ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಹೇಮಾವತಿ ಎಡದಂಡೆ ನಾಲೆ ಕಾಮಗಾರಿಯಲ್ಲಿ ಆಗಿರುವ ಅವ್ಯವಹಾರ ಕುರಿತು ಶಾಸಕ ಎಚ್.ಟಿ.ಮಂಜು ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಿ ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದರು.ಅಧಿವೇಶನದ ಚರ್ಚೆ ವೇಳೆ ಮಾತನಾಡಿದ ಶಾಸಕ ಎಚ್.ಟಿ.ಮಂಜು, 2018ರಲ್ಲಿ 72.267 ಕಿ.ಮೀ ನಿಂದ 214 ಕಿ.ಮೀ ವರೆಗಿನ ಆರಂಭವಾದ ಎಡದಂಡೆ ನಾಲೆ ಕಾಮಗಾರಿಗೆ ₹883 ಕೋಟಿ ಮೊತ್ತ ನಿಗದಿ ಮಾಡಲಾಗಿತ್ತು.
ಕಟ್ಟಿಮನಿ ಬಿನ್. ಯಮುನಪ್ಪ ಎಂಬ ಗುತ್ತಿಗೆದಾರ ಈ ಕಾಮಗಾರಿಯಲ್ಲಿ ಸಾಕಷ್ಟು ಅವ್ಯವಹಾರ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ನಾನೂ ಸಹ ಸ್ಥಳ ಪರಿಶೀಲನೆ ಮಾಡಿದ್ದೇನೆ. ತಾಲೂಕಿನ ಭೂಪಟದಲ್ಲಿಯೇ ಇಲ್ಲದ ಚೌಡನಹಳ್ಳಿ ಗ್ರಾಮದಿಂದ ಮಣ್ಣನ್ನು ತೆಗೆಯಲಾಗಿದೆ ಎಂದು ತೋರಿಸಲಾಗಿದೆ. ಮಣ್ಣನ್ನು ತೆಗೆಯದೇ ಹೊಸ ಮಣ್ಣನ್ನು ಹಾಕದೇ ₹250 ಕೋಟಿ ಬಿಲ್ ಮಾಡಿಕೊಳ್ಳಲಾಗಿದೆ.ಕಾಮಗಾರಿಗೆ ಟಿ.ನರಸೀಪುರ ಸಮೀಪದಿಂದ ಮರಳನ್ನು ಸಾಗಾಣಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೆ, ತಲಕಾಡು ಸಮೀಪ ಟಿ.ನರಸೀಪುರ ಸುತ್ತಮುತ್ತಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮರಳು ಗಣಿಗಾರಿಕೆಗೆ ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ. 2.4 ಸಾವಿರ ಕ್ಯುಬಿಕ್ ಮೀಟರ್ ಮರಳನ್ನು ಹಾಕಲಾಗಿದೆ ಎಂದು ತೋರಿಸಲಾಗಿದೆ. ಅಲ್ಲದೇ, ಕಾಲುವೆ ಮೇಲೆ ರಕ್ಷಣಾ ಕಲ್ಲುಗಳನ್ನು ಅಳವಡಿಸುವ ಕಾಮಗಾರಿಯಲ್ಲಿ ರಕ್ಷಣಾ ಕಲ್ಲುಗಳನ್ನು ಹಾಕದೇ ₹5 ಕೋಟಿ ಬಿಲ್ ಮಾಡಿಕೊಳ್ಳಲಾಗಿದೆ.
ಕಳೆದ ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿದ ನಂತರ ನಾನೇ ಸ್ವತಃ ರಕ್ಷಣಾ ಕಲ್ಲುಗಳ ಅಳವಡಿಕೆ ಬಗ್ಗೆ ಸ್ಥಳ ಪರಿಶೀಲನೆ ಮಾಡಿದ್ದೇನೆ. ಒಂದೇ ಒಂದು ಕಡೆಗಳಲ್ಲೂ ಅಳವಡಿಸಿಲ್ಲ. ಈ ಕಾಮಗಾರಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ಬಗ್ಗೆ ಉನ್ನತ ತನಿಖೆ ನಡೆಸಿ ಸಂಬಂಧಿಸಿದ ಅಧಿಕಾರಿಗಳ ಹಾಗೂ ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಲಾಗಿದೆ. ವಿಚಾರಣೆ ಬಾಕಿ ಇದೆ. ಅಲ್ಲದೇ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ವಿಚಾರಣಾ ಆಯೋಗಕ್ಕೂ ಸಹ ಪೂರಕ ದಾಖಲಾತಿಗಳೊಂದಿಗೆ ದೂರನ್ನು ಸಲ್ಲಿಸಲಾಗಿದೆ. ಅಲ್ಲಿಂದಲೂ ವರದಿಯ ನಿರೀಕ್ಷೆಯಲ್ಲಿದೆ.
ಇದಕ್ಕೆ ಉತ್ತರಿಸಿದ ಡಿಸಿಎಂ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಕಾಮಗಾರಿಗೆ ಸಂಬಂಧಿಸಿದಂತೆ ಒಂದು ತಂಡ ರಚಿಸಿ ಕಳುಹಿಸಿ ಕೊಡುತ್ತೇನೆ. ಏನಾದರೂ ಸಮಸ್ಯೆ ಇದ್ದರೆ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದರು.ಆದರೂ ಪಟ್ಟು ಬಿಡದ ಶಾಸಕ ಎಚ್.ಟಿ.ಮಂಜು, ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿಯೂ ಇದೇ ರೀತಿ ಹಾರಿಕೆ ಉತ್ತರ ನೀಡಲಾಗಿದೆ. ಇದಕ್ಕೆ ಸೂಕ್ತ ತನಿಖೆ ನಡೆಸಿ ಸತ್ಯ ಹೊರಬರಲು ಸಭಾಧ್ಯಕ್ಷರು ಕ್ರಮ ಕೈಗೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ 400 ರಿಂದ 500 ಪುಟಗಳ ದಾಖಲೆ ನೀಡಲು ಸಿದ್ಧನಿದ್ದೇನೆ ಎಂದು ಮನವಿ ಮಾಡಿದರು.
ಕಾಮಗಾರಿ ಅಕ್ರಮದ ಬಗ್ಗೆ ಸದನದಲ್ಲಿ ಶಾಸಕ ಎಚ್.ಟಿ.ಮಂಜು ಚರ್ಚಿಸಿರುವುದು ಶ್ಲಾಘನೀಯ. ಹೇಮಾವತಿ ಎಡದಂಡೆ ನಾಲಾ ಕಾಮಗಾರಿಯ ಬಾರಿ ಪ್ರಮಾಣದ ಅಕ್ರಮ ಬಯಲಿಗೆಳೆಯಲು ನಾಲ್ಕು ವರ್ಷದಿಂದ ನಿರಂತರ ಹೋರಾಟ ನಡೆಸಿಕೊಂಡು ಬಂದು ಹಗರಣವನ್ನು ಜೀವಂತವಾಗಿರಿಸಿದ್ದೇವೆ.- ನಾಗೇಗೌಡ, ರೈತಮುಖಂಡ- ಜಯಣ್ಣ ಸಾಮಾಜಿಕ ಹೋರಾಟಗಾರ