ಕೋಟಿ ಕೋಟಿ ಹಣ ತಂದು ಕ್ಷೇತ್ರ ಅಭಿವೃದ್ಧಿ

| Published : Apr 10 2025, 01:03 AM IST

ಸಾರಾಂಶ

ಹೊಳಲ್ಕೆರೆ ತಾಲೂಕಿನ ತೊಡರನಾಳ್ ಗ್ರಾಮದಲ್ಲಿ ನೂತನ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ ನೆರವೇರಿಸಿದರು.

14 ಕಿಮೀ ಉದ್ದದ ನೂತನ ರಸ್ತೆ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಹೇಳಿಕೆಕನ್ನಡಪ್ರಭ ವಾರ್ತೆ ಹೊಳಲ್ಕೆರೆ:

ಪ್ರತಿಯೊಂದು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದಲ್ಲಿ ಹೋರಾಟ ಮಾಡಿ ಮುತುವರ್ಜಿ ವಹಿಸಿ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.ತಾಲೂಕಿನ ತೊಡರನಹಾಳ್ ಗ್ರಾಮದಲ್ಲಿ 31.14 ಕೋಟಿ ರು.ವೆಚ್ಚದಲ್ಲಿ ಮತಿಘಟ್ಟದಿಂದ ಚಿತ್ರದುರ್ಗ ತಾಲೂಕು ಗಡಿವರೆಗೂ 14 ಕಿಮೀ ಉದ್ದದ ನೂತನ ರಸ್ತೆ ಕಾಮಗಾರಿಗೆ ಬುಧವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.

ಸಿರಿಗೆರೆಗೆ ಹೋಗುವ ರಸ್ತೆಗೆ 30 ಕೋಟಿ ರು, ಮಲಸಿಂಗನಹಳ್ಳಿಗೆ 15 ಕೋಟಿ ರು. ಗಿಲಿಕೇನಹಳ್ಳಿಗೆ 19 ಕೋಟಿ ರು. ಕೊಟ್ಟಿದ್ದೇನೆ. 493 ಹಳ್ಳಿಗಳಲ್ಲಿ ಯಾರಿಂದ ಏನನ್ನು ಹೇಳಿಸಿಕೊಳ್ಳದೆ ಎಲ್ಲೆಲ್ಲಿ ಏನೇನು ಸಮಸ್ಯೆಗಳಿದೆ ಎನ್ನುವುದನ್ನು ಹುಡುಕಿ ಕೆಲಸ ಮಾಡುತ್ತಿದ್ದೇನೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಹೆಣಗಾಡುತ್ತಿರುವ ಕಷ್ಟದ ಪರಿಸ್ಥಿತಿಯಲ್ಲಿ ಕೋಟಿ ಕೋಟಿ ಹಣ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಖರ್ಚು ಮಾಡುತ್ತಿದ್ದೇನೆ. ನಾನು ಶಾಸಕನಾಗಿ ಬರುವ ಮುಂಚೆ ಹೊಳಲ್ಕೆರೆ ಕ್ಷೇತ್ರ ಹೇಗಿತ್ತೆನ್ನುವುದನ್ನು ಒಂದು ಕ್ಷಣ ಆಲೋಚಿಸಿ ಎಂದು ಜನತೆಗೆ ತಿಳಿಸಿದರು.

ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ 500 ಕೋಟಿ ರು. ವೆಚ್ಚದಲ್ಲಿ ನಾಲ್ಕುನೂರು ಕೆವಿ ವಿದ್ಯುತ್ ಸ್ಥಾವರ ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಎಲ್ಲಿಯೂ ಇಷ್ಟು ದೊಡ್ಡ ವಿದ್ಯುತ್ ಪವರ್ ಸ್ಟೇಷನ್ ಇಲ್ಲ. ಅರಿಶಿನಘಟ್ಟದಲ್ಲಿ ವಿದ್ಯುತ್ ಸ್ಥಾವರವಾಗಿದೆ. ತೇಕಲವಟ್ಟಿ, ತಾಳ್ಯ, ಎನ್.ಜಿ.ಹಳ್ಳಿ, ಈಚಘಟ್ಟ, ಮಲ್ಲಾಡಿಹಳ್ಳಿಯಲ್ಲಿಯೂ ವಿದ್ಯುತ್ ಪವರ್ ಸ್ಟೇಷನ್ ನಿರ್ಮಿಸಿ ರೈತರಿಗೆ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಕಾಂತಮ್ಮ, ಸದಸ್ಯರಾದ ಕೃಷ್ಣಪ್ಪ, ಕಮಲ, ಪರಮೇಶ್ವರಪ್ಪ, ವೀರಣ್ಣ, ರಾಜಪ್ಪ, ಶರಣಪ್ಪ ಹಾಗೂ ಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.