ಮಕ್ಕಳ ಪ್ರತಿಭೆ ಮುಖ್ಯವಾಹಿನಿಗೆ ತನ್ನಿ: ಸಂಗಮೇಶ ಬಬಲೇಶ್ವರ

| Published : Jan 17 2025, 12:48 AM IST

ಸಾರಾಂಶ

ಪ್ರತಿಭೆ ಪ್ರಯತ್ನಶೀಲರ ಸ್ವತ್ತು. ಇಂದಿನ ಮಕ್ಕಳೇ ಈ ದೇಶದ ಭರವಸೆಯ ಬೆಳಕುಗಳು. ಹಾಗಾಗಿ ನಾಡಿನ ಮಕ್ಕಳ ಪ್ರತಿಭೆಯನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು.

ಧಾರವಾಡ:

ಮಕ್ಕಳ ದಿನಾಚರಣೆ ಪ್ರಯುಕ್ತ ಕರ್ನಾಟಕ ಬಾಲವಿಕಾಸ ಅಕಾಡೆಮಿಯು ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಗಾಗಿ ಜವಾಹರಲಾಲ ನೆಹರು ಜೀವನ ಸಾಧನೆ ಕುರಿತು ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರಬಂಧ, ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಭಾಷಣ ಸ್ಪರ್ಧೆಯ ಪ್ರಾಥಮಿಕ ಶಾಲೆಯ ವಿಭಾಗದಲ್ಲಿ ಬೆಂಗಳೂರಿನ ತನುಷಾ ಪ್ರಥಮ, ಉತ್ತರ ಕನ್ನಡದ ಐಶ್ಚರ್ಯ ಶೇಠ್‌ ದ್ವಿತೀಯ, ಬಾಗಲಕೋಟೆಯ ಸೌಮ್ಯ ಹಿರೇಮಠ ಹಾಗೂ ಗದಗನ ತನುಶ್ರೀ ಮರಾಠೆ ತೃತೀಯ ಸ್ಥಾನ ಪಡೆದರು. ಪ್ರೌಢಶಾಲಾ ವಿಭಾಗದಲ್ಲಿ ಉಡುಪಿಯ ಬ್ರೋವಿನ್‌ ನಗೇರ್‌ ಪ್ರಥಮ, ಉತ್ತರ ಕನ್ನಡದ ಸಿಂಚನಾ ಭಟ್‌ ದ್ವಿತೀಯ, ಚಾಮರಾಜನಗರದ ಹರ್ಷೋಲ್ಲಾಸ ತೃತೀಯ ಸ್ಥಾನ ಪಡೆದರು. ಇನ್ನು, ಪ್ರಬಂಧ ಸ್ಪರ್ಧೆಯ ಪ್ರಾಥಮಿಕ ಶಾಲೆಯಲ್ಲಿ ವಿಜಯಪುರದ ಪೂರ್ಣಿಮಾ ಕಂಬಾಗಿ, ಬೆಂಗಳೂರಿನ ನೇಹಾ ಹಾಗೂ ತುಮಕೂರಿನ ಕಾವ್ಯಶ್ರೀ ತೃತೀಯ ಸ್ಥಾನ ಪಡೆದರು.

ಪ್ರೌಢಶಾಲಾ ವಿಭಾಗದಲ್ಲಿ ಚಾಮರಾಜನಗರದ ಸಮೀಕ್ಷಾ ಎಸ್‌., ಗದಗನ ದಿವ್ಯಾ ಲಕ್ಕುಂಡಿ ಹಾಗೂ ಹಾವೇರಿಯ ಕಾವ್ಯಾದಾನ ತೃತೀಯ ಸ್ಥಾನ ಪಡೆದರು. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ₹ 25 ಸಾವಿರ, ದ್ವಿತೀಯ ₹ 12500 ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗೆ ₹ 7500 ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಯಿತು.

ಬಹುಮಾನ ವಿತರಿಸಿ ಮಾತನಾಡಿದ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಶಿಕ್ಷಕರ ಹಾಗೂ ಪಾಲಕರ ಮಾರ್ಗದರ್ಶನದಲ್ಲಿ ಮಕ್ಕಳು ಕಠಿಣ ಪರಿಶ್ರಮ ಮತ್ತು ಶಿಸ್ತಿನಿಂದ ಶ್ರಮವಹಿಸಬೇಕು. ಪ್ರತಿಭೆ ಪ್ರಯತ್ನಶೀಲರ ಸ್ವತ್ತು. ಇಂದಿನ ಮಕ್ಕಳೇ ಈ ದೇಶದ ಭರವಸೆಯ ಬೆಳಕುಗಳು. ಹಾಗಾಗಿ ನಾಡಿನ ಮಕ್ಕಳ ಪ್ರತಿಭೆಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ಗುರುತರ ಜವಾಬ್ದಾರಿ ನಮ್ಮೆಲ್ಲರು ಎಂದರು.

ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಈ ರೀತಿಯ ಸ್ಪರ್ಧೆಯನ್ನು ಜಿಲ್ಲಾಮಟ್ಟದಲ್ಲಿ ಏರ್ಪಡಿಸಿ ಪ್ರತಿ ಜಿಲ್ಲೆಯಿಂದ ವಿಜೇತರಾಗಿದ್ದ ರಾಜ್ಯದ ಎಲ್ಲ ಜಿಲ್ಲೆಗಳಿಂದ ಅಂತಿಮ ಸುತ್ತಿನ ರಾಜ್ಯಮಟ್ಟದ ಸ್ಪರ್ಧೆಯನ್ನು ಅಕಾಡೆಮಿಯ ಸಭಾವನದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.

ಅಕಾಡೆಮಿ ಯೋಜನಾಧಿಕಾರಿ ಭಾರತಿ ಶೆಟ್ಟರ್‌ ಮಾತನಾಡಿ, ದೇಶದ ಉಜ್ವಲ ಭವಿಷ್ಯ ಚಿಕ್ಕ ಮಕ್ಕಳ ಪುಟ್ಟ ಕಾಲುಗಳ ಮೇಲೆ ಮುನ್ನುಗ್ಗುತ್ತದೆ. ಮಕ್ಕಳ ಮೇಲೆ ಪ್ರೀತಿ, ಕಾಳಜಿ ವಹಿಸಲಾರದ ಯಾವ ದೇಶವೂ ಪ್ರಗತಿ ಸಾಧಿಸದು ಎಂದು ನೆಹರು ಹೇಳಿದ್ದಾರೆ ಎಂದರು.

ಇದೇ ವೇಳೆ ಧಾರವಾಡ ಜಿಲ್ಲೆಗೆ ಕೃಷಿಕ ಸಮಾಜದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡ ಮಲ್ಲನಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಬಸವರಾಜ ಮರಿತಮ್ಮನವರ, ವಿ.ಎಸ್‌. ರೇಷ್ಮಿ ಆಗಮಿಸಿದ್ದರು.