ಕನ್ನಡಪ್ರಭ ವಾರ್ತೆ ಕಾರವಾರ

ಅಂಕೋಲಾದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರಾಜ್ಯದ ಗೃಹ ಸಚಿವರ ಹೆಸರನ್ನು ಸುಖಾಸುಮ್ಮನೆ ಎಳೆದು ತರುವುದು ಮತ್ತು ಅವರು ಸ್ಥಳಕ್ಕೆ ಬರಲೇಬೇಕೆಂದು ಹಠ ಹಿಡಿಯುವುದು ಸರಿಯಲ್ಲ. ತಮಗೆ ಅನ್ಯಾಯವಾಗಿದ್ದರೆ ದಾಖಲೆಗಳೊಂದಿಗೆ ಕಾನೂನು ಚೌಕಟ್ಟಿನಲ್ಲಿ ಹೋರಾಟ ನಡೆಸಲಿ ಎಂದು ಕೆಪಿಸಿಸಿ ಜಿಲ್ಲಾ ಸಂಯೋಜಕ ಭಾಸ್ಕರ ಪಟಗಾರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಬಿಜೆಪಿ ಮುಖಂಡ ನಾಗರಾಜ ನಾಯಕ ಅವರು ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ವಿರುದ್ಧ ನಡೆಸುತ್ತಿರುವ ಹೋರಾಟದ ಹಾದಿಯನ್ನು ತೀವ್ರವಾಗಿ ಖಂಡಿಸಿದರು.

ಗೃಹ ಸಚಿವರು ಒಬ್ಬ ಮುತ್ಸದ್ದಿ ರಾಜಕಾರಣಿ. ಅವರು ಜಿಲ್ಲೆಗೆ ಬಂದಾಗ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡುವುದು ಸೌಜನ್ಯದ ಕ್ರಮ. ಹಾಗೆ ಭೇಟಿ ನೀಡಿದ ವ್ಯಕ್ತಿಯಿಂದ ಏನಾದರೂ ತಪ್ಪಾಗಿದ್ದರೆ ಅದಕ್ಕೆ ಸಚಿವರನ್ನು ಹೊಣೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಹೋರಾಟ ನಡೆಸಲು ಎಲ್ಲರಿಗೂ ಹಕ್ಕಿದೆ, ಆದರೆ ಸಚಿವರ ಹೆಸರು ಹಾಳು ಮಾಡುವ ಪ್ರಯತ್ನ ಖಂಡನೀಯ ಎಂದು ಅವರು ಕಿಡಿಕಾರಿದರು.

ಗೋಪಾಲಕೃಷ್ಣ ನಾಯಕರ ಸೂಚನೆಯಂತೆ ಪೊಲೀಸರು ನಡೆಯುತ್ತಿದ್ದಾರೆ ಎನ್ನುವುದಕ್ಕೆ ಇವರ ಬಳಿ ಏನಾದರೂ ಸಾಕ್ಷ್ಯ ಇದೆಯೇ? ಪೊಲೀಸರ ಬಗ್ಗೆ ಇಷ್ಟು ಹಗುರವಾಗಿ ಮಾತನಾಡುವುದು ಸರಿಯಲ್ಲ. ನಿಜವಾಗಿಯೂ ಅನ್ಯಾಯವಾಗಿದ್ದರೆ ಸಿಐಡಿ ಅಥವಾ ಸಿಬಿಐ ತನಿಖೆಗೆ ಆಗ್ರಹಿಸಿ ಕಾನೂನು ಸಮರ ನಡೆಸಲಿ. ಅದನ್ನು ಬಿಟ್ಟು ಗೃಹ ಸಚಿವರು ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎನ್ನುವುದು ಯಾವ ರೀತಿಯ ಹೋರಾಟ? ಎಂದು ಭಾಸ್ಕರ ಪಟಗಾರ ಪ್ರಶ್ನಿಸಿದರು.


ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಅಂದು ನಾಗರಾಜ ನಾಯಕರು ಯಾಕೆ ಮೌನವಾಗಿದ್ದರು ಎಂದು ಪ್ರಶ್ನಿಸಿದ ಪಟಗಾರ, ಎಲ್ಲಾ ಪಕ್ಷಗಳಲ್ಲೂ ಅಕ್ರಮದಲ್ಲಿ ತೊಡಗಿರುವವರು ಇರುತ್ತಾರೆ. ವೈಯಕ್ತಿಕ ದ್ವೇಷದ ಬದಲು ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ನಿರುದ್ಯೋಗ, ರಸ್ತೆ ಅವ್ಯವಸ್ಥೆಗಳ ವಿರುದ್ಧ ಹೋರಾಟ ನಡೆಸಿದರೆ ನಾವೂ ನಿಮ್ಮೊಂದಿಗೆ ಕೈಜೋಡಿಸುತ್ತೇವೆ ಎಂದು ಸವಾಲು ಹಾಕಿದರು.