ಸಾರಾಂಶ
ಬಾಲಕಾರ್ಮಿಕ ಯೋಜನೆಯ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆ
ಕನ್ನಡಪ್ರಭ ವಾರ್ತೆ ಕೊಪ್ಪಳಬಾಲ ಕಾರ್ಮಿಕರ ಪತ್ತೆಯ ನಂತರ ಅವರನ್ನು ಶಾಲೆಗೆ ಸೇರಿಸಿ, ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ತಹಸೀಲ್ದಾರ ವಿಠ್ಠಲ್ ಚೌಗಲಾ ತಿಳಿಸಿದರು.
ನಗರದ ತಹಸೀಲ್ದಾರ ಕಚೇರಿಯಲ್ಲಿ ಶನಿವಾರ ಬಾಲಕಾರ್ಮಿಕ ಯೋಜನೆಯ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆ ಹಾಗೂ PAN-INDIA Rescue & Rehabilitation Campaign of Child and Adolescent Labour ರಕ್ಷಣಾ ಕಾರ್ಯಾಚರಣೆ ಅಂಗವಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಿದ್ದು, ತಂಡದ ಎಲ್ಲ ಅಧಿಕಾರಿಗಳು ಪ್ರತಿ ತಿಂಗಳು ಒಂದು ಬಾಲಕಾರ್ಮಿಕ ದಾಳಿಗಳನ್ನು ಕೈಗೊಳ್ಳಬೇಕು. ಹೋಬಳಿವಾರು ತಂಡ ರಚಿಸಿ ಕಚೇರಿ ಆದೇಶ ಹೊರಡಿಸಬೇಕು. ಈ ಹಿಂದೆ ಪತ್ತೆ ಹಚ್ಚಲಾದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಮಕ್ಕಳ ಪ್ರಸ್ತುತ ಸ್ಥಿತಿ ವಿಚಾರಿಸಬೇಕು. ತಮ್ಮ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕಂಡು ಬಂದ ಬಾಲಕಾರ್ಮಿಕ/ಕಿಶೋರ ಕಾರ್ಮಿಕ ಮಕ್ಕಳ ದಾಖಲೆ ಪಡೆದುಕೊಂಡು, ಪರಿಶೀಲಿಸಿ ಸಮೀಪದ ಶಾಲೆಗಳಿಗೆ ದಾಖಲಿಸುವುದರ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದು ಅವರು ಹೇಳಿದರು.ಪುನರ್ವಸತಿ ಅವಶ್ಯಕತೆ ಇರುವ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸುವುದರ ಮೂಲಕ ಪುನರ್ವಸತಿ ಕಲ್ಪಿಸಬೇಕು. ಹೆಚ್ಚಿನ ಕಾನೂನು ಅರಿವು ನೆರವು ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಕಾರ್ಯಾಚರಣೆಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಕ್ರಮ ವಹಿಸಬೇಕು. ಇಲಾಖೆಯ ಕೆಲಸದ ಜೊತೆಗೆ ಬಾಲಕಾರ್ಮಿಕರನ್ನು ಗುರುತಿಸುವ ಕೆಲಸವೂ ಎಲ್ಲ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಮಾತನಾಡಿ, 14 ವರ್ಷದೊಳಗಿನ ಯಾವುದೇ ಮಕ್ಕಳು ಯಾವುದೇ ವೃತ್ತಿಯಲ್ಲಿ ಕೆಲಸ ನಿರ್ವಹಿಸುವುದು ಮತ್ತು 14ರಿಂದ 18 ವರ್ಷದೊಳಗಿನ ಮಕ್ಕಳು ಅಪಾಯಕಾರಿ ವೃತ್ತಿಯಲ್ಲಿ ಮತ್ತು ಪ್ರಕ್ರಿಯೆಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ನಿರಂತರ ಬಾಲಕಾರ್ಮಿಕರ ತಪಾಸಣೆ ನಡೆಸಿ ತಾಲೂಕು ಆಡಳಿತಕ್ಕೆ ನಿಯಮಿತವಾಗಿ ವರದಿ ಸಲ್ಲಿಸಬೇಕಾಗಿದ್ದು, ಈ ಕಾರ್ಯಕ್ಕೆ ಎಲ್ಲ ಅಧಿಕಾರಿಗಳ ಸಹಕಾರ ಅಗತ್ಯ ಎಂದರು.ಸಭೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ದುಂಡಪ್ಪ ತುರಾದಿ, ನಗರಸಭೆ ಆಯುಕ್ತರಾದ ಗಣಪತಿ ಪಾಟೀಲ್, ಕಾರ್ಮಿಕ ನಿರೀಕ್ಷಕ ಶಿವಶಂಕರ್ ತಳವಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ ಆರ್, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಮಾಂಜನೇಯ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ನಗರ ಠಾಣೆಯ ಎ.ಎಸ್.ಐ ಹಾಗೂ ಜಿಲ್ಲಾ ಮಕ್ಕಳ ವಿಶೇಷ ಪೋಲಿಸ್ ಘಟಕ ಸಿಬ್ಬಂದಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಸೇರಿದಂತೆ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.ವಿವಿಧ ವಾಣಿಜ್ಯ ಸಂಸ್ಥೆಗಳ ಮೇಲೆ ದಾಳಿ:
ಸಭೆಯ ನಂತರ ಎಲ್ಲ ಅಧಿಕಾರಿಗಳ ತಂಡವು ನಗರದ ವಿವಿಧ ವಾಣಿಜ್ಯ ಸಂಸ್ಥೆಗಳ ಮೇಲೆ ದಾಳಿ ಮಾಡಿ, ಪರಿಶೀಲಿಸಿದಾಗ ಕಿನ್ನಾಳ ರಸ್ತೆಯ ನ್ಯೂ ಇಂಡಿಯನ್ ಅಲ್ಯೂಮಿನಿಯಂ ಲರ್ಕ್ಸ್ ಸಂಸ್ಥೆಯಲ್ಲಿ 5 ಮಕ್ಕಳು ಹಾಗೂ ಕಲ್ಯಾಣ ನಗರದ ಫ್ಲೈವುಡ್ ಶಾಪ್ ಎಂಬ ಸಂಸ್ಥೆಯಲ್ಲಿ 1 ಮಗು ಸೇರಿದಂತೆ ಒಟ್ಟು 6 ಕಿಶೋರ ಕಾರ್ಮಿಕರನ್ನು ಪತ್ತೆ ಮಾಡಿದ್ದು, ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು. ಮಕ್ಕಳ ಕಲ್ಯಾಣ ಸಮಿತಿಯ ಸೂಚನೆಯ ಮೇರೆಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.