ಹಕ್ಕುಪತ್ರ ಸಮಾವೇಶಕ್ಕೆ ಅರ್ಹರನ್ನು ಸುರಕ್ಷಿತವಾಗಿ ಕರೆತನ್ನಿ: ಸಚಿವೆ ಲಕ್ಷ್ಮೀ

| Published : May 17 2025, 01:41 AM IST

ಹಕ್ಕುಪತ್ರ ಸಮಾವೇಶಕ್ಕೆ ಅರ್ಹರನ್ನು ಸುರಕ್ಷಿತವಾಗಿ ಕರೆತನ್ನಿ: ಸಚಿವೆ ಲಕ್ಷ್ಮೀ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಪೇಟೆಯಲ್ಲಿ ಮೇ 20ರಂದು ನಡೆಯಲಿರುವ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಸಮಾವೇಶಕ್ಕೆ ಅಧಿಕಾರಿಗಳಿಗೆ ತಾಲೂಕಿನ ಅರ್ಹರನ್ನು ಸುರಕ್ಷಿತವಾಗಿ ಕರೆದುಕೊಂಡು ಬರಬೇಕು. ಈ ನಿಟ್ಟಿನಲ್ಲಿ ವಿಶೇಷವಾಗಿ ಬಸ್‌ ಚಾಲಕ ಹಾಗೂ ನಿರ್ವಾಹಕರು ಸಹ ಗಮನಹರಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಾಕೀತು ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಹರಿಹರ ಹೊಸಪೇಟೆಯಲ್ಲಿ ಮೇ 20ರಂದು ನಡೆಯಲಿರುವ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಸಮಾವೇಶಕ್ಕೆ ಅಧಿಕಾರಿಗಳಿಗೆ ತಾಲೂಕಿನ ಅರ್ಹರನ್ನು ಸುರಕ್ಷಿತವಾಗಿ ಕರೆದುಕೊಂಡು ಬರಬೇಕು. ಈ ನಿಟ್ಟಿನಲ್ಲಿ ವಿಶೇಷವಾಗಿ ಬಸ್‌ ಚಾಲಕ ಹಾಗೂ ನಿರ್ವಾಹಕರು ಸಹ ಗಮನಹರಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಾಕೀತು ಮಾಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಹಕ್ಕುಪತ್ರ ವಿತರಣೆ ಸಮಾವೇಶ ಪೂರ್ವ ಸಿದ್ಧತೆ ಹಿನ್ನೆಲೆ ತಾಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರ 2 ವರ್ಷ ಪೂರೈಸಿದ ಸಂಭ್ರಮದ ಹಿನ್ನೆಲೆ ನಮ್ಮ ಗ್ಯಾರಂಟಿ ಹಾಗೂ ಇತರೆ ಯೋಜನೆಗಳ ಫಲಾನುಭವಿಗಳೊಂದಿಗೆ ಹಕ್ಕುಪತ್ರ ವಿತರಿಸುವ ಮೂಲಕ ಒಂದು ಐತಿಹಾಸಿಕ ಕಾರ್ಯಕ್ರಮ ನಮ್ಮ ಸರ್ಕಾರ ಹಮ್ಮಿಕೊಂಡಿದೆ ಎಂದರು.

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಅಧಿಕಾರಿಗಳು ಮೈಮರೆಯದೇ ಹೆಚ್ಚಿನ ಕಾಳಜಿಯೊಂದಿಗೆ ಫಲಾನುಭವಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಬೇಕು. ಸರ್ಕಾರದಲ್ಲಿ ಪ್ರಭಾವಿ ಮಂತ್ರಿಗಳಾದ ತಾವುಗಳು ನಮ್ಮ ಕ್ಷೇತ್ರದ ಅಭಿವೃದ್ಧಿಗೂ ಕೈ ಜೋಡಿಸುವಂತೆ ಮನವಿ ಮಾಡಿದರು.

ತಹಸೀಲ್ದಾರ್ ಕೆ.ಎಂ. ಗುರುಬಸವರಾಜ್ ಮಾತನಾಡಿ, ತಾಲೂಕಿನ 23 ಗ್ರಾ.ಪಂ.ಗಳಿಂದ ತಲಾ 50ರಂತೆ 1107 ಫಲಾನುಭವಿಗಳನ್ನು ಗುರುತಿಸಲಾಗಿದೆ. 22 ಬಸ್‌ಗಳಲ್ಲಿ ಹೊಸಪೇಟೆ ಸಮಾವೇಶಕ್ಕೆ ಕರೆದುಕೊಂಡು ಹೋಗಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಸೂಚನೆಯಂತೆ ತಾಲೂಕುಮಟ್ಟದ ಅಧಿಕಾರಿಗಳನ್ನು ಪ್ರತಿ ಗ್ರಾ.ಪಂ.ಗಳಿಗೆ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಅಗತ್ಯ ಸೌಕರ್ಯ ನೀಡುವಂತೆ ಸೂಚನೆ ನೀಡಲಾಗಿದೆ ಎಂದರು.

ಈ ಸಂದರ್ಭ ತಾಪಂ ಇಒ ಎಸ್.ಪಿ. ಸುಮಲತಾ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎನ್.ಎಚ್. ಶ್ರೀನಿವಾಸ್, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

- - -

-16ಎಚ್‍ಆರ್‍ಆರ್ 03: