ಸಾರಾಂಶ
ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಗರ್ಭಾವಸ್ಥೆಯಲ್ಲಿರುವ ತಾಯಂದಿರಿಗೆ ಆಸ್ಪತ್ರೆ ಹಾಗೂ ಅಂಗನವಾಡಿ ಕೇಂದ್ರಗಳ ಮೂಲಕ ಆಹಾರ ಮತ್ತು ಚುಚ್ಚುಮದ್ದು ಹಾಕಿಸಿದರೂ ಸಹಿತ ಕೆಲ ಮಕ್ಕಳು ಬೆಳವಣಿಗೆಯಲ್ಲಿ ಕುಂಠಿತವಾಗುತ್ತಿದೆ.
ಕುಷ್ಟಗಿ:
ಆಶಾ ಕಾರ್ಯಕರ್ತೆಯರು ಕುಂಠಿತ ಬೆಳವಣಿಗೆ ಮಕ್ಕಳನ್ನು ಸರ್ವೇ ಮಾಡುವ ಮೂಲಕ ಪತ್ತೆಹಚ್ಚಿ ಉಚಿತ ಚಿಕಿತ್ಸೆ ಕೊಡಿಸಬೇಕೆಂದು ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ ಹೇಳಿದರು.ತಾಲೂಕಿನ ದೋಟಿಹಾಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ, ಆಶಾದೀಪ ಅಂಗವಿಕಲರ ಸರ್ವ ಅಭಿವೃದ್ಧಿ ಸೇವಾ ಸಂಸ್ಥೆ, ದೈಹಿಕ ಅಂಗವಿಕಲರ ಸಂಸ್ಥೆ ಸಹಯೋಗದಲ್ಲಿ ನಡೆದ ಮಕ್ಕಳ ಕುಂಠಿತ ಬೆಳವಣಿಗೆ ಶೀಘ್ರ ಪತ್ತೆ ಹಚ್ಚುವಿಕೆ, ಆರಂಭಿಕ ಶಿಕ್ಷಣ ಕಾರ್ಯಕ್ರಮದ ಕುರಿತು ಆಶಾ ಕಾರ್ಯಕರ್ತೆಯರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪಿಡಿಒ ನಾಗರತ್ನಾ ಮಾತನಾಡಿ, ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಗರ್ಭಾವಸ್ಥೆಯಲ್ಲಿರುವ ತಾಯಂದಿರಿಗೆ ಆಸ್ಪತ್ರೆ ಹಾಗೂ ಅಂಗನವಾಡಿ ಕೇಂದ್ರಗಳ ಮೂಲಕ ಆಹಾರ ಮತ್ತು ಚುಚ್ಚುಮದ್ದು ಹಾಕಿಸಿದರೂ ಸಹಿತ ಕೆಲ ಮಕ್ಕಳು ಬೆಳವಣಿಗೆಯಲ್ಲಿ ಕುಂಠಿತವಾಗುತ್ತಿದೆ. ಅಂತಹ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲು ಪಿಜಿಯೋತೆರಫಿ ಕೇಂದ್ರ ತೆರೆಯಲಾಗಿದೆ ಎಮದರು.ಆಶಾದೀಪ ಸೇವಾ ಸಂಸ್ಥೆಯ ಸಂಸ್ಥಾಪಕ ರಘು ಹುಬ್ಬಳ್ಳಿ ಮಾತನಾಡಿ, ಎರಡು ವರ್ಷದಿಂದ ಮಕ್ಕಳಿಗೆ ಸಂಸ್ಥೆ ಉಚಿತ ಚಿಕಿತ್ಸೆ ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಈ ವೇಳೆ ಗ್ರಾಪಂ ಸದಸ್ಯರಾದ ಶಿವನಗೌಡ ಪಾಟೀಲ, ರುಕ್ಮುದ್ದೀನಸಾಬ್ ನೀಲಗಾರ, ಲಕ್ಷ್ಮೀಬಾಯಿ ಸಕ್ರಿ, ಷರೀಫಾಬಿ ಯರಡೋಣಿ, ಹಿರಿಯ ಆರೋಗ್ಯ ಮೇಲ್ವಿಚಾರಕ ರವೀಂದ್ರ ನಂದಿಹಾಳ, ಸ್ಮೀತಾ ಗೌಡರ, ವಿಆರ್‌ಡಬ್ಲ್ಯೂಗಳಾದ ಶರಣಮ್ಮ ಮಡಿವಾಳರ, ಅಮರಮ್ಮ ಜಾವೂರು, ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.