ಹೆಚ್ಚಿನ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿ: ಶಾಸಕ ಯಾವಗಲ್‌

| Published : Aug 21 2024, 12:40 AM IST

ಸಾರಾಂಶ

ಸದ್ಯ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇದೆ. ಜನರು ಕೆಲಸ, ಕಾರ್ಯಗಳಿಗಾಗಿ ನಮ್ಮ ಬಳಿ ಬರುತ್ತಾರೆ. ಜನಸೇವೆ ಮಾಡುವುದು ಅನಿವಾರ್ಯ ಎಂದು ಮಾಜಿ ಸಚಿವ ಬಿ.ಆರ್‌.ಯಾವಗಲ್‌ ಹೇಳಿದರು.

ನರಗುಂದ: ಶಾಸಕ ಸಿ.ಸಿ. ಪಾಟೀಲರು ಜಿಲ್ಲೆ ಮತ್ತು ರಾಜ್ಯದಲ್ಲಿ ಎಲ್ಲ ಪಕ್ಷಗಳ ಜೊತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದು, ಅದನ್ನು ಬಳಸಿ ಹೆಚ್ಚಿನ ಅನುದಾನ ತಂದು ನರಗುಂದ ಕ್ಷೇತ್ರದ ಅಭಿವೃದ್ಧಿ ಮಾಡಲಿ ಎಂದು ಮಾಜಿ ಸಚಿವ ಬಿ.ಆರ್‌.ಯಾವಗಲ್‌ ಕಿವಿಮಾತು ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇದೆ. ಜನರು ಕೆಲಸ, ಕಾರ್ಯಗಳಿಗಾಗಿ ನಮ್ಮ ಬಳಿ ಬರುತ್ತಾರೆ. ಜನಸೇವೆ ಮಾಡುವುದು ಅನಿವಾರ್ಯ. ಅವರ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ ಎಂದರು.

ಮಾಜಿ ಶಾಸಕರು, ಅವರ ಮಕ್ಕಳು ತಾವೇ ಅಘೋಷಿತ ಶಾಸಕರಾಗಿ ಕೆಲಸಕಾರ್ಯ ಮಾಡುತ್ತಿದ್ದಾರೆ ಎಂದು ಶಾಸಕ ಸಿ.ಸಿ.ಪಾಟೀಲ ಆರೋಪಿಸಿದ್ದಕ್ಕೆ ಪ್ರತಿಕ್ರೀಯಿಸಿದ ಅವರು, ನೀವು ಸಚಿವರಾಗಿದ್ದ ಸಂದರ್ಭದಲ್ಲಿ ನಿಮ್ಮ ಮಕ್ಕಳು, ಪಿಎಗಳು ಏನೇನು ಮಾಡಿದ್ದಾರೆ ಎನ್ನುವುದನ್ನು ನೆನಪಿಸಿಕೊಳ್ಳಿ ಎಂದರು.

ನಾನು ಶಾಸಕನಾಗಿದ್ದಾಗ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ₹110 ಕೋಟಿ ಅನುದಾನದಲ್ಲಿ 2 ಸಾವಿರ ಮನೆ ನಿರ್ಮಾಣಕ್ಕೆ ಅನುಮತಿ ತಂದಿದ್ದೆ, ಆಗ ಆರಂಭಿಸಿದ ಪುರಸಭೆ ಕಟ್ಟಡ ಕಾಮಗಾರಿ ಇನ್ನೂ ಮುಗಿಯುತ್ತಿಲ್ಲ. ಜಿಟಿಟಿಸಿ ಕಾಲೇಜು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ನೀರಾವರಿ ಕಾಲುವೆ ರೀ ಮಾಡ್ಲಿಂಗ್ ಕಾರ್ಯ ಆರಂಭಿಸಿದ್ದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ತಾಲೂಕಾಧ್ಯಕ್ಷ ಪ್ರವೀಣ ಯಾವಗಲ್‌, ಗುರುಪಾದಪ್ಪ ಕುರಹಟ್ಟಿ, ಬಿ.ಎನ್. ಮಾನೆ, ಎ.ಬಿ. ಅರಹುಣಶಿ, ಎಂ.ಎಸ್. ಪಾಟೀಲ, ವೀರೇಶ ಚುಳಕಿ, ವಿಜಯ ಚಲವಾದಿ, ಶಂಕರಗೌಡ ಪಾಟೀಲ, ಶಿವನಗೌಡ ಹೆಬ್ಬಳ್ಳಿ, ಪ್ರಕಾಶ ಹಡಗಲಿ, ಶಿವಾಜಿ ಭೂಸಾರೆ, ಶಂಕರ ಕಾಂಬಳೆ ಸೇರಿದಂತೆ ಮುಂತಾದವರು ಇದ್ದರು.