ಜೀವನಕ್ರಮ, ಆಚರಣೆ, ಸಂಪ್ರದಾಯ ಹಾಗೂ ಜನಪದ ಕಥನ ದಾಖಲಿಸಿರುವುದು ವಿರಳ.

ಬಳ್ಳಾರಿ: ಬಂಜಾರ ಬುಡಕಟ್ಟು ಜನಾಂಗದ ಸಾಂಸ್ಕೃತಿಕ ಶ್ರೀಮಂತಿಕೆ, ಜೀವನಾನುಭವ ಹಾಗೂ ಭಾವನೆ ಕೃತಿಯ ರೂಪದಲ್ಲಿ ದಾಖಲಿಸಿ ಮುಂದಿನ ಪೀಳಿಗೆಗೆ ಪರಿಚಯಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಬಳ್ಳಾರಿ–ಕಲಬುರಗಿ ವಿಭಾಗದ ಆಯುಕ್ತ ಡಾ.ಕುಮಾರ ನಾಯ್ಕ ಹೇಳಿದರು.

ನಗರದ ಶ್ರೀಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ರಂಗ ಜಂಗಮ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ), ಡಿ.ಕಗ್ಗಲ್ ಹಾಗೂ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರೊ. ಶ್ರೀಶಿರಗಾನಹಳ್ಳಿ ಶಾಂತನಾಯ್ಕ ಅವರ ‘ಬಂಜಾರ ಬುಡಕಟ್ಟು ಜನಪದ ಕಥೆಗಳು ಕೃತಿ ಲೋಕಾರ್ಪಣೆ ಹಾಗೂ ಶಿಕ್ಷಕರ ದಿನಾಚರಣೆ 2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಂಜಾರ ಸಮುದಾಯ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು, ಅದರ ಜೀವನಕ್ರಮ, ಆಚರಣೆ, ಸಂಪ್ರದಾಯ ಹಾಗೂ ಜನಪದ ಕಥನ ದಾಖಲಿಸಿರುವುದು ವಿರಳ. ಇಂತಹ ಕೃತಿ ಹೊರಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್, ಬುಡಕಟ್ಟು ಸಮುದಾಯದ ಸಂಸ್ಕೃತಿ ಅಕ್ಷರ ರೂಪದಲ್ಲಿ ದಾಖಲಿಸಿ ಮುಂದಿನ ಪೀಳಿಗೆ ಹಾಗೂ ಓದುಗರಿಗೆ ತಲುಪಿಸುತ್ತಿರುವುದು ಸಂತಸದ ಸಂಗತಿ. ನಾವೆಲ್ಲರೂ ಒಗ್ಗಟ್ಟಿನಿಂದ ಬದುಕಬೇಕು ಎಂಬ ಸಂದೇಶ ಕೃತಿ ಸಾರುತ್ತದೆ ಎಂದರು.

ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಡಾ. ಎಚ್.ವೀರಭದ್ರಪ್ಪ,ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಕಥೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಲೇಖಕ ಡಾ.ಸಿದ್ದರಾಮ ಕಲ್ಮಠ ಕೃತಿ ಕುರಿತು ಮಾತನಾಡಿದರು. ಡಾ. ದಸ್ತಗಿರ್ ಸಾಬ್ ದಿನ್ನಿ, ಡಾ. ಜಯದೇವ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಇದೇ ವೇಳೆ ಲೇಖಕ ಶಾಂತನಾಯ್ಕ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ರಂಗಗೀತೆ, ಜಾನಪದ ಗೀತೆ ಹಾಗೂ ಸುಗಮ ಸಂಗೀತ ಕಾರ್ಯಕ್ರಮಗಳು ನಡೆದವು. ಸಿಂಧೂ ಅಂಬಿಕ ಮತ್ತು ತಂಡ ಪ್ರಾರ್ಥಿಸಿದರು.

ಡಾ. ಅಣ್ಣಾಜಿ ಕೃಷ್ಣ ರೆಡ್ಡಿ ಸ್ವಾಗತಿಸಿದರು. ಆಲಂಭಾಷ ನಿರೂಪಿಸಿದರು.