ಜನರ ಸಮಸ್ಯೆಗಳನ್ನು ಅವರ ಬಳಿಯೇ ತೆರಳಿ ಆಲಿಸಿ, ಸಂಬಂಧಿಸಿದ ಇಲಾಖೆಗಳ ಸಹಕಾರದೊಂದಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಬೀದರ್ ದಕ್ಷಿಣ ಕ್ಷೇತ್ರದ ಮನ್ನಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಶನಿವಾರ ಪ್ರಜಾ ಸೇವಾ ಆಂದೋಲನದ ಅಂಗವಾಗಿ ಜನ ಸ್ಪಂದನ ಕಾರ್ಯಕ್ರಮ ಹಮ್ಮಿ ಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್ ಜನರ ಸಮಸ್ಯೆಗಳನ್ನು ಅವರ ಬಳಿಯೇ ತೆರಳಿ ಆಲಿಸಿ, ಸಂಬಂಧಿಸಿದ ಇಲಾಖೆಗಳ ಸಹಕಾರದೊಂದಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಬೀದರ್ ದಕ್ಷಿಣ ಕ್ಷೇತ್ರದ ಮನ್ನಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಶನಿವಾರ ಪ್ರಜಾ ಸೇವಾ ಆಂದೋಲನದ ಅಂಗವಾಗಿ ಜನ ಸ್ಪಂದನ ಕಾರ್ಯಕ್ರಮ ಹಮ್ಮಿ ಕೊಳ್ಳಲಾಯಿತು.ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮನ್ನಳ್ಳಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾರ್ವಜನಿಕರು ತಮ್ಮ ವೈಯಕ್ತಿಕ ಹಾಗೂ ಗ್ರಾಮಗಳ ಸಾಮೂಹಿಕ ಸಮಸ್ಯೆಗಳನ್ನು ಶಾಸಕರ ಮುಂದೆ ನೇರವಾಗಿ ಅರುಹಿದರು.ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ವಿದ್ಯುತ್, ಬೀದಿ ದೀಪ, ಕಂದಾಯ, ಪಿಂಚಣಿ, ಪಡಿತರ ಚೀಟಿ, ಕೃಷಿ, ಆರೋಗ್ಯ, ಶಿಕ್ಷಣ, ಹಾಗೂ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಹಲವು ಅಹವಾಲುಗಳನ್ನು ಸಾರ್ವಜನಿಕರು ಸಲ್ಲಿಸಿದರು. ಜನರ ಸಮಸ್ಯೆಗಳಿಗೆ ಕೇವಲ ಭರವಸೆ ನೀಡುವುದಲ್ಲ, ಅವುಗಳ ಪರಿಹಾರಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳುವುದು ಜನಪ್ರತಿನಿಧಿಯ ಕರ್ತವ್ಯ. ಜನಸಾಮಾನ್ಯರು ವಿವಿಧ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ತಪ್ಪಿಸಿ, ಆಡಳಿತ ವನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಜನ ಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಶಾಸಕ ಬೆಲ್ದಾಳೆ ಹೇಳಿದರು.

ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆಗಳ ವಾಸ್ತವಿಕ ಸ್ಥಿತಿಯನ್ನು ಅರಿತು ಪರಿಹಾರ ಕಂಡುಕೊಳ್ಳಬೇಕು. ಇಲಾಖೆಗಳ ನಡುವೆ ಸಮನ್ವಯದಿಂದ ಕಾರ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆ ಒದಗಿಸಬೇಕು ಎಂದು ಶಾಸಕರು ಸೂಚಿಸಿದರು.214 ದೂರುಗಳ ಪೈಕಿ 183 ಕಂದಾಯ 10 ಗ್ರಾಮಪಂಚಾಯಿತಿ ದೂರುಗಳು ಸ್ಥಳದಲ್ಲೇ ಇತ್ಯರ್ಥ ಪಡಿಸಲಾಯಿತು. ಉಳಿದ ದೂರುಗಳನ್ನು ಸಂಬಂಧಿಸಿದ ಇಲಾಖೆಗಳ ಮೂಲಕ ಪರಿಶೀಲಿಸಿ ಶೀಘ್ರವಾಗಿ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ರವಿಕುಮಾರ ದಾಮಾ, “ಜನ ಸ್ಪಂದನ ಕಾರ್ಯಕ್ರಮದ ಮೂಲಕ ಸಾರ್ವಜನಿಕರು ತಮ್ಮ ಸಮಸ್ಯೆ ಹಾಗೂ ಕುಂದುಕೊರತೆಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತರಲು ಉತ್ತಮ ಅವಕಾಶ ದೊರೆತಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬಂದ ಅಹವಾಲುಗಳನ್ನು ಪರಿಶೀಲಿಸಿ, ನಿಯಮಾನುಸಾರ ಶೀಘ್ರವಾಗಿ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.ತಾ.ಪಂ ಅಧಿಕಾರಿ ಮಾಣಿಕರಾವ್ ಪಾಟೀಲ್ ಮಾತನಾಡಿ, ಜನ ಸ್ಪಂದನ ಕಾರ್ಯಕ್ರಮದ ಮೂಲಕ ಗ್ರಾಮೀಣ ಭಾಗದ ಜನರಿಗೆ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳು ಸಮರ್ಪವಾಗಿ ತಲುಪುವಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲಿದ್ದಾರೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.--ಚಿತ್ರ 12ಬಿಡಿಆರ್52:ಬೀದರ್ ದಕ್ಷಿಣ ಕ್ಷೇತ್ರದ ಮನ್ನಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಶನಿವಾರ ಪ್ರಜಾ ಸೇವಾ ಆಂದೋಲನದ ಅಂಗವಾಗಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಸಾರ್ವಜನಿಕರ ಅಹವಾಲು ಕೇಳಿದರು.--