ಕನ್ನಡಪ್ರಭ ವಾರ್ತೆ ಬೆಳಗಾವಿ ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಯಾಪದಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸುವ ಸದುದ್ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಮಾನ್-ಧನ್ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು ಜಿಲ್ಲೆಯ ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸಿ ಈ ಯೋಜನೆ ವ್ಯಾಪ್ತಿಗೊಳಪಡಿಸಲು ಮುಂದಾಗುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಯಾಪದಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸುವ ಸದುದ್ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಮಾನ್-ಧನ್ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು ಜಿಲ್ಲೆಯ ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸಿ ಈ ಯೋಜನೆ ವ್ಯಾಪ್ತಿಗೊಳಪಡಿಸಲು ಮುಂದಾಗುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾನ್-ಧನ್ ಯೋಜನೆಯಡಿ ಅಸಂಘಟಿತ ಕಾರ್ಮಿಕರ ನೋಂದಣಿ ಕುರಿತ ವಿಶೇಷ ನೋಂದಣಿ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಬೆಳಗಾವಿ ಜಿಲ್ಲೆ ಅತೀ ದೊಡ್ಡ ಜಿಲ್ಲೆಯಾಗಿದ್ದು ಜಿಲ್ಲೆಯಲ್ಲಿನ ಕೃಷಿ ಕಾರ್ಮಿಕರು, ಮನರೇಗಾ ಕೂಲಿ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು, ಅಕ್ಷರ ದಾಸೋಹ ಅಡುಗೆ ಸಹಾಯಕರು, ಬೀದಿ ಬದಿ ವ್ಯಾಪಾರಸ್ಥರನ್ನು, ಸಿಬ್ಬಂದಿಗಳನ್ನು, ಜಿಲ್ಲೆಯ ಕೌಶಲ್ಯಾಧಾರಿತ ಕಾರ್ಮಿಕರನ್ನು ಗುರುತಿಸಿ ನೋಂದಣಿ ಮಾಡಿಸುವುದರ ಮೂಲಕ ಈ ಯೋಜನೆಯ ವ್ಯಾಪ್ತಿಯೊಳಗೆ ಒಳಪಡುವಂತೆ ಪ್ರೋತ್ಸಹಿಸಬೇಕು ಎಂದು ಹೇಳಿದರು.
ಗ್ರಾಮೀಣ, ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಯೋಜನೆಯ ಕುರಿತು ಪರಿಣಾಮಕಾರಿಯಾಗಿ ಪ್ರಚಾರ ಮಾಡಬೇಕು. ವಿವಿಧ ಇಲಾಖೆ ಅಧಿಕಾರಿಗಳು, ಕಾರ್ಮಿಕ ಸಂಘಟನೆಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವುದರ ಮೂಲಕ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಸಂಘಟಿತ ವಲಯದ ಕಾರ್ಮಿಕರನ್ನು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯಡಿ ನೋಂದಾಯಿಸಲು ಕ್ರಮ ವಹಿಸುವಂತೆ ತಿಳಿಸಿದರು.ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ.ನಾಗರಾಜ ಮಾತನಾಡಿ, ಜಿಲ್ಲೆಯ ಅಸಂಘಟಿತ ಕಾರ್ಮಿಕರ ನೊಂದಣಿಗಾಗಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಮಾಸಿಕ ₹ 3000 ನಿಶ್ಚಿತ ಪಿಂಚಣಿ ಒದಗಿಸುವ ಈ ಯೋಜನೆಗೆ 18 ರಿಂದ 40 ವರ್ಷದೊಳಗಿನ ಅಸಂಘಟಿತ ಕಾರ್ಮಿಕರು ಸಿಎಸ್‌ಸಿ ಸೆಂಟರಗಳಲ್ಲಿ ಆಧಾರ್ ಕಾರ್ಡ್ ಹಾಗೂ ಆರಂಭಿಕ ಶುಲ್ಕ ಪಾವತಿಸುವುದರ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಬಸವರಾಜ ಹೆಗನಾಯಕ, ಜಂಟಿ ಕೃಷಿ ನಿರ್ದೆಶಕ ಕೊಳೆಕರ, ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಮಲ್ಲಿಕಾರ್ಜುನ ಜೋಗುರ, ರಾಜೇಶ ಜಾಧವ, ಕಾರ್ಮಿಕ ನೀರಿಕ್ಷಕರು ಸೇರಿ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.ಯಾರು ಅರ್ಹರು:ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಗೃಹ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಬಿಸಿಯೂಟ ತಯಾರಕರು, ಹಮಾಲಿಗಳು, ಇಟ್ಟಿಗೆ ಕಾರ್ಮಿಕರ, ಭಟ್ಟಿ ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆಗೆಲಸದವರು, ಅಗಸರು, ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಚರ್ಮೋದ್ಯಮ ಕಾರ್ಮಿಕರು, ದ್ವನಿ ಮತ್ತು ದೃಶ್ಯ ಕಾರ್ಮಿಕರು, ಮೆಕಾನಿಕ್‌ಗಳು, ಕೈಮಗ್ಗ ಕಾರ್ಮಿಕರು ನೋಂದಾಯಿಸಿಕೊಳ್ಳುಬಹುದು.ಅರ್ಹತೆಗಳು:
ಅಸಂಘಟಿತ ವಲಯದ ಕಾರ್ಮಿಕರಾಗಿದ್ದು 18 ರಿಂದ 40 ವರ್ಷದೊಳಗಿರಬೇಕು. ಮಾಸಿಕ ಆದಾಯ ₹ 15 ಸಾವಿರಕ್ಕಿಂತ ಕಡಿಮೆ ಇರಬೇಕು. ಆದಾಯ ತೆರಿಗೆ, ಇಎಸ್‌ಐ, ಪಿಎಫ್, ಎನ್‌ಪಿಎಸ್ ಯೋಜನೆ ವ್ಯಾಪ್ತಿಗೆ ಒಳಪಡಬಾರದು. ಅಸಂಘಟಿತ ಕಾರ್ಮಿಕರು ಸಾಮಾನ್ಯ ಸೇವಾ ಕೇಂದ್ರ(ಸಿಎಸ್‌ಸಿ)ಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಸಹಾಯ ಕೇಂದ್ರಗಳು: 1800-267-6888,ಎಲ್.ಆಯ್.ಸಿ.ವೆಬ್‌ಸೈಟ್ ವಿಳಾಸ: *ತಿತಿತಿ.ಟಛಿಟಿಜಚಿ.ಟಿ*, ಸಮೀಪದ ಸಿಎಸ್‌ಸಿ ಸೆಂಟರ್‌ಗಳ ಮಾಹಿತಿಗೆ *ಣಣಠಿ://ಟಛಿಚಿಣಡಿ.ಛಿಛಿಛಿಟಜ.ಟಿ*, ಕಾರ್ಮಿಕರ ಸಹಾಯವಾಣಿ:15521