ಮಕ್ಕಳ ಅಂತರ್ಗತ ಸಾಮರ್ಥ್ಯ ಹೊರ ತೆಗೆಯಿರಿ: ಡಾ.ಎಚ್.ವಿ.ವಾಮದೇವಪ್ಪ

| Published : May 22 2024, 12:55 AM IST

ಮಕ್ಕಳ ಅಂತರ್ಗತ ಸಾಮರ್ಥ್ಯ ಹೊರ ತೆಗೆಯಿರಿ: ಡಾ.ಎಚ್.ವಿ.ವಾಮದೇವಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಸಿರಿಗೆರೆಯಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ 2 ದಿನಗಳ ಕಾರ್ಯಾಗಾರ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಮಕ್ಕಳಲ್ಲಿ ಅಂತರ್ಗತವಾಗಿರುವ ಸಾಮರ್ಥ್ಯಗಳನ್ನು ಶಿಕ್ಷಕರು ಕೌಶಲ್ಯಗಳನ್ನು ಬಳೆಸಿ ಹೊರ ತೆಗೆಯಬೇಕು ಎಂದು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ.ಎಚ್.ವಿ.ವಾಮದೇವಪ್ಪ ತಿಳಿಸಿದರು.

ಸಿರಿಗೆರೆಯಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಎರಡು ದಿನಗಳ ಆಯೋಜಿಸಿದ್ದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಕರು ತಮ್ಮ ವೃತ್ತಿಗೆ ಬೇಕಾದ ಬದ್ಧತೆ, ಜ್ಞಾನ, ಉತ್ತಮ ವ್ಯಕ್ತಿತ್ವ ಜೊತೆಗೆ ಬೋಧಿಸುವ ವಿಚಾರದಲ್ಲಿ ಪ್ರಾವಿಣ್ಯ ಸಂಪಾದಿಸಬೇಕು. ಜೊತೆಗೆ ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವನ್ನು ಬೆಳೆಸಬೇಕು. ಆಗ ಶಿಕ್ಷಣಕ್ಕೆ ಮಹತ್ವ ಬರುತ್ತದೆ ಎಂದರು.

ಜ್ಞಾನವೆಂಬುದು ಬಹು ದೊಡ್ಡ ಸಾಗರ. ಸಾಗರದೊಳಗೆ ಇರುವ ನಮ್ಮ ಕಲಿಕೆಗೆ ಕೊನೆಯಿಲ್ಲ. ಕಲಿಕೆ ಎಂಬುದು ನಿರಂತರವಾದುದು. ಇದನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರು ನಿತ್ಯವೂ ಹೊಸತನದಿಂದ ಬೋಧನೆಗೆ ಸಜ್ಜಾಗಬೇಕು ಎಂದರು.

ಪರಿಣಾಮ ಬೋಧನೆಗೆ ಚಟುವಟಿಕೆಗಳು ಬಹಳ ಮುಖ್ಯ. ತರಗತಿಯಲ್ಲಿ ಶಿಕ್ಷಕರು ಮಾತು ಕಡಿಮೆ ಮಾಡಿ, ವಿದ್ಯಾರ್ಥಿಗಳೇ ಹೆಚ್ಚು ಮಾತನಾಡುವಂತಾಗಬೇಕು. ಮಕ್ಕಳು ಹೆಚ್ಚು ಮಾತನಾಡುವಂತಾದರೆ ಇಂದ್ರಿಯಗಳ ಬಳಕೆಯಾಗುತ್ತದೆ. ಶಿಕ್ಷಕ ತನ್ನ ಬೌದ್ಧಿಕ ಸಾಮರ್ಥ್ಯದ ಮೂಲಕ ಕಲಿಕೆಯಲ್ಲಿ ಹಿಂದುಳಿದ ಮಗುವನ್ನು ಜಾಣನನ್ನಾಗಿ ಮಾಡಬಹುದು. ಬೋಧನೆ ಮಗುವಿನ ಹೃದಯ ತಟ್ಟುವಂತಿರಬೇಕು ಎಂದು ವಿದ್ಯಾಸಂಸ್ಥೆಯ ವಿಶೇಷಾಧಿಕಾರಿ ವೀರಣ್ಣ ಜತ್ತಿ ಹೇಳಿದರು.

ವೇದಿಕೆಯಲ್ಲಿ ವಿಷಯ ಸಂಚಾಲಕರಾದ ನಾಗರಾಜ ಸಿರಿಗೆರೆ, ಎಂ.ಎಲ್.ಸುದರ್ಶನ್ ಎಚ್.ಬಿ.ನಾಗರಾಜಯ್ಯ, ಸಯ್ಯದ್ ಸಾದಿಕ್ ಬಾಷ, ಎಚ್.ಎಸ್. ದ್ಯಾಮೇಶ್, ಡಾ.ಎಚ್.ವಿ.ವಿಜಯಕುಮಾರ್ ಉಪಸ್ಥಿತರಿದ್ದರು.

ಎರಡು ದಿನಗಳ ಕಾರ್ಯಾಗಾರದಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ , ಸಮಾಜ ವಿಜ್ಞಾನ ಮತ್ತು ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಹ್ವಾನಿಸಿದ್ದ ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರ ನಡೆಸಿಕೊಟ್ಟರು. ರಾಜ್ಯದ ೧೪ ಜಿಲ್ಲೆಗಳಲ್ಲಿರುವ ತರಳಬಾಳು ವಿದ್ಯಾಸಂಸ್ಥೆಯ ಪ್ರೌಢಶಾಲಾ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು.