ಏಡ್ಸ್ ಸಾವಿನ ಸಂಖ್ಯೆ ಸೊನ್ನೆಗೆ ತನ್ನಿ: ನಲಿನ್ ಅತುಲ್

| Published : Sep 04 2024, 01:48 AM IST

ಸಾರಾಂಶ

ಎಚ್.ಐ.ವಿ ಬಾಧಿತರಿಗೆ ಆರೈಕೆ, ಬೆಂಬಲ ನೀಡುವುದು ಮತ್ತು ಸವಲತ್ತುಗಳನ್ನು ಒದಗಿಸುವುದರಲ್ಲಿ ಕೈಜೋಡಿಸಬೇಕು.

ಜಿಲ್ಲಾ ಏಡ್ಸ್ ನಿಯಂತ್ರಣ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಏಡ್ಸ್ ಸಾವನ್ನು ಸೊನ್ನೆಗೆ ತರಲು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಜಿಲ್ಲಾ ಏಡ್ಸ್ ನಿಯಂತ್ರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಚ್.ಐ.ವಿ ಹರಡುವಿಕೆ ನಿಯಂತ್ರಣಕ್ಕಾಗಿ ಕಾರ್ಯಕ್ರಮ ರೂಪಿಸಿ ಅಗತ್ಯ ಕ್ರಮ ಕ್ರಮಕ್ಕೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ತೊಡಗಿಸಿಕೊಳ್ಳಬೇಕು. ಎಚ್.ಐ.ವಿ ಬಾಧಿತರಿಗೆ ಆರೈಕೆ, ಬೆಂಬಲ ನೀಡುವುದು ಮತ್ತು ಸವಲತ್ತುಗಳನ್ನು ಒದಗಿಸುವುದರಲ್ಲಿ ಕೈಜೋಡಿಸಬೇಕು. ಎಚ್.ಐ.ವಿ ಬಗೆಗಿರುವ ಕಳಂಕ ಮತ್ತು ತಾರತಮ್ಯವನ್ನು ಹೋಗಲಾಡಿಸಲು ಇಲಾಖೆಯ ಅನುದಿನದ ಕಾರ್ಯಕ್ರಮಗಳ ಕುರಿತು ಅರಿವು ಮಾಡಿಸಬೇಕು. ಕಾರ್ಯವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ವಾಸವಿರುವ ಎಚ್.ಐ.ವಿ ಬಾಧಿತರು ಹಾಗೂ ಅವರ ಕುಟುಂಬದವರಿಗೆ ಸಹಕಾರವನ್ನು ನೀಡಿ ಎಚ್.ಐ.ವಿಗೆ ಸಂಬಂಧಿಸಿದಂತೆ ಜಿಲೆಯಲ್ಲಿ ಉಚಿತವಾಗಿ ಸಿಗುವ ಸೇವಾ ಸೌಲಭ್ಯಗಳು, ಆಪ್ತ ಸಮಾಲೋಚನೆ ಮತ್ತು ಪರೀಕ್ಷೆ, ಔಷಧೋಪಚಾರ, ಚಿಕಿತ್ಸೆ, ಸಿ.ಪಿ.ಟಿ ಔಷದೋಪಚಾರ ಹಾಗೂ ಇತರ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಶಶಿಧರ ಎ. ಮಾತನಾಡಿ, ಏಡ್ಸ್ ನಿಯಂತ್ರಣಕ್ಕೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯವಿದ್ದು, ಕಳೆದ 3 ವರ್ಷಗಳ ಅಂಕಿ-ಅಂಶಗಳನ್ನು ಗಮನಿಸಿದಾಗ 2021-22ರಲ್ಲಿ ಸಾಮಾನ್ಯ ಜನರಲ್ಲಿ 59495 ಜನರಿಗೆ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ ಶೇ. 0.52 ಪಾಸಿಟಿವಿಟಿ ಕಂಡುಬಂದಿದೆ. 39558 ಗರ್ಭಿಣಿಯರಿಗೆ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ ಶೇ 0.06 ಪಾಸಿಟಿವಿಟಿ ಕಂಡುಬಂದಿದೆ. 2022-23ರಲ್ಲಿ 70725 ಜನರಲ್ಲಿ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ ಶೇ. 0.51 ಪಾಸಿಟಿವಿಟಿ ಕಂಡುಬಂದಿದೆ. 40924 ಗರ್ಭಿಣಿಯರಲ್ಲಿ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ ಶೇ. 0.03 ಪಾಸಿಟಿವಿಟಿ ಕಂಡುಬಂದಿರುತ್ತದೆ. 2023-24 ರಲ್ಲಿ 84015 ಸಾಮಾನ್ಯ ಜನರಲ್ಲಿ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ ಶೇ. 0.38 ಪಾಸಿಟಿವಿಟಿ ಕಂಡುಬಂದಿದೆ. 36293 ಗರ್ಭಿಣಿಯರಿಗೆ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ ಶೇ. 0.05 ಪಾಸಿಟಿವಿಟಿ ಕಂಡುಬಂದಿದೆ. ಸೋಂಕು ಕಂಡುಬಂದ ಪ್ರತಿಯೊಬ್ಬರಿಗೂ ಉಚಿತ ಆಪ್ತಸಮಾಲೋಚನೆ ಹಾಗೂ ಎ.ಆರ್.ಟಿ. ಚಿಕಿತ್ಸೆ ಮತ್ತು ಗರ್ಭಿಣಿಯರಿಗೂ ಹಾಗೂ ಜನನವಾದ ಮಗುವಿನ 18 ತಿಂಗಳಿನವರೆಗೂ ಫಾಲೋಅಪ್ ಮಾಡಲಾಗಿದೆ ಎಂದು ತಿಳಿಸಿದರು.

ಏ.24 ರಿಂದ ಜು.24 ರವರೆಗೆ ಕೊಪ್ಪಳ ತಾಲೂಕಿನಲ್ಲಿ 10642 ಸಾಮಾನ್ಯ ಜನರ ಪರೀಕ್ಷೆ ಮಾಡಿದ್ದು, ಶೇ. 0.49 ಇರುತ್ತದೆ. 3602 ಗರ್ಭಿಣಿಯರ ಪರೀಕ್ಷೆ ಮಾಡಿದ್ದು, ಶೇ. 0.08 ಇರುತ್ತದೆ. ಗಂಗಾವತಿ ತಾಲೂಕಿನಲ್ಲಿ ಸಾಮಾನ್ಯ ಜನರ ಪರೀಕ್ಷೆ 6837 ಮಾಡಿದ್ದು, ಶೇ. 0.56 ಇರುತ್ತದೆ. ಗರ್ಭಿಣಿಯರ ಪರೀಕ್ಷೆ 2805 ಅರ್ಥಿಗಳಿಗೆ ಮಾಡಿದ್ದು, ಶೇ. 0.04 ಇರುತ್ತದೆ. ಇನ್ನುಳಿದಂತೆ, ಕುಷ್ಟಗಿ, ಯಲಬುರ್ಗಾ, ಕಾರಟಗಿ, ಕನಕಗಿರಿ, ಕುಕನೂರು ತಾಲೂಕಾಗಳಲ್ಲಿ ಶೇ. 0.00 ಇರುತ್ತದೆ. ಎಚ್.ಐ.ವಿ./ಏಡ್ಸ್ ಕಾಯ್ದೆ 2017 ರ ಪ್ರಕಾರ ಸೋಂಕಿತ ವ್ಯಕ್ತಿಯ ಅನುಮತಿ ಇಲ್ಲದೇ ಯಾರೊಬ್ಬರಿಗೂ ಮಾಹಿತಿ ನೀಡುವಂತಿಲ್ಲ. ಜಿಲ್ಲೆಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಕಬ್ಬಡಿ, ಮ್ಯಾರಾಥಾನ್, ಪ್ಲಾಷ್ ಮೋಬ್ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಸಭೆಯಲ್ಲಿ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜು, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ವಿ.ಪ್ರಕಾಶ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರವಿಂದ್ರನಾಥ, ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ. ನಂದಕುಮಾರ, ಜಿಲ್ಲಾ ಕ್ಷಯರೋಗ ನಿರ್ಮಾಲನಾಧಿಕಾರಿ ಡಾ. ಶಶಿಧರ್, ಜಿಲ್ಲಾ ಕುಷ್ಟರೋಗ ನಿರ್ಮೂಲಾನಾಧಿಕಾರಿ ಡಾ. ಪ್ರಕಾಶ ಎಚ್., ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ವೆಂಕಟೇಶ್ ಸೇರಿದಂತೆ ಜಿಲ್ಲಾಸ್ಪತ್ರೆಯ ಹಾಗೂ ತಾಲೂಕು ಆಸ್ಪತ್ರೆಗಳ ಮುಖ್ಯ ವೈದ್ಯಾಧಿಕಾರಿ ಹಾಗೂ ಮತ್ತಿತರರಿದ್ದರು.