ಇಲ್ಲಿನ ಯಕ್ಷಗಾನ ಕಲಾರಂಗವು ವೃತ್ತಿ ಮೇಳದ ಯುವ ಕಲಾವಿದರಿಗೆ ಆಯೋಜಿಸಿದ ನಾಲ್ಕು ದಿನಗಳ ಯಕ್ಷಗಾನ ಮಾರ್ಗದರ್ಶಿ ಶಿಬಿರವು ಮಂಗಳವಾರ ಕಲಾ ರಂಗದ ಐವೈಸಿ ಸಭಾಭವನದಲ್ಲಿ ಜರುಗಿತು.
ಉಡುಪಿ: ಇಲ್ಲಿನ ಯಕ್ಷಗಾನ ಕಲಾರಂಗವು ವೃತ್ತಿ ಮೇಳದ ಯುವ ಕಲಾವಿದರಿಗೆ ಆಯೋಜಿಸಿದ ನಾಲ್ಕು ದಿನಗಳ ಯಕ್ಷಗಾನ ಮಾರ್ಗದರ್ಶಿ ಶಿಬಿರವು ಮಂಗಳವಾರ ಕಲಾ ರಂಗದ ಐವೈಸಿ ಸಭಾಭವನದಲ್ಲಿ ಜರುಗಿತು.
ಶಿಬಿರವನ್ನು ಉದ್ಘಾಟಿಸಿದ ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಮಾತನಾಡಿ, ಯಕ್ಷಗಾನದಂತಹ ಶೈಲೀಕೃತ ಕಲೆ ಪರಂಪರೆಯೊ೦ದಿಗೆ ಔಚಿತ್ಯವರಿತು ಹೊಸತನ್ನು ಸೇರಿಸಿಕೊಳ್ಳತ್ತಾ ಬೆಳೆಯಬೇಕಾಗಿದೆ. ಪ್ರಜ್ಞಾವಂತ ಕಲಾವಿದ ಇದನ್ನು ಮಾಡಲು ಸಾಧ್ಯ. ಇದಕ್ಕೆ ಇಂತಹ ಶಿಬಿರಗಳು ಪೂರಕವಾಗುತ್ತವೆ. ಯಕ್ಷಗಾನ ಕಲಾರಂಗ ಕಲಾವಿದರ ಕ್ಷೇಮ ಚಿಂತನೆಯೊ೦ದಿಗೆ ಕಲೆಯನ್ನು ಬೆಳೆಸುವ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ ಎಂದು ಹೇಳಿದರು.ಅಭ್ಯಾಗತರಾಗಿ ಭಾಗವಹಿಸಿದ್ದ ಬಹುಶ್ರುತ ವಿದ್ವಾಂಸ ದಿವಾಕರ ಹೆಗಡೆ ಕೆರೆಹೊಂಡ ಅವರು, ಯಕ್ಷಗಾನದಲ್ಲಿ ಹಲವು ಸಾಧ್ಯತೆಗಳಿವೆ, ಅಧ್ಯಯನಶೀಲ ಕಲಾವಿದರು ತಮ್ಮ ಪ್ರತಿಭೆಯಿಂದ ಹೊಸ ಆಯಾಮ ನಿರ್ಮಿಸಲು ಸಾಧ್ಯ. ಆಹಾರ್ಯ, ಆಂಗಿಕ, ವಾಚಿಕ, ಸಾತ್ವಿಕ ಈ ನಾಲ್ಕೂ ಅಂಶಗಳನ್ನು ಔಚಿತ್ಯವರಿತು ಅಭಿವ್ಯಕ್ತಿಸಿದಾಗ ಯಕ್ಷಗಾನದ ಸೌಂದರ್ಯ ಹೆಚ್ಚುತ್ತದೆ ಎಂದರು.
ವೇದಿಕೆಯಲ್ಲಿ ಹಿರಿಯ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ, ಎ.ಪಿ. ಪಾಠಕ್, ಸಂಸ್ಥೆಯ ಸದಸ್ಯರಾದ ಪ್ರೊ. ಕೆ. ಸದಾಶಿವ ರಾವ್, ಪ್ರೊ. ಎಂ.ಎಲ್. ಸಾಮಗ ಉಪಸ್ಥಿತರಿದ್ದರು.ಸಂಸ್ಥೆಯ ಅಧ್ಯಕ್ಷರೂ, ಶಿಬಿರದ ಪ್ರಾಯೋಜಕರೂ ಆದ ಎಂ. ಗಂಗಾಧರ ರಾವ್ ಶಿಬಿರ ಆಯೋಜಿಸಿದ ಉದ್ದೇಶವನ್ನು ತಿಳಿಸಿ ಎಲ್ಲರನ್ನು ಸ್ವಾಗತಿಸಿದರು. ಶಿಬಿರದ ನಿರ್ದೇಶಕ ಪವನ್ ಕಿರಣ್ಕೆರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ಸಂಯೋಜಿಸಿದರು. ಜತೆ ಕಾರ್ಯದರ್ಶಿ ವಿದ್ಯಾಪ್ರಸಾದ್ ವಂದಿಸಿದರು. ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು.