕೇರಿರುವ ಸಂದರ್ಭದಲ್ಲೇ ಕಾಗಿನೆಲೆ ಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ ಅವರು ‘ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಬೇಕು’ ಎಂದು ಬಹಿರಂಗ ಹೇಳಿಕೆ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಉನ್ನತ ಸ್ಥಾನ ಸಿಗಬೇಕು ಎಂದು ವೀರಶೈವ-ಲಿಂಗಾಯತ ಸಮುದಾಯದ ಬಾಳೆಹೊನ್ನೂರಿನ ರಂಭಾಪುರಿ ಮಠದ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಇತ್ತೀಚೆಗೆ ಹೇಳಿಕೆ ನೀಡಿದ್ದ ಬೆನ್ನಲ್ಲೇ ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿಗಳೂ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕು ಎಂದು ಆಶಿಸಿದ್ದರು. ಇದೆಲ್ಲದಕ್ಕೂ ಉತ್ತರ ನೀಡುವಂತೆ, ಕುರುಬ ಸಮುದಾಯದ ಕಾಗಿನೆಲೆ ಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ ಅವರು ‘ಸಿದ್ದರಾಮಯ್ಯ ಅವರೇ ಐದು ವರ್ಷ ಪೂರ್ಣಗೊಳಿಸಬೇಕು’ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಈಶ್ವರಾನಂದಪುರಿ ಸ್ವಾಮೀಜಿ ಅವರು, ‘ಬಹುಮತ ಹೊಂದಿರುವ ಸರ್ಕಾರದ ಮುಖ್ಯಮಂತ್ರಿಗಳು ಐದು ವರ್ಷ ಪೂರ್ಣಾವಧಿ ಅಧಿಕಾರದಲ್ಲಿ ಇರುವಂತಹ ಕಾನೂನು ರಚಿಸಬೇಕು. ಹೀಗೆ ಮಾಡಿದರೆ ಒಳ್ಳೆಯದಾಗುತ್ತದೆ’ ಎಂದು ಹೇಳಿದರು.
‘ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನವನ್ನು ಒಂದು ವರ್ಷ, ಒಂದೂವರೆ ವರ್ಷ, ಎರಡು ವರ್ಷಕ್ಕೆ ನೀಡುವಂತೆ ಮುಖ್ಯಮಂತ್ರಿ ಸ್ಥಾನವನ್ನೂ ನೀಡಿದರೆ ಪದವಿಗೆ, ಕುರ್ಚಿಗೆ ಗೌರವ ಇರುವುದಿಲ್ಲ. ಸಿದ್ದರಾಮಯ್ಯ ಅವರಿಗೆ ಜನ ಬೆಂಬಲವಿದೆ. ಬಡವರ ಪರವಾಗಿ ಗಟ್ಟಿ ಧ್ವನಿಯಲ್ಲಿ ವಿಧಾನಸೌಧದಲ್ಲಿ ಮಾತನಾಡುವ ನಾಯಕ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ’ ಎಂದು ಅಭಿಪ್ರಾಯಪಟ್ಟರು.
ಹಾಲುಮತಕ್ಕೆ ಸೇರಿದ ಮಹಿಳೆಯಾದ ಅಹಲ್ಯಾಬಾಯಿ ಹೋಳ್ಕರ್ ಅವರು ಎಲ್ಲ ಸಮಾಜ, ಧರ್ಮದವರನ್ನೂ ಪ್ರೀತಿಸುತ್ತಿದ್ದರು. 12 ಜ್ಯೋತಿರ್ಲಿಂಗಗಳನ್ನೂ ಜೀರ್ಣೋದ್ಧಾರ ಮಾಡಿದರು. ಬಾಲ್ಯವಿವಾಹ, ಸತಿ ಸಹಗಮನ ಪದ್ಧತಿ, ಜಾತೀಯತೆ ಮೆಟ್ಟಿ ನಿಂತರು. ಮಸೀದಿಗಳ ಪಕ್ಕ ದೇವಸ್ಥಾನ ನಿರ್ಮಾಣ ಮಾಡಿದರು. ಇವರ ಹಾದಿಯಲ್ಲೇ ಸಿದ್ದರಾಮಯ್ಯ ಸಾಗುತ್ತಿದ್ದಾರೆ’ ಎಂದು ಪ್ರಶಂಸಿಸಿದರು.
‘ಸಿದ್ದರಾಮಯ್ಯನವರು ಬಿಟ್ಟಿ ಭಾಗ್ಯಗಳನ್ನು ನೀಡಿ ಜನರನ್ನು ಸೋಮಾರಿ ಮಾಡುತ್ತಿದ್ದಾರೆ ಎಂದು ನಾಡಿನ ಪ್ರಸಿದ್ಧ ಮಠಾಧೀಶರೊಬ್ಬರು ಹೇಳಿಕೆ ನೀಡಿದ್ದಾರೆ. ಆ ಮಾತನ್ನು ಅವರು ಆಡಬಾರದಿತ್ತು. ಎರಡು ಸಾವಿರ ರುಪಾಯಿಯನ್ನು ಸಿದ್ದರಾಮಯ್ಯ ಹೆಣ್ಣು ಮಕ್ಕಳಿಗೆ ನೀಡುವ ಜೊತೆಗೆ ಉಚಿತ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದನ್ನು ಬಿಟ್ಟಿ ಭಾಗ್ಯ ಎಂದು ಕರೆಯಬಾರದಿತ್ತು. ಸಿದ್ದರಾಮಯ್ಯ ಅವರ ಜನಪರ ಕೆಲಸಗಳನ್ನು ಸಹಿಸದ ಮನಸ್ಸುಗಳು ಈ ರೀತಿ ಮಾತನಾಡುತ್ತಿವೆ. ಬಡವರು, ಮಹಿಳೆಯರು, ಅಹಿಂದದ ಪರವಾಗಿ ಮಾಡುತ್ತಿರುವ ಕೆಲಸಗಳನ್ನು ಸಿದ್ದರಾಮಯ್ಯ ಮುಂದುವರೆಸಬೇಕು. ರಾಜ್ಯದ ಜನತೆ ನಿಮ್ಮ ಜೊತೆಗಿದ್ದಾರೆ’ ಎಂದು ಅಭಯ ನೀಡಿದರು.
ಸಿದ್ದು ಅಲುಗಾಡಿಸಲು ಆಗಲ್ಲ
ಸಿದ್ದರಾಮಯ್ಯ ಅವರು ದೇಶದಲ್ಲೇ ಪ್ರಾಮಾಣಿಕ ಮುಖ್ಯಮಂತ್ರಿಯಾಗಿದ್ದಾರೆ. ಬಡವರ ಪರವಾಗಿ ಅವರು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ಅವರನ್ನು ಯಾರೂ ಅಲುಗಾಡಿಸಲು ಆಗುವುದಿಲ್ಲ.
-ಬೈರತಿ ಸುರೇಶ್, ನಗರಾಭಿವೃದ್ಧಿ ಸಚಿವಕುರುಬರು ಹೆಚ್ಚು ಸಂಘಟಿತ
ಕುರುಬ ಸಮುದಾಯ ಈಗ ಹೆಚ್ಚು ಸಂಘಟಿತವಾಗುತ್ತಿದೆ. ಸಂಘಟನೆಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗಿದೆ. ‘ಕೂತರೆ ಕುರುಬ-ನಿಂತರೆ ಕಿರುಬ’ ಎಂಬ ಮಾತುಗಳು ಕೇಳಿಬರುತ್ತಿವೆ.
- ಎಚ್.ಎಂ.ರೇವಣ್ಣ, ಮಾಜಿ ಸಚಿವ
ನಾಯಕರೇ ಸಿಎಂ ಬದಲು
ಚರ್ಚಿಸುತ್ತಿಲ್ಲ: ಪ್ರಿಯಾಂಕ್
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಕೇವಲ ಮಾಧ್ಯಮದಲ್ಲಿ ಚರ್ಚೆ ಆಗುತ್ತಿದೆಯೇ ಹೊರತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಎಐಸಿಸಿ ವರಿಷ್ಠ ಸುರ್ಜೇವಾಲಾ ಈ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಹೀಗಾಗಿ, ಸಿಎಂ ಬದಲಾವಣೆ ಚರ್ಚೆ ಅಪ್ರಸ್ತುತ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರೂ ಮೊನ್ನೆ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಬದಲಾವಣೆ ಮಾಡುವವರು ಹಾಗೂ ಬದಲಾವಣೆ ಆಗುವವರು ಚರ್ಚೆ ಮಾಡುತ್ತಿಲ್ಲ. ಮಾಧ್ಯಮದಲ್ಲಿ ಮಾತ್ರ ಈ ಬಗ್ಗೆ ಚರ್ಚೆ ಆಗುತ್ತಿದೆ. ಇವೆಲ್ಲ ಇದೀಗ ಅಪ್ರಸ್ತುತ ಎಂದರು.
ರಾಜ್ಯದ ನಾಯಕರು ದುರ್ಬಲರಾಗಿದ್ದಾರೆ. ಹೀಗಾಗಿ, ಸಿದ್ದು, ಡಿಕೆಶಿ ಭೇಟಿಗೆ ರಾಹುಲ್ ಗಾಂಧಿ ಅವಕಾಶ ನೀಡಿಲ್ಲ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಹಾಗೇನೂ ಇಲ್ಲ. ರಾಹುಲ್ ಗಾಂಧಿಯವರು ಬಿಹಾರ ಚುನಾವಣೆಯ ಸೀಟ್ ಹಂಚಿಕೆ ಮತ್ತಿತರ ಚರ್ಚೆಯಲ್ಲಿ ಭಾಗಿಯಾಗಿದ್ದರು. ಹೀಗಾಗಿ, ಅವರನ್ನು ಭೇಟಿ ಮಾಡಲು ಆಗಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಮಾತನಾಡಿ, ಕೆಪಿಸಿಸಿ ಅಧ್ಯಕ್ಷರ ಕುರಿತು ಯಾರೂ ದೂರು ನೀಡಿಲ್ಲ. ಈ ಖುರ್ಚಿ ಯಾವಾಗಲೂ ಕಾಯಂ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷರೇ ಹೇಳಿದ್ದಾರೆ. ಹೈಕಮಾಂಡ್ ನಿರ್ಧಾರ ಕೈಗೊಂಡಾಗ ನಾವು ಕೆಳಗಿಳಿಯುತ್ತೇವೆ ಎಂದಿದ್ದಾರೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ವರಿಷ್ಠರು ಹೇಳಿದಂತೆ ಎಲ್ಲರೂ ಕೇಳುತ್ತಾರೆ. ಸಮಯ ಬಂದಾಗ ವರಿಷ್ಠರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ರೀ ನೇಮ್ ಸರ್ಕಾರ:
ಇದೇ ವೇಳೆ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇದೊಂದು ರಿನೇಮ್ ಸರ್ಕಾರವಾಗಿದೆ. ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿ ಯುಪಿಎ ಸರ್ಕಾರಗಳು ಮಾಡಿದ ಯೋಜನೆಗಳ ಹೆಸರುಗಳನ್ನು ಬದಲಾವಣೆ ಮಾಡಿ (ರಿನೇಮ್ ಮಾಡಿ) ಹೊಸ ಯೋಜನೆಗಳನ್ನು ಮೋದಿ ಅವರು ಜಾರಿಗೆ ತಂದಿದ್ದಾರೆ ಎಂದು ಫೇಸ್‌ಬುಕ್ ಮತ್ತು ವಾಟ್ಸ್ ಆ್ಯಪ್‌ಗಳ ಮೂಲಕ ಬಿಜೆಪಿಯವರು ಸುಳ್ಳು ಹೇಳುತ್ತಾರೆ. ಬಿಜೆಪಿ ಹೊಸದಾಗಿ ಏನನ್ನೂ ತಂದಿಲ್ಲ. ಅಚ್ಚೇ ದಿನ್, ಆತ್ಮನಿರ್ಭರ ಭಾರತ್, ಅಮೃತಕಾಲ, ವಿಕಸಿತ ಭಾರತ, ವಿಶ್ವಗುರು ಇಂತಹ ಘೋಷಣೆಗಳ ಮೂಲಕ ಜನರನ್ನು ಪದೇ ಪದೇ ದಾರಿ ತಪ್ಪಿಸುತ್ತಿದ್ದಾರೆ. ಪಾಕಿಸ್ತಾನದೊಂದಿಗೆ ಯುದ್ಧ ನಡೆದ ವೇಳೆ ಯಾವ ದೇಶದವರೂ ಈ ವಿಶ್ವಗುರುವಿನ ನೆರವಿಗೆ ಬರಲಿಲ್ಲ, ಒಂದೂ ಮಾತನಾಡಲಿಲ್ಲ ಎಂದು ಮೋದಿ ಅವರ ಆಡಳಿತ ವೈಖರಿಯನ್ನು ಟೀಕಿಸಿದರು.
ಮುಸ್ಲಿಂ ರಾಷ್ಟ್ರ ಸೃಷ್ಟಿಗೆ ವೀರಸಾವರ್ಕರ್ ಕಾರಣ
ಬಿಜೆಪಿಯವರಿಗೆ ನನ್ನ ಮೇಲೆ ಅತೀವ ಪ್ರೀತಿ ಇದೆ ಎಂದು ವ್ಯಂಗ್ಯವಾಡಿದ ಖರ್ಗೆ, ವೀರ ಸಾವರ್ಕರ್ ಬಿರುದನ್ನು ಅವರಿಗೆ ಅವರೇ ಕೊಟ್ಟುಕೊಂಡಿದ್ದಾರೆ. ಸಾವರ್ಕರ್ ಅವರು ಬ್ರಿಟಿಷರಿಂದ ಹಲವಾರು ವರ್ಷಗಳ ಕಾಲ 60 ರುಪಾಯಿ ಪಿಂಚಣಿ ಪಡೆದು, 6 ಬಾರಿ ಕ್ಷಮಾಪಣಾ ಪತ್ರ ಬರೆದಿದ್ದರು. ಮುಸ್ಲಿಂ ರಾಷ್ಟ್ರ ಸೃಷ್ಟಿಗೂ ಇದೇ ವೀರಸಾವರ್ಕರ್ ಕಾರಣ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು. ಅಲ್ಲದೆ, ಬಿಜೆಪಿಯವರು ಸಂವಿಧಾನವನ್ನು ಸುಟ್ಟು ಹಾಕಿದ್ದಾರೆ. ಆರ್‌ಎಸ್‌ಎಸ್ 52 ವರ್ಷಗಳ ಕಾಲ ತಮ್ಮ ಕೇಂದ್ರ ಕಚೇರಿಯಲ್ಲಿ ದೇಶದ ಧ್ವಜವನ್ನು ಹಾರಿಸಿರಲಿಲ್ಲ. ಇದು ದೇಶವಿರೋಧಿಯಲ್ಲವೇ ಎಂದು ಸಚಿವ ಪ್ರಿಯಾಂಕ ಖರ್ಗೆಯವರು ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಹನಿಗೂಡಿದ್ರೆ ಹಳ್ಳ ಎಂಬಂತೆ ಎಲ್ಲ
ಸೇರಿ ಪಕ್ಷ ಕಟ್ಟಿದ್ದಾರೆ: ಎಚ್‌ಸಿಎಂ
ಹನಿ, ಹನಿ ಗೂಡಿದ್ರೆ ಹಳ್ಳ ಎಂಬಂತೆ ಎಲ್ಲರೂ ಸೇರಿ ಕಾಂಗ್ರೆಸ್ ಪಕ್ಷ ಕಟ್ಟಿದ್ದಾರೆ. ಪಕ್ಷ ಕಟ್ಟುವಲ್ಲಿ ಖರ್ಗೆ, ಪರಮೇಶ್ವರ್, ದಿನೇಶ್ ಗುಂಡೂರಾವ್, ಆರ್.ವಿ.ದೇಶಪಾಂಡೆ ಪಾತ್ರ ಇಲ್ವಾ? ಯಾರ್ ಯಾರಿಗೆ ಪಕ್ಷ ಜವಾಬ್ದಾರಿ ಕೊಟ್ಟಿದೆ ಆಗ ಕೆಲಸ ಮಾಡಿದ್ದಾರೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ। ಎಚ್.ಸಿ.ಮಹದೇವಪ್ಪ ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯಿಸಿ, ‘ಡಿ.ಕೆ.ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ. ನಾನೇ 5 ವರ್ಷ ಸಿಎಂ ಆಗಿರುತ್ತೇನೆ’. ಹೀಗಂತ ಸಿದ್ದರಾಮಯ್ಯನವರೇ ಹೇಳಿದ ಮೇಲೆ ಮುಗಿತಲ್ಲ ಬಿಡಿ. ಸಿದ್ದುವೇ 5 ವರ್ಷ ನಾನೇ ಸಿಎಂ ಆಗಿ ಇರುತ್ತೇನೆ ಎಂದಿರುವಾಗ ಯಾವುದೇ ಪ್ರಶ್ನೆ ಇಲ್ಲ ಎಂದು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದರು.
ಡಿಕೆಶಿ ಪಕ್ಷ ಕಟ್ಟಿದ್ದಾರೆ, ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಹನಿ ಹನಿ ಗೂಡಿದ್ರೆ ಹಳ್ಳ ಎಂಬಂತೆ ಎಲ್ಲ ಸೇರಿ ಪಕ್ಷ ಕಟ್ಟಿದ್ದಾರೆ. ಅದರಲ್ಲಿ ಡಿ.ಕೆ.ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅದನ್ನು ನಾವು ಇಲ್ಲ ಅನ್ನೋಕಾಗುತ್ತಾ? ಪಕ್ಷ ಕಟ್ಟುವಲ್ಲಿ ಖರ್ಗೆ, ಪರಮೇಶ್ವರ್, ದಿನೇಶ್ ಗುಂಡೂರಾವ್, ಆರ್.ವಿ.ದೇಶಪಾಂಡೆ ಪಾತ್ರ ಇಲ್ವಾ?. ಯಾರ್ ಯಾರಿಗೆ ಪಕ್ಷ ಜವಾಬ್ದಾರಿ ಕೊಟ್ಟಿದೆ ಆಗ ಕೆಲಸ ಮಾಡಿದ್ದಾರೆ. ಪ್ರಸ್ತಾಪಗಳು ಬೇಜಾನು ಬರುತ್ತವೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಹೈಕಮಾಂಡ್ ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ ಎಂದು ಅವರು ಹೇಳಿದರು.
ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ ಮೇಲೆ ಮುಗೀತು. ಸಂಕ್ರಾಂತಿಯಂತು ನಡೆದೇ ನಡೆಯುತ್ತದೆ. ಸಿಎಂ, ಸುರ್ಜೇವಾಲ ಸ್ಪಷ್ಟಪಡಿಸಿದ ಮೇಲೆ ಯಾಕೆ ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳ್ತೀರಿ ಎಂದು ಪ್ರಶ್ನಿಸಿದರು.